ಬೆಂಗಳೂರು, ಡಿ.4-ಉಪಚುನಾವಣೆಯಲ್ಲಿ ಸೋಲುವ ಭೀತಿಯಿಂದಾಗಿ ವಿಚಲಿತವಾಗಿರುವ ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿ ಮನೆ ಮೇಲೆ ಐಟಿ ದಾಳಿ ಮಾಡಿಸಿದೆ ಎಂದು ಕೆಪಿಸಿಸಿ ಆಕ್ರೋಶ ವ್ಯಕ್ತಪಡಿಸಿದೆ.
ಈ ಬಗ್ಗೆ ಟ್ವೀಟರ್ನಲ್ಲಿ ಪ್ರತಿಕ್ರಿಯಿಸಿದ ಕರ್ನಾಟಕ ಕಾಂಗ್ರೆಸ್ ಘಟಕ, ಬಿಜೆಪಿಯ ಮುಂಚೂಣಿ ಘಟಕಗಳು ಕೆಲಸ ಮಾಡುವ ರೀತಿ ಆದಾಯ ತೆರಿಗೆ ಇಲಾಖೆ ಕೆಲಸ ಮಾಡುತ್ತಿದೆ. ಚುನಾವಣೆ ಸಮಯದಲ್ಲಿ ಕೇವಲ ಕಾಂಗ್ರೆಸ್ ನಾಯಕರ ಮನೆ ಮೇಲಷ್ಟೆ ದಾಳಿ ಮಾಡುತ್ತಿದೆ. ಬಿಜೆಪಿಯ ಯಾವ ನಾಯಕರ ಮನೆ ಮೇಲೂ ದಾಳಿ ಮಾಡುವುದೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ನಾಳೆ ನಡೆಯುವ ಮತದಾನದಲ್ಲಿ ಜನ ಬಿಜೆಪಿಗೆ ವಿರುದ್ಧವಾಗಿ ಮತ ಚಲಾಯಿಸಲಿದ್ದಾರೆ. ಅನರ್ಹರು ಸೋಲುವುದು ಖಚಿತ. ಕರ್ನಾಟಕ ಗೆಲ್ಲಲಿದೆ. ಬಿಜೆಪಿ ಸರ್ಕಾರ ಬೀಳಲಿದೆ. ಈ ಸತ್ಯ ಮನವರಿಕೆಯಾಗಿದ್ದರಿಂದ ವಿಚಲಿತವಾಗಿರುವ ಬಿಜೆಪಿ ಐಟಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದೆ.