ಬೆಂಗಳೂರು,ನ.23- ಸಮಾಜವಾದಿ ಹಿನ್ನೆಲೆಯಿಂದ ಬಂದವನು ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಲಕ್ಷಾಂತರ ಬೆಲೆ ಬಾಳುವ ವಾಚ್ ಕಟ್ಟಿಕೊಂಡು ಐಷರಾಮಿ ಜೀವನ ನಡೆಸುತ್ತಾರೆ. ಇವರು ಯಾವ ಸೀಮೆ ಸಮಾಜವಾದಿ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ವ್ಯಂಗ್ಯವಾಡಿದರು.
ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ನಾನು ಕುರಿ ಕಾದು ಬಂದವನು, ಸಮಾಜವಾದಿ ಹಿನ್ನೆಲೆಯುಳ್ಳವನು ಎಂದು ಸಿದ್ದರಾಮಯ್ಯ ಹೇಳಿಕೊಳ್ಳುತ್ತಾರೆ. ಐಷರಾಮಿ ಜೀವನ ನಡೆಸುವವರಿಗೆ ಸಮಾಜವಾದಿ ಸಿದ್ದಾಂತ ಬೇರೆ ಎಂದು ಟೀಕಾ ಪ್ರಹಾರ ಮಾಡಿದರು.
ನಾನು ಸಿದ್ದರಾಮಯ್ಯನವರಲ್ಲಿ ಎಂದೂ ಕೂಡ ಸಮಾಜವಾದವನ್ನು ಕಂಡಿಲ್ಲ. ಕೇವಲ ತೋರ್ಪಡಿಕೆಗೆ ಮಾತ್ರ ಸಮಾಜವಾದಿ ಎಂದರೆ ನಂಬುವುದಾದರೂ ಹೇಗೆ? ಎಂದು ಪ್ರಶ್ನಿಸಿದರು.
ನಾನು ರೈತರ ಮನೆಯಿಂದ ಬಂದವ. ನಾನು ಕುರಿ ಮೇಯಿಸುವವ ಎಂದು ಹೇಳುವವರಿಗೆ ನಾನು ಏಕವಚನವನ್ನು ಬಳಸುವುದಿಲ್ಲ. ರಾಜ್ಯದ ಅರ್ಧ ಬಜೆಟ್ನಷ್ಟು ಹಣವನ್ನು ನಮ್ಮ ಇಲಾಖೆ ರೈತರಿಗೆ ಗೊಬ್ಬರದ ಮೂಲಕ ನೀಡುತ್ತದೆ. ಇದರ ಬಗ್ಗೆ ಹಗುರವಾಗಿ ಮಾತನಾಡಿರುವ ಸಿದ್ದರಾಮಯ್ಯನವರು ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು.
ಅನೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಕಾರ್ಯಕರ್ತರೇ ಸಿಗುತ್ತಿಲ್ಲ. ಹತಾಶರಾಗಿ ನಮ್ಮ ಪಕ್ಷದ ವಿರುದ್ದ ಮನಬಂದಂತೆ ಮಾತನಾಡುತ್ತಿದ್ದಾರೆ ಇದಕ್ಕೆ ಫಲಿತಾಂಶವೇ ಉತ್ತರ ಕೊಡಲಿದೆ ಎಂದು ವಾಗ್ದಾಳಿ ನಡೆಸಿದರು.
15ಕ್ಕೆ 15 ಕ್ಷೇತ್ರಗಳಲ್ಲೂ ಬಿಜೆಪಿ ಗೆದ್ದೇ ಗೆಲ್ಲುತ್ತದೆ. ಇದರಲ್ಲಿ ಅನುಮಾನವೇ ಇಲ್ಲ. ಫಲಿತಾಂಶದ ನಂತರ ನಮ್ಮ ಸರ್ಕಾರ ಭದ್ರವಾಗಿರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೆ.ಆರ್.ನಗರ, ಹೊಸಕೋಟೆ ಸೇರಿದಂತೆ ಮತ್ತಿತರ ಕಡೆ ನಮ್ಮ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಕೂಡಲೇ ಆಯೋಗ ಇದನ್ನು ಸೂಕ್ಷ್ಮ ಕ್ಷೇತ್ರಗಳೆಂದು ಘೋಷಣೆ ಮಾಡಬೇಕು. ಜೊತೆಗೆ ವಿಶೇಷ ಗಮನಕೊಡಬೇಕೆಂದು ಆಗ್ರಹಿಸಿದರು.
ನಾನು ಪರಿಶ್ರಮದಿಂದ ಬಂದವನೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಅವರ ಪರಿಶ್ರಮ ಯಾವ ಪಂಚತಾರಾ ಹೋಟೆಲ್ನಲ್ಲಿ ಇತ್ತು ಎಂಬುದು ಎಲ್ಲರಿಗೂ ಗೊತ್ತು ಎಂದು ತಿರುಗೇಟು ನೀಡಿದರು.
ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಒಬ್ಬ ಶಾಸಕರನ್ನೂ ಕೂಡ ಅವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಈಗ ನನ್ನ ಪರಿಶ್ರಮದಿಂದ ಬಂದಿದ್ದೇನೆ ಎಂದು ಹೇಳುತ್ತಾರೆ. ನಿಮ್ಮ ಪರಿಶ್ರಮ ನಮಗೆ ಗೊತ್ತು ಎಂದು ವ್ಯಂಗ್ಯವಾಡಿದರು.