![182802-onion1](http://kannada.vartamitra.com/wp-content/uploads/2019/12/182802-onion1-678x381.jpg)
ನವದೆಹಲಿ: ಈರುಳ್ಳಿ ಬೆಲೆಯಲ್ಲಿ ಭಾರಿ ಏರಿಕೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಂಗಳವಾರ ಎರಡು ದೊಡ್ಡ ಕ್ರಮಗಳನ್ನು ಕೈಗೊಂಡಿದೆ. ಈರುಳ್ಳಿಯ ಬೆಲೆ ಹೆಚ್ಚಳದ ಬಗ್ಗೆ ವಿರೋಧ ಪಕ್ಷಗಳು ಸಂಸತ್ತಿನಲ್ಲಿ ದನಿ ಎತ್ತಿದ ಬಳಿಕ ಕೇಂದ್ರ ಸರ್ಕಾರ ಈ ಕ್ರಮಗಳನ್ನು ಕೈಗೊಂಡಿದೆ. ಈರುಳ್ಳಿಯ ಸಂಗ್ರಹವನ್ನು ಬಿಗಿಗೊಳಿಸುವ ಸಲುವಾಗಿ, ಕೇಂದ್ರ ಸರ್ಕಾರ ಮಂಗಳವಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, ಈರುಳ್ಳಿಯ ಸಗಟು ಮತ್ತು ಚಿಲ್ಲರೆ ವ್ಯಾಪಾರಿಗಳ ಷೇರು ಮಿತಿಯನ್ನು ಕ್ರಮವಾಗಿ ಶೇಕಡಾ 50 ರಷ್ಟು 25 ಟನ್ ಮತ್ತು ಐದು ಟನ್ಗಳಿಗೆ ಇಳಿಸಿತು.
ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ಹೊರಡಿಸಿರುವ ಆದೇಶದ ಪ್ರಕಾರ, ದೇಶದ ಎಲ್ಲಾ ರಾಜ್ಯಗಳಲ್ಲಿನ ಈರುಳ್ಳಿ ಸಗಟು ವ್ಯಾಪಾರಿಗಳು ಇನ್ನು ಮುಂದೆ 25 ಟನ್ಗಿಂತ ಹೆಚ್ಚು ಈರುಳ್ಳಿಯನ್ನು ದಾಸ್ತಾನು ಮಾಡುವಂತಿಲ್ಲ. ಆಆದರೆ ಚಿಲ್ಲರೆ ವ್ಯಾಪಾರಿಗಳಿಗೆ ಈರುಳ್ಳಿ ದಾಸ್ತಾನು ಮಿತಿ ಐದು ಟನ್ ಎಂದು ಹೇಳಲಾಗಿದೆ. ಈ ಆದೇಶ ತಕ್ಷಣದಿಂದ ಜಾರಿಗೆ ಬರಲಿದೆ ಎಂದು ಸಚಿವಾಲಯ ತಿಳಿಸಿದೆ. ಆದಾಗ್ಯೂ ಇದು ಆಮದುದಾರರಿಗೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಈರುಳ್ಳಿಯ ಬೆಲೆ ದಿನದಿಂದ ದಿನಕ್ಕೆ ಆಕಾಶ ಮುಟ್ಟುತ್ತಿದೆ. ಸಾರ್ವಜನಿಕರಿಗೆ ಇದರಿಂದ ಪರಿಹಾರ ನೀಡಲು ಕೇಂದ್ರ ಸರ್ಕಾರ ಸೆಪ್ಟೆಂಬರ್ 30 ರಂದು, ಸಗಟು ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ಈರುಳ್ಳಿಯ ಸ್ಟಾಕ್ ಮಿತಿಯನ್ನು ನಿಗದಿಪಡಿಸಿತ್ತು, ಅದರ ಪ್ರಕಾರ ಸಗಟು ವ್ಯಾಪಾರಿಗಳಿಗೆ ಈರುಳ್ಳಿ ದಾಸ್ತಾನು ಮಿತಿ 50 ಟನ್ ಆಗಿದ್ದರೆ ಚಿಲ್ಲರೆ ವ್ಯಾಪಾರಿಗಳಿಗೆ ಇದು ಐದು ಟನ್.