ಶಾಲೆಯಲ್ಲಿ 1 ಲೀಟರ್ ಹಾಲನ್ನು 81 ವಿದ್ಯಾರ್ಥಿಗಳಿಗೆ ಹಂಚಿದ್ರು!

ಲಕ್ನೋ: ಒಂದು ಲೀಟರ್ ಹಾಲಿಗೆ ಒಂದು ಬಕೆಟ್ ನೀರು ಹಾಕಿ ಶಾಲೆಯ 81 ವಿದ್ಯಾರ್ಥಿಗಳಿಗೆ ಹಂಚಿದ ಪ್ರಕರಣವೊಂದು ಉತ್ತರಪ್ರದೆಶದ ಸೋನ್ಭದ್ರದಲ್ಲಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

ಸೋನ್ಭದ್ರ ಉತ್ತರಪ್ರದೇಶದಲ್ಲಿರುವ ಅಭಿವೃದ್ಧಿ ಕಾಣದ ಪ್ರದೇಶಗಳಲ್ಲಿ ಒಂದಾಗಿದೆ. ಜಿಲ್ಲೆಯಲ್ಲಿ ವಾಸವಿರುವ ಬಡ ಕುಟುಂಬಗಳ ಮಕ್ಕಳು ಸರ್ಕಾರಿ ಯೋಜನೆಗಳಲ್ಲಿ ಒಂದಾದ ಬಿಸಿಯೂಟವನ್ನು ನಂಬಿಕೊಂಡು ಬದುಕುತ್ತಿದ್ದಾರೆ ಎಂದು ಅಲ್ಲಿನ ಸಾಮಾಜಿಕ ಕಾರ್ಯಕರ್ತರು ತಿಳಿಸಿದ್ದಾರೆ. ಆದರೆ ಇಲ್ಲಿ ಮಕ್ಕಳಿಗೆ ನೀರು ಬೆರೆಸಿದ ಹಾಲು ನೀಡುತ್ತಿರುವುದು ವಿಷಾದನೀಯವಾಗಿದ್ದು, ಇದೀಗ ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಅಡುಗೆ ಮಾಡುವವಳು ಒಂದು ದೊಡ್ಡ ಅಲ್ಯೂಮೀನಿಯಂ ಪಾತ್ರೆಯಲ್ಲಿ ನೀರು ಬಿಸಿ ಮಾಡುತ್ತಾರೆ. ಇದೇ ನೀರನ್ನು ನಂತರ 1 ಲೀಟರ್ ಹಾಲಿಗೆ ಮಿಕ್ಸ್ ಮಾಡುತ್ತಾರೆ. ಬಳಿಕ ಹಾಲಿಗಾಗಿ ಸ್ಟೀಲ್ ಗ್ಲಾಸ್ ಹಿಡಿದುಕೊಂಡು ಸಾಲಾಗಿ ನಿಂತು ಕಾಯುತ್ತಿರುವ ಮಕ್ಕಳಿಗೆ ನೀಡುತ್ತಾರೆ. ಒಬ್ಬರಾದ ನಂತರ ಒಬ್ಬರಂತೆ ಮಕ್ಕಳು ಅರ್ಧ ಗ್ಲಾಸ್ ತೆಗೆದುಕೊಂಡು ಕುಡಿಯುತ್ತಾರೆ.

ಸೋನ್ಭದ್ರ ಜಿಲ್ಲೆಯ ಛೋಪಾನ್ ಸರ್ಕಾರಿ ಹಿರಿಯ ಪ್ರಾಥಮಿಕ 171 ಮಂದಿ ವಿದ್ಯಾರ್ಥಿಗಳಿದ್ದಾರೆ. ಇದರಲ್ಲಿ 81 ವಿದ್ಯಾರ್ಥಿಗಳಿಗೆ ಬುಧವಾರ ಹಾಲು ನೀಡಲಾಗುತ್ತಿದೆ.

ಉತ್ತರಪ್ರದೇಶದಲ್ಲಿ ಶಾಲೆಯ ಮಕ್ಕಳು ಉಪ್ಪಿನಲ್ಲಿ ರೊಟ್ಟಿ ತಿನ್ನುವ ಬಗ್ಗೆ ವರದಿ ಮಾಡಿದ ಪತ್ರಕರ್ತನ ವಿರುದ್ಧ ಕ್ರಮಕೈಗೊಂಡ 2 ತಿಂಗಳ ಬಳಿಕ ಹಾಲಿಗೆ ನೀರು ಬೆರೆಸಿದ ವಿಡಿಯೋ ವೈರಲ್ ಆಯಿತು. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಜಿಲ್ಲಾಧಿಕಾರಿ, ಕೂಡಲೇ ಆ ಶಾಲೆಗೆ ಹೆಚ್ಚಿನ ಪ್ರಮಾಣದಲ್ಲಿ ಹಾಲು ನೀಡಿದ್ದಾರೆ. ಅಲ್ಲದೆ ಹೆಚ್ಚಿನ ಹಾಲು ಇದ್ದರೂ ಮಕ್ಕಳಿಗೆ ಯಾಕೆ ಪೂರೈಕೆ ಮಾಡಿಲ್ಲ ಎಂಬುದರ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಈ ಬಗ್ಗೆ ತನಿಖೆ ಕೈಗೊಂಡಿದ್ದೇವೆ. ನಾವು ಪ್ಯಾಕೆಟ್ ಹಾಲು ಬಳಕೆ ಮಾಡುತ್ತಿರುವುದರಿಂದ ಎಮ್ಮೆ ಅಥವಾ ಹಸುವಿನ ಹಾಲೋ ಎಂಬುದರ ಬಗ್ಗೆ ನಮಗೆ ಯಾವುದೇ ಆಧಾರಗಳಿಲ್ಲ. ಆದರೆ ಶಾಲೆಯಲ್ಲಿ ಮಕ್ಕಳಿಗೆ ಸಾಕಾಗುವಷ್ಟು ಹಾಲು ಇತ್ತು. ಹೀಗಾಗಿ ಮತ್ತೆ ಮಕ್ಕಳಿಗೆ ಅದನ್ನು ನೀಡಿದ್ದೇವೆ. ಮೊದಲನೇ ಬಾರಿ ಇಂತಹ ತಪ್ಪಾಗಿದ್ದು, ಗಮನಕ್ಕೆ ಬಂದ ಕೂಡಲೇ ಸರಿಪಡಿಸಿದ್ದೇವೆ ಎಂದು ಬ್ಲಾಕ್ ಶಿಕ್ಷಣ ಅಧಿಕಾರಿ ಮುಕೇಶ್ ಕುಮಾರ್ ತಿಳಿಸಿದ್ದಾರೆ.

ಇತ್ತ ಶಾಲೆಯಲ್ಲಿ ಅಡುಗೆ ಮಾಡುವವಳು, ನಾನು ಒಂದು ಪ್ಯಾಕ್ ಹಾಲು ಮಾತ್ರ ಮಕ್ಕಳಿಗೆ ನೀಡಿದ್ದೇನೆ. ಒಂದು ಲೀಟರ್ ಹಾಲಿಗೆ ಒಂದು ಬಕೆಟ್ ನೀರು ಮಿಕ್ಸ್ ಮಾಡಿದ್ದೇನೆ. ಯಾಕಂದರೆ ನಿನ್ನೆ ಒಂದು ಪ್ಯಾಕೆಟ್ ಹಾಲು ಮಾತ್ರ ನನಗೆ ನೀಡಲಾಗಿತ್ತು. ಹೀಗಾಗಿ ನಾನು ಈ ರೀತಿ ಮಾಡಬೇಕಾಯಿತು ಎಂದು ತಿಳಿಸಿದ್ದಾಳೆ.

ಶಾಲೆಯಲ್ಲಿ ಹೆಚ್ಚು ಹಾಲು ಇರುವುದು ಬಹುಶಃ ಆಕೆಗೆ ತಿಳಿದರಲಿಲ್ಲ ಅನಿಸುತ್ತಿದೆ. ಹೀಗಾಗಿ ಆಕೆ ಈ ರೀತಿ ಮಾಡಿರಬೇಕು ಎಂದು ಹೇಳುವ ಮೂಲಕ ಶಾಲೆಯ ಶಿಕ್ಷಕ ಜಿತೇಂದ್ರ ಕುಮಾರ್ ಜಾರಿಕೊಂಡಿದ್ದಾರೆ.

ಈ ಬಗ್ಗೆ ಹಿರಿಯ ಶಿಕ್ಷಣಾಧಿಕಾರಿ ಪ್ರತಿಕ್ರಿಯಿಸಿ, ಶಾಲೆಯಲ್ಲಿ ಮಕ್ಕಳಿಗೆ ಬೇಕಾದಷ್ಟು ಹಾಲು ಇರಲಿಲ್ಲ. ಹೀಗಾಗಿ ನಾನು ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಆಗ ಅವರು ನೀರು ಮಿಶ್ರಣ ಮಾಡಿ ಕೊಡುವಂತೆ ನಿರ್ದೇಶನ ನೀಡಿದರು. ಹೀಗಾಗಿ ಇದನ್ನು ನಾನು ಶಿಕ್ಷಕರಿಗೆ ತಿಳಿಸಿದ್ದು, ಅವರು ನೀರು ಬೆರೆಸಿ ಮಕ್ಕಳಿಗೆ ಹಾಲು ನೀಡಿದ್ದಾರೆ. ಇದನ್ನು ಯಾರೋ ಫೋಟೋ ಕ್ಲಿಕ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಸದ್ಯ ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ