ಚಾಮರಾಜನಗರ: ಸುಳ್ವಾಡಿ ದೇವಸ್ಥಾನದ ಪ್ರಸಾದಕ್ಕೆ ವಿಷ ಬೆರೆಸಿದ್ದ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಅದಾದ ನಂತರ ಪ್ರಸಾದದ ಮೇಲೂ ಜನರು ಅನುಮಾನ ಪಡುವಂತಾಗಿತ್ತು.
ಈ ಪ್ರಕರಣದ ಪ್ರಮುಖ ಆರೋಪಿ ಹಾಗೂ ಕಿರಿಯ ಸ್ವಾಮೀಜಿ ಇಮ್ಮಡಿ ಮಹದೇವಸ್ವಾಮಿ ಅವರ ಜಾಮೀನು ಅರ್ಜಿ ವಿಚಾರಣೆ ಇಂದು ಸುಪ್ರೀಂಕೋರ್ಟ್ನಲ್ಲಿ ನಡೆಯಲಿದೆ. ನ್ಯಾ.ಎನ್.ವಿ. ರಮಣ, ನ್ಯಾ. ಅಜಯ್ ರೋಹ್ಟಗಿ, ವಿ. ರಾಮಸುಬ್ರಮಣ್ಯಂ ನೇತೃತ್ವದ ತ್ರಿಸದಸ್ಯ ಪೀಠ ಇಂದು ಅರ್ಜಿ ವಿಚಾರಣೆ ನಡೆಸಲಿದೆ.
ಸ್ಥಳೀಯ ಕೋರ್ಟ್ ಮತ್ತು ಹೈಕೋರ್ಟ್ನಲ್ಲಿ ಇಮ್ಮಡಿ ಮಹದೇವಸ್ವಾಮಿ ಅವರ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ. ಹೀಗಾಗಿ, ನ. 21ರಂದು ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.
ಇಮ್ಮಡಿ ಮಹದೇವಸ್ವಾಮಿಗೆ ಸುಳ್ವಾಡಿ ವಿಷ ಪ್ರಸಾದ ದುರಂತ ಪ್ರಕರಣದಲ್ಲಿ ಜಾಮೀನು ಸಿಗಲಿದೆಯಾ ಅಥವಾ ಜೈಲುಶಿಕ್ಷೆ ಆಗಲಿದೆಯಾ? ಎಂಬುದು ಇಂದು ನಿರ್ಧಾರವಾಗಲಿದೆ. ಚಾಮರಾಜನಗರ ಜಿಲ್ಲೆಯ ಸುಳ್ವಾಡಿ ವಿಷ ಪ್ರಸಾದ ದುರಂತದಲ್ಲಿ 17 ಜನ ಮೃತಪಟ್ಟಿದ್ದರು, 129 ಮಂದಿ ಅಸ್ವಸ್ಥಗೊಂಡಿದ್ದರು. ಪ್ರಸಾದದಲ್ಲಿ ವಿಷ ಬೆರೆಸಿ ಭಕ್ತರನ್ನು ಕೊಂದ ಪ್ರಕರಣಕ್ಕೆ ದೇಶವೇ ಬೆಚ್ಚಿಬಿದ್ದಿತ್ತು.