![nirbhaya-case](http://kannada.vartamitra.com/wp-content/uploads/2019/12/nirbhaya-case-678x356.jpg)
ನವದೆಹಲಿ: 2012ರ `ನಿರ್ಭಯಾ’ ಅತ್ಯಾಚಾರ ಪ್ರಕರಣದ ದೋಷಿರ್ಯೋವ ಗಲ್ಲು ಶಿಕ್ಷೆಯಿಂದ ಕ್ಷಮಾದಾನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಸರ್ಕಾರ ತಿರಸ್ಕರಿಸಿದೆ. ಆದ್ದರಿಂದ ಶೀಘ್ರದಲ್ಲೇ ದೋಷಿಗಳನ್ನು ಗಲ್ಲಿಗೇರಿಸಲಾಗುವುದು ಎನ್ನಲಾಗಿದೆ.
ಈ ಸಂಬಂಧ ದೆಹಲಿ ಸರ್ಕಾರ ಕೇಂದ್ರ ಗೃಹ ಸಚಿವಾಲಯಕ್ಕೆ ಶಿಫಾರಸ್ಸು ಮಾಡಿದ್ದು, ಇದನ್ನು ಗೃಹ ಸಚಿವಾಲಯ ಪರಿಶೀಲಿಸಿ, ರಾಷ್ಟ್ರಪತಿ ರಮನಾಥ ಕೋವಿಂದ್ ಅವರಿಗೆ ರವಾನಿಸಲಿದೆ. ಈ ಬಗ್ಗೆ ಅಂತಿಮ ನಿರ್ಧಾರವನ್ನು ರಾಷ್ಟ್ರಪತಿಗಳು ತೆಗೆದುಕೊಳ್ಳಲಿದ್ದಾರೆ. ಆದರೆ ಅವರು ಕೂಡ ದೆಹಲಿ ಸರ್ಕಾರದಂತೆ ಕ್ಷಮಾದಾನ ಅರ್ಜಿ ತಿರಸ್ಕರಿಸುವ ಸಾಧ್ಯತೆ ಹೆಚ್ಚಾಗಿದ್ದು, ಶೀಘ್ರದಲ್ಲೇ ಅತ್ಯಾಚಾರಿಗಳನ್ನು ಗಲ್ಲಿಗೇರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2012ರ ಡಿ. 16ರಂದು ದೆಹಲಿಯಲ್ಲಿ 23 ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರಗೈದು, ಕೊಲೆ ಮಾಡಿ ದುರುಳರು ವಿಕೃತಿ ಮೆರೆದಿದ್ದರು. ಈ ಪ್ರಕರಣ ಸಂಬಂಧ ರಾಮ್ ಸಿಂಗ್, ಪವನ್ ಗುಪ್ತಾ, ವಿನಯ್ ಶರ್ಮಾ, ಅಕ್ಷಯ್ ಠಾಕೂರ್, ಮುಕೇಶ್ ಸಿಂಗ್ ಬಂಧಿಸಲಾಗಿತ್ತು. ಆದರೆ 3013ರ ಮಾರ್ಚ್ನಲ್ಲಿ ತಿಹಾರ್ ಜೈಲಿನಲ್ಲಿಯೇ ರಾಮ್ ಸಿಂಗ್ ಆತ್ಮಹತ್ಯೆಗೆ ಶರಣಾಗಿದ್ದನು. ಬಳಿಕ ಈ ದುಷ್ಟರ ಕೃತ್ಯ ಸಾಬೀತಾಗಿ, ಅವರನ್ನು ದೋಷಿಗಳು ಎಂದು ಪರಿಗಣಿಸಿ ಇನ್ನುಳಿದ ನಾಲ್ವರಿಗೆ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿತ್ತು. ಅವರಲ್ಲಿ ಮೂವರಿಗೆ ಕ್ಷಮಾದಾನ ಕೋರುವ ಯಾವುದೇ ಅವಕಾಶ ಇರಲಿಲ್ಲ. ಆದರೆ ವಿನಯ್ ಶರ್ಮಾಗೆ ಅವಕಾಶವಿದ್ದ ಹಿನ್ನೆಲೆ ಆತ ಮಾತ್ರ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಿದ್ದನು.
ಆದರೆ ಆತನ ಕ್ಷಮದಾನ ಅರ್ಜಿಯನ್ನು ಬುಧವಾರ ದೆಹಲಿ ಸರ್ಕಾರ ತಿರಸ್ಕರಿಸಿದೆ. ಅಲ್ಲದೆ ಕೇಂದ್ರ ಗೃಹ ಸಚಿವಾಲಯ ಹಾಗೂ ರಾಷ್ಟ್ರಪತಿಗಳಿಗೂ ದೋಷಿಯ ಕ್ಷಮಾದಾನ ಅರ್ಜಿ ತಿರಸ್ಕರಿಸುವಂತೆ ಶಿಫಾರಸು ಮಾಡಿದೆ. ಒಂದು ವೇಳೆ ಗೃಹ ಸಚಿವಾಲಯ ದೋಷಿಯ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದರೆ ನಿರ್ಭಯಾ ಪ್ರಕರಣದ ನಾಲ್ವರು ಅತ್ಯಚಾರಿಗಳನ್ನು ಗಲ್ಲಿಗೇರಿಸುವುದು ಖಚಿತ.
2012ರಲ್ಲಿ ನಡೆದಿದ್ದ ಈ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಅತ್ಯಾಚಾರಿಗಳ ವಿರುದ್ಧ ಸಾರ್ವಜನಿಕರು ಹೋರಾಟ, ಪ್ರತಿಭಟನೆಗಳನ್ನು ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು. ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ, ಅತ್ಯಾಚಾರಿಗಳ ವಿರುದ್ಧ ಕಠಿಣ ಕಾನೂನು ಜಾರಿಗೆ ತನ್ನಿ ಎಂಬ ಕೂಗು ಕೇಳಿಬಂದಿತ್ತು.
ನಿರ್ಭಯಾ ಪ್ರಕರಣದ ರೀತಿಯೇ ನವೆಂಬರ್ 27ರಂದು ಹೈದರಾಬಾದಿನಲ್ಲಿಯೂ ಪಶುವೈದ್ಯೆಯ ಅತ್ಯಾಚಾರ ಪ್ರಕರಣ ನಡೆದಿದ್ದು, ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಆರೋಪಿಗಳ ಹೆತ್ತವರು ಕೂಡ ಸಂತ್ರಸ್ತೆಗೆ ನ್ಯಾಯ ಒದಗಿಸುವಂತೆ ಮನವಿ ಮಾಡಿ, ತಮ್ಮ ಮಕ್ಕಳ ದುಷ್ಕೃತ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೈದರಾಬಾದ್ ಅತ್ಯಾಚಾರ, ಕೊಲೆ ಪ್ರಕರಣದ ಬಳಿಕ ದೇಶದಲ್ಲಿ ಪ್ರತಿನಿತ್ಯ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿದೆ. ಅಪ್ರಾಪ್ತೆಯರು, ಮಹಿಳೆಯರು ಮಾತ್ರವಲ್ಲದೆ ವೃದ್ಧೆಯರ ಮೇಲೂ ಕಾಮುಕರು ಕ್ರೌರ್ಯ ಮೆರೆದ ಪ್ರಕರಣಗಳು ನಡೆಯುತ್ತಿವೆ. ಆದ್ದರಿಂದ ದೇಶದೆಲ್ಲೆಡೆ ಆತ್ಯಾಚಾರಿಗಳನ್ನು ಗಲ್ಲಿಗೇರಿಸಿ ಆಗ ಹೆಣ್ಣನ್ನು ಕಾಮ ದೃಷ್ಠಿಯಿಂದ ನೋಡುವ ದುರುಳರು ಹೆದರುತ್ತಾರೆ ಎಂದು ಜನರು ಆಗ್ರಹಿಸುತ್ತಿದ್ದಾರೆ.