ಬೆಂಗಳೂರು, ನ.23- ಮುಂದಿನ ತಿಂಗಳ 5ರಂದು ನಡೆಯುವ 15 ಕ್ಷೇತ್ರಗಳ ವಿಧಾನಸಭೆ ಉಪ ಚುನಾವಣೆ ಕೇವಲ ರಾಜ್ಯ ಸರ್ಕಾರದ ಭವಿಷ್ಯವನ್ನು ಮಾತ್ರ ನಿರ್ಧರಿಸುವುದಿಲ್ಲ. ರಾಜ್ಯಸಭೆಯ ಒಂದು ಸ್ಥಾನಕ್ಕೆ ನಡೆಯುವ ಚುನಾವಣೆಯ ಸೋಲು ಗೆಲುವನ್ನು ನಿರ್ಧರಿಸಲಿದೆ.
ಶಾಸಕರ ರಾಜೀನಾಮೆ, ಅನರ್ಹತೆಯಿಂದಾಗಿ ನಡೆಯುತ್ತಿರುವ ಉಪಚುನಾವಣೆಗೂ, ರಾಜ್ಯಸಭೆ ಚುನಾವಣೆಗೂ ಅವಿನಾಭಾವ ಸಂಬಂಧ ಸೃಷ್ಠಿಯಾಗಿದ್ದು, ಇದರೊಂದಿಗೆ ತೀವ್ರ ಗೊಂದಲಗಳನ್ನು ಹುಟ್ಟುಹಾಕಿದೆ. ಉಪಚುನಾವಣೆಯಲ್ಲಿ ಗೆದ್ದವರು ಡಿಸೆಂಬರ್ 12ರಂದು ನಡೆಯುವ ರಾಜ್ಯಸಭೆ ಚುನಾವಣೆಯಲ್ಲಿ ಮತ ಚಲಾವಣೆ ಮಾಡಬಹುದು ಎಂಬ ನಿಯಮ ಸಾಕಷ್ಟು ಕುತೂಹಲಗಳನ್ನು ಹುಟ್ಟು ಹಾಕಿದೆ.
ವಿಧಾನಸಭೆ ಉಪಚುನಾವಣೆ ಡಿಸೆಂಬರ್ 5ರಂದು ನಡೆದು, ಫಲಿತಾಂಶ ಡಿ.9ರಂದು ಪ್ರಕಟವಾಗಲಿದೆ. ಆದರೆ ಫಲಿತಾಂಶ ಏನಾಗಲಿದೆ ಎಂದು ಕಾದು ನೋಡಿ ಅಳೆದು ತೂಗಿ ರಾಜ್ಯಸಭೆಗೆ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಸಮಯಾವಕಾಶ ಇಲ್ಲ. ರಾಜ್ಯಸಭೆಗೆ ನಾಮಪತ್ರ ಸಲ್ಲಿಕೆ ನವೆಂಬರ್ 25ರಿಂದ ಆರಂಭಗೊಂಡು ಡಿ.2ಕ್ಕೆ ಮುಕ್ತಾಯಗೊಳ್ಳುತ್ತದೆ. ಸದ್ಯದ ಬಲಾಬಲ ನೋಡಿದರೆ ಎಲ್ಲವೂ ಗೊಂದಲವಾಗಿದೆ.
ನಾಮ ನಿರ್ದೇಶಿತ ಸದಸ್ಯರಿಗೆ ರಾಜ್ಯಸಭೆ ಚುನಾವಣೆಯಲ್ಲಿ ಮತಹಾಕಲು ಅವಕಾಶ ಇಲ್ಲ. 224 ಶಾಸಕರ ಪೈಕಿ 17 ಮಂದಿ ಸುಪ್ರೀಂಕೋರ್ಟ್ ತೀರ್ಪಿನಿಂದ ಅನರ್ಹಗೊಂಡಿದ್ದಾರೆ. ಉಳಿದಂತೆ ಸ್ಪೀಕರ್ ಸೇರಿ ಬಿಜೆಪಿಯಲ್ಲಿ 105, ಕಾಂಗ್ರೆಸ್ 66, ಜೆಡಿಎಸ್ 34, ಇಬ್ಬರು ಪಕ್ಷೇತರರು ಒಳಗೊಂಡು 207 ಮಂದಿ ಶಾಸಕರಿದ್ದಾರೆ. ಪಕ್ಷೇತರ ಶಾಸಕ ನಾಗೇಶ್ ಬಿಜೆಪಿ ಸರ್ಕಾರದಲ್ಲಿ ಈಗಾಗಲೇ ಸಚಿವರಾಗಿದ್ದಾರೆ, ಕೊಳ್ಳೆಗಾಲದ ಮಹೇಶ್ ಬಿಎಸ್ಪಿಯಿಂದ ಉಚ್ಚಾಟಿತರಾಗಿದ್ದಾರೆ.
ಹೀಗಾಗಿ ಈ ಇಬ್ಬರ ಬೆಂಬಲವೂ ಬಿಜೆಪಿಗೆ ಸಿಗಲಿದೆ ಎಂದು ಹೇಳಲಾಗುತ್ತಿದೆ. ಈ ಲೆಕ್ಕಾಚಾರದಂತೆ ಬಿಜೆಪಿ 107 ಶಾಸಕರನ್ನು ಹೊಂದಿದಂತಾಗಿದೆ.
17 ಮಂದಿ ಶಾಸಕರು ಅನರ್ಹಗೊಂಡಿದ್ದರು, ಚುನಾವಣೆ ನಡೆಯುತ್ತಿರುವುದು 15 ಕ್ಷೇತ್ರಗಳಿಗೆ ಮಾತ್ರ. ಹೈಕೋರ್ಟ್ನಲ್ಲಿ ಚುನಾವಣಾ ತಕರಾರು ಪ್ರಕರಣದ ವಿಚಾರಣೆ ನಡೆಯುತ್ತಿರುವುದರಿಂದ ರಾಜರಾಜೇಶ್ವರಿನಗರ ಮತ್ತು ಮಸ್ಕಿ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿಲ್ಲ. ಈ ಹದಿನೈದು ಕ್ಷೇತ್ರಗಳ ಚುನಾವಣಾ ಫಲಿತಾಂಶ ಡಿ.9ರಂದು ಪ್ರಕಟಗೊಳ್ಳಲಿದೆ. ಯಾವುದೇ ಗಂಭೀರ ಸನ್ನಿವೇಶ ಸೃಷ್ಠಿಯಾಗಿ ಫಲಿತಾಂಶ ತಡೆ ಹಿಡಿಯಲಾಗದಿದ್ದರೆ ನೂತನವಾಗಿ ಆಯ್ಕೆಯಾದ 15 ಮಂದಿಯೂ ರಾಜ್ಯಸಭೆ ಚುನಾವಣೆಯಲ್ಲಿ ಮತ ಚಲಾವಣೆ ಮಾಡಬಹುದು.
ಅಲ್ಲಿಗೆ ವಿಧಾನಸಭೆ 222 ಶಾಸಕರ ಸಂಖ್ಯಾಬಲ ಹೊಂದಿದಂತಾಗುತ್ತದೆ. ರಾಜ್ಯಸಭೆಯ ಒಂದು ಸ್ಥಾನಕ್ಕೆ ಮಾತ್ರ ಚುನಾವಣೆ ನಡೆಯುತ್ತಿರುವುದರಿಂದ ಒಟ್ಟು ಸದಸ್ಯರ ಸಂಖ್ಯೆಯಲ್ಲಿ ಅರ್ಧಕ್ಕಿಂತ ಹೆಚ್ಚು ಮತ ಪಡೆದವರು ಮಾತ್ರ ಗೆಲ್ಲುತ್ತಾರೆ. ಅಂದರೆ 112 ಮತಗಳನ್ನು ಪಡೆದವರು ಗೆಲ್ಲುತ್ತಾರೆ. ಈಗೀರುವ ಸಂಖ್ಯಾಬಲದಲ್ಲಿ ಬಿಜೆಪಿ 105 ಮತ್ತು ಬಿಎಸ್ಪಿ, ಪಕ್ಷೇತರರನ್ನು ಒಳಗೊಂಡು 107 ಶಾಸಕರನ್ನು ಹೊಂದಿದ್ದು ಗೆಲ್ಲಲು ಇನ್ನೂ 5 ಶಾಸಕರ ಮತ ಪಡೆಯಬೇಕು. ಕಾಂಗ್ರೆಸ್ ಜೆಡಿಎಸ್ ಎರಡು ಪಕ್ಷಗಳು ಒಂದು ವೇಳೆ ಮೈತ್ರಿಯಾದರೆ 100 ಸಂಖ್ಯಾಬಲವಾಗಲಿದ್ದು, ಗೆಲ್ಲಲು 12 ಶಾಸಕರ ಬಲದ ಅಗತ್ಯ ಇದೆ. ಸಮ್ಮಿಶ್ರ ಸರ್ಕಾರ ಪತನವಾದ ಬೆನ್ನಲ್ಲೇ ಈ ಎರಡು ಪಕ್ಷಗಳ ನಾಯಕರು ಪರಸ್ಪರ ಟೀಕೆ ಮಾಡಿಕೊಂಡು ಮುನಿಸಿಕೊಂಡಿದ್ದಾರೆ. ಹಾಗಾಗಿ ಮೈತ್ರಿ ನಡೆಯುವ ಸಾಧ್ಯತೆಗಳು ಕ್ಷೀಣವಾಗಿವೆ. ಜೆಡಿಎಸ್ ನಾಯಕರು ಬಿಜೆಪಿ ನಾಯಕರ ಪರವಾಗಿ ಇತ್ತೀಚೆಗೆ ಮಾತನಾಡುತ್ತಿದ್ದಾರೆ. ಒಂದು ವೇಳೆ ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿಗೆ ಬೆಂಬಲ ಕೊಟ್ಟರೂ ಅಚ್ಚರಿ ಪಡಬೇಕಿಲ್ಲ.
ವಿಧಾನಸಭೆ ಉಪ ಚುನಾವಣೆಯಲ್ಲಿ ಬಿಜೆಪಿ 7 ಸ್ಥಾನ ಗೆದ್ದರೆ ಸರ್ಕಾರ ಉಳಿಸಿಕೊಳ್ಳಬಹುದು, ಐದು ಸ್ಥಾನ ಗೆದ್ದರೆ ರಾಜ್ಯಸಭೆ ಸ್ಥಾನ ಗೆಲ್ಲಬಹುದು. ಆಯ್ಕೆಯಾದ ನೂತನ ಶಾಸಕರಿಗೆ ಮೂರು ದಿನದಲ್ಲೇ ರಾಜ್ಯಸಭಾ ಸದಸ್ಯರನ್ನು ಆಯ್ಕೆ ಮಾಡುವ ಅವಕಾಶ ಸಿಗುವುದಂತೂ ಸೋಜಿಗವಾಗಿದೆ.
ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ನಿವೃತ್ತ ಐಪಿಎಸ್ ಅಧಿಕಾರಿ ಕೆ.ಸಿ.ರಾಮಮೂರ್ತಿ ಅವರನ್ನು ಮೂರನೇ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿ ಜೆಡಿಎಸ್ನ ಎಂಟು ಮಂದಿ ಶಾಸಕರಿಂದ ಅಡ್ಡ ಮತದಾನ ಮಾಡಿಸಿ ಗೆಲ್ಲಿಸಿದರು. ದಿಡೀರ ಬೆಳವಣಿಗೆಯಲ್ಲಿ ಕಾಂಗ್ರೆಸ್ಗೆ ರಾಜೀನಾಮೆ ನೀಡಿರುವ ರಾಮಮೂರ್ತಿ ಅವರು ಬಿಜೆಪಿ ಸೇರಿದ್ದಾರೆ. ಬಿಜೆಪಿಯಿಂದ ಬಹುತೇಕ ಅವರೇ ಅಭ್ಯರ್ಥಿಯಾಗುವ ಸಾಧ್ಯತೆ ಇದೆ.
ಉಪಚುನಾವಣಾ ಫಲಿತಾಂಶ ಏನು ಬರಿಲಿದೆ ಎಂದು ಗೋತ್ತಿಲ್ಲದೆ ಇರುವುದರಿಂದ ಜೆಡಿಎಸ್-ಕಾಂಗ್ರೆಸ್ ಪಕ್ಷಗಳು ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೋ ಬೇಡವೋ ಎಂಬ ಗೊಂದಲಗಳಿವೆ. ಒಟ್ಟಿನಲ್ಲಿ ಉಪಚುನಾವಣೆ ನಾನಾರೀತಿಯಲ್ಲಿ ಕುತೂಹಲದ ಕೇಂದ್ರ ಬಿಂಧುವಾಗಿದೆ.