ಚೆನ್ನೈ: ತಮಿಳುನಾಡಿನಾದ್ಯಂತ ಭಾರೀ ಮಳೆಯಾಗುತ್ತಿದ್ದು, ಮನೆ ಕುಸಿದು ಇಬ್ಬರು ಮಕ್ಕಳು ಸೇರಿ ಸುಮಾರು 17 ಮಂದಿ ಮೃತಪಟ್ಟ ಘಟನೆ ಮೆಟ್ಟುಪಾಳಯಂನ ನಡೂರ್ ಗ್ರಾಮ ಹಾಗೂ ಅದರ ಆಸುಪಾಸಿನಲ್ಲಿ ನಡೆದಿದೆ.
ಮೃತ ದುರ್ದೈವಿಗಳನ್ನು ಗುರು(45), ರಾಮ್ನಾಥ್(20), ಆನಂದ್ ಕುಮಾರ್(40), ಹರಿಸುಧ(16), ಶಿವಕಾಮಿ(45), ಓವಿಯಮ್ಮಳ್(50), ನಾಥಿಯಾ(30), ವೈದೇಹಿ(40), ತಿಲಕವತಿ(50), ಅರುಕಾನಿ(55), ರುಕ್ಮಿಣಿ(40), ನಿವೇತ(18), ಚಿನ್ನಮ್ಮಳ್(70), ಅಕ್ಷಯ(7) ಹಾಗೂ ಲೊಗುರಂ(7) ಎಂಬುದಾಗಿ ಗುರುತಿಸಲಾಗಿದೆ.
ಇಂದು ಬೆಳಗ್ಗೆ ಈ ದುರಂತ ಸಂಭವಿಸಿದೆ. ಘಟನೆ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಹಾಗೂ ರಕ್ಷಣಾ ತಂಡ ದೌಡಾಯಿಸಿದೆ. ಮಣ್ಣಿನಡಿ ಸಿಲುಕಿದ್ದ ಮೃತದೇಹಗಳನ್ನು ಹೊರತೆಗೆದು ಮೆಟ್ಟುಪಾಳಯಂನ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
ಕೊಯಮತ್ತೂರಿನಿಂದ 50 ಕಿ.ಮೀ ದೂರದಲ್ಲಿ ನಡೂರ್ ಗ್ರಾಮವಿದೆ. ಮೃತಪಟ್ಟ 17 ಮಂದಿ ಕೂಡ ತಮ್ಮ ತಮ್ಮ ಮನೆಗಳಲ್ಲಿ ನಿದ್ರೆಯಲ್ಲಿದ್ದ ಸಂದರ್ಭದಲ್ಲಿ ಅಂದರೆ ಬೆಳಗ್ಗೆ 5.30ರ ಸಮಯದಲ್ಲಿ ಮನೆಯ ಗೋಡೆ ಕುಸಿದಿದೆ ಎನ್ನಲಾಗಿದೆ. ಕುಸಿದ ಮನೆಗಳಲ್ಲಿ 4 ಮನೆ ಹೆಂಚಿನ ಮನೆಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಲ್ಲಾ 17 ಮಂದಿ ಕೂಡ ಮನೆಯ ಅವಶೇಷಗಳಡಿ ಸಿಲುಕಿ ಮೃತಪಟ್ಟಿದ್ದಾರೆ. ಘಟನೆ ನಡೆದ ಕೂಡಲೇ ನೆರೆಹೊರೆಯವರು ಮೆಟ್ಟುಪಾಳಯಂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕುಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಮಳೆಯಬ್ಬರ ಹಿನ್ನೆಲೆಯಲ್ಲಿ ತಮಿಳುನಾಡು, ಪುದುಚೇರಿಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ರಾಮನಾಥಪುರಂ, ಶಿವಗಂಗಾ, ತಂಜಾವೂರು, ಪುದುಕೊಟ್ಟೈ, ನಾಗಪಟ್ಟಿಣಂ ಪುದುಚೇರಿಯಲ್ಲಿ ಧಾರಾಕಾರ ಮಳೆಯಾಗುತ್ತಿದೆ.