ಶಿರಸಿ : ಮುಖ್ಯಮಂತ್ರಿ ಫಂಡ್ನಲ್ಲಿದ್ದ 40 ಸಾವಿರ ಕೋಟಿ ಹಣವನ್ನು ಕೇಂದ್ರ ಸರ್ಕಾರಕ್ಕೆ ವರ್ಗಾವಣೆ ಮಾಡಲು ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರದಲ್ಲಿ ನಾಲ್ಕು ದಿನದ ಮುಖ್ಯಮಂತ್ರಿ ಆಗಿದ್ದರು ಎನ್ನುವ ಮಾಹಿತಿ ವಾಟ್ಸ್ಆ್ಯಪ್ನಲ್ಲಿ ಹರಿದಾಡಿತ್ತು. ಅನೇಕರು ಇದನ್ನು ಸುಳ್ಳು ಎಂದು ಜರಿದಿದ್ದರು. ಕೆಲವರು ಇದನ್ನು ನಂಬಿದ್ದರು. ಈಗ ಉತ್ತರ ಕನ್ನಡ ಜಿಲ್ಲೆ ಸಂಸದ ಅನಂತ್ಕುಮಾರ್ ಹೆಗಡೆ ಕೂಡ ಇದೇ ರೀತಿಯ ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಇತ್ತೀಚೆಗೆ ತಾಲೂಕಿನ ಬಂಕನಾಳನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅನಂತ್ ಕುಮಾರ್ ಹೆಗಡೆ, “ಮಹಾರಾಷ್ಟ್ರದಲ್ಲಿ ಬಹುಮತ ಇರಲಿಲ್ಲ ಎನ್ನುವುದು ಗೊತ್ತಿದ್ದರೂ ಫಡ್ನವೀಸ್ ಸಿಎಂ ಆಗಿದ್ದೇಕೆ?. ಇದನ್ನು ಎಲ್ಲರೂ ಪ್ರಶ್ನೆ ಮಾಡುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣವಿದೆ. ಸಿಎಂ ನಿಯಂತ್ರಣದಲ್ಲಿ 40 ಸಾವಿರ ಕೋಟಿ ರೂಪಾಯಿ ಇತ್ತು. ಇದನ್ನು ಕೇಂದ್ರಕ್ಕೆ ವರ್ಗಾಯಿಸಲು ಫಡ್ನವೀಸ್ ಸಿಎಂ ಆದರು,” ಎಂದರು.
ಅಷ್ಟಕ್ಕೂ ಈ ಹಣ ವರ್ಗಾವಣೆ ಮಾಡಿದ್ದೇಕೆ? ಈ ಪ್ರಶ್ನೆಗೆ ಉತ್ತರಿಸಿರುವ ಅನಂತ್ ಕುಮಾರ್ ಹೆಗಡೆ, “ಶಿವಸೇನೆ, ಎನ್ಸಿಪಿ ಹಾಗೂ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈ ಹಣವನ್ನು ಅಭಿವೃದ್ಧಿ ಬಳಕೆ ಮಾಡದೆ ಅದಕ್ಕೆ ಎಳ್ಳು ನೀರು ಬಿಡುತ್ತಿದ್ದರು. ಹೀಗಾಗಿ ಸಿಎಂ ಆಗಿ ಫಡ್ನವೀಸ್ ಅಧಿಕಾರ ತೆಗೆದುಕೊಂಡರು. ಕೇವಲ 15 ಗಂಟೆಗಳಲ್ಲಿ ಕೇಂದ್ರ ಸರ್ಕಾರಕ್ಕೆ ಹಣ ವರ್ಗಾವಣೆ ಮಾಡಿದರು,” ಎಂದರು.
ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಎನ್ಸಿಪಿ ನಾಯಕ ಅಜಿತ್ ಪವಾರ್ ಜೊತೆ ಸೇರಿ ಸರ್ಕಾರ ರಚನೆ ಮಾಡಿದ್ದರು. 40 ಸಾವಿರ ಕೋಟಿ ಕೇಂದ್ರ ಸರ್ಕಾರಕ್ಕೆ ವರ್ಗಾವಣೆ ಮಾಡಲು ಅವರು ಈ ರೀತಿ ಮಾಡಿದ್ದರು ಎನ್ನುವ ಸಂದೇಶ ವಾಟ್ಸ್ಆ್ಯಪ್ನಲ್ಲಿ ಹರಿದಾಡಿತ್ತು.
ಫಡ್ನವೀಸ್ ಸ್ಪಷ್ಟನೆ:
ಅನಂತ್ಕುಮಾರ್ ಹೆಗಡೆ ನೀಡಿರುವ ಹೇಳಿಕೆಯನ್ನು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಒಪ್ಪಿಲ್ಲ. “ನಾಲ್ಕು ದಿನಗಳ ಅಧಿಕಾರದಲ್ಲಿ ಬರ ಪೀಡಿತ ರೈತರಿಗೆ 5,380 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದು ಬಿಟ್ಟರೆ ಬೇರೇನು ಮಾಡಿಲ್ಲ, ಎಂದು ಸ್ಪಷ್ಟನೆ ನೀಡಿದ್ದಾರೆ.