
ನವದೆಹಲಿ: ನಾಸಾಗಿಂತ ಮೊದಲೇ ನಮ್ಮ ಚಂದ್ರಯಾನ-2 ಆರ್ಬಿಟರ್ ವಿಕ್ರಂ ಲ್ಯಾಂಡರ್ ಅನ್ನು ಪತ್ತೆ ಮಾಡಿತ್ತು ಎಂದು ಇಸ್ರೋ ಅಧ್ಯಕ್ಷ ಕೆ ಶಿವನ್ ಹೇಳಿದ್ದಾರೆ.
ನಿನ್ನೆಯಷ್ಟೇ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಚಂದ್ರಯಾನ -2ನ ವಿಕ್ರಮ್ ಲ್ಯಾಂಡರ್ ಅನ್ನು ಪತ್ತೆ ಮಾಡಿತ್ತು. ಇದಕ್ಕೆ ಭಾರತದ ಚೆನ್ನೈ ಮೂಲದ ಯುವ ವಿಜ್ಞಾನಿ ಷಣ್ಮುಗ ಸುಬ್ರಮಣಿಯನ್ ನೆರವು ನೀಡಿದ್ದರು. ಇದೇ ವಿಚಾರವಾಗಿ ಮಾತನಾಡಿರುವ ಇಸ್ರೋ ಅಧ್ಯಕ್ಷ ಕೆ ಶಿವನ್ ಅವರು, ನಾಸಾಗಿಂತ ಮೊದಲೇ ಚಂದ್ರಯಾನ-2ದ ಆರ್ಬಿಟರ್ ವಿಕ್ರಮ್ ಲ್ಯಾಂಡರ್ ಅನ್ನು ಪತ್ತೆ ಮಾಡಿತ್ತು ಎಂದು ಹೇಳಿದ್ದಾರೆ.
‘ಈ ಹಿಂದೆಯೇ ಇಸ್ರೋ ತನ್ನ ವೆಬ್ ಸೈಟಿನಲ್ಲಿ ಈ ಕುರಿತು ಪ್ರಕಟಣೆ ನೀಡಿತ್ತು. ವಿಕ್ರಮ್ ಲ್ಯಾಂಡರ್ ಪತನವಾಗಿರುವ ಸ್ಥಳವನ್ನು ಆರ್ಬಿಟರ್ ಪತ್ತೆ ಮಾಡಿತ್ತು. ಆದರೆ ಸಂಪರ್ಕ ಸಾಧ್ಯವಾಗಿರಲಿಲ್ಲ ಎಂದು ಶಿವನ್ ಹೇಳಿದ್ದಾರೆ.
ಇನ್ನು ಇಸ್ರೋದೊಂದಿಗಿನ ಸಂಪರ್ಕವನ್ನು ಕಳೆದುಕೊಂಡಾಗ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈಗಿಂತ ಕೇವಲ 2.1 ಕಿಲೋಮೀಟರ್ ದೂರದಲ್ಲಿತ್ತು. ಇದು ಭಾರತೀಯ ಬಾಹ್ಯಾಕಾಶ ಸಂಸ್ಥೆಗೆ ಬಹು ನಿರೀಕ್ಷಿತ ಕನಸು ನನಸಾಗುವ ವೇಳೆಗೆ ಸಂಪರ್ಕ ಕಳೆದುಕೊಂಡಿತು. ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈಗೆ ಕಠಿಣವಾಗಿ ಇಳಿದ ನಂತರ, ಇಸ್ರೋ ಅವರು ಅದರೊಂದಿಗೆ ಸಂಪರ್ಕವನ್ನು ಸ್ಥಾಪಿಸಲು ಕನಿಷ್ಠ 14 ದಿನಗಳ ಶ್ರಮಿಸಿದ್ದರು. ಆದಾಗ್ಯೂ ವಿಕ್ರಮ್ ಲ್ಯಾಂಡರ್ ಸಂಪರ್ಕ ಸಾಧ್ಯವಾಗಿರಲಿಲ್ಲ.
ನಿನ್ನೆ ನಾಸಾದ ಮೂನ್ ಮಿಷನ್ ನ ಎಲ್ ಆರ್ ಒ (Lunar Reconnaissance Orbiter) ವಿಕ್ರಮ್ ಲ್ಯಾಂಡರ್ ಪತನವಾದ ಸ್ಥಳವನ್ನು ಗುರುತಿಸಿ ಅದರ ಛಾಯಾ ಚಿತ್ರವನ್ನು ನಾಸಾ ನಿಯಂತ್ರಣ ಕೊಠಡಿಗೆ ರವಾನಿಸಿತ್ತು.