ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾದ ನವೆಂಬರ್ 18ರಿಂದಲೂ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಕಲಾಪಕ್ಕೆ ಹಾಜರಾಗದೆ ಚಕ್ಕರ್ ಹೊಡೆದಿದ್ದಾರೆ.
ಲೋಕಸಭೆಯಲ್ಲಿ ವೈನಾಡು ಸಂಸದರಿಗೆ ಹಂಚಿಕೆ ಮಾಡಲಾಗಿರುವ ಆಸನ ಕಳೆದ ಐದು ದಿನಗಳಿಂದಲೂ ಖಾಲಿ ಬಿದಿದ್ದು, ಅವರ ಗೈರು ಹಾಜರಿ ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ದೆಹಲಿಯಲ್ಲಿನ ವಾಯುಮಾಲಿನ್ಯ ಸಮಸ್ಯೆ, ಜಮ್ಮು- ಕಾಶ್ಮೀರದಲ್ಲಿನ ಪರಿಸ್ಥಿತಿ, ಗಾಂಧಿ ಕುಟುಂಬಕ್ಕಿದ್ದ ಎಸ್ ಪಿಜಿ ಭದ್ರತೆ ವಾಪಾಸ್ , ಚುನಾವಣಾ ಬಾಂಡ್ ಸೇರಿದಂತೆ ಅನೇಕ ಮಹತ್ವದ ವಿಚಾರಗಳು ಹಾಗೂ ಕಾಯ್ದೆಗಳ ಬಗ್ಗೆ ರಾಹುಲ್ ಗೈರು ಹಾಜರಿಯಲ್ಲಿ ಲೋಕಸಭೆಯಲ್ಲಿ ಚರ್ಚೆಗಳು ನಡೆದವು.
ಈ ಮಧ್ಯೆ ಸಮಾಜವಾದಿ ಅಧ್ಯಕ್ಷೆ ಅಖಿಲೇಶ್ ಯಾದವ್ ಕೇವಲ ಒಂದು ದಿನ ಮಾತ್ರ ಲೋಕಸಭೆ ಕಲಾಪದಲ್ಲಿ ಪಾಲ್ಗೊಂಡಿದ್ದರು. ರಾಹುಲ್ ಹಾಗೂ ಅಖಿಲೇಶ್ ಯಾದವ್ ಅವರ ಗೈರು ಹಾಜರಿಯನ್ನು ಬಿಜೆಪಿ ಸಂಸದ ಜಗದಾಂಬಿಕಾ ಪಾಲ್ ಪ್ರಶ್ನಿಸಿದರು. ಕಲಾಪ ಪ್ರಕ್ರಿಯೆಗಳಿಂದ ದೂರ ಉಳಿಯುವ ಧೋರಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಯುವ ಸಂಸದರು ಸಂಸತ್ತಿಗೆ ಬರಬೇಕು. ವಯಸ್ಸಾಗಿದ್ದರೂ ನಾವು ಪ್ರತಿದಿನ ಸಂಸತ್ ಗೆ ಬರುತ್ತೀವಿ. ನಮ್ಮ ಕ್ಷೇತ್ರಗಳಲ್ಲಿಯೂ ಸಕ್ರಿಯರಾಗಿದ್ದೀವಿ. ಆದರೆ, ಈ ಯುವ ಮುಖಂಡರ ಧೋರಣೆ ನಿರಾಶದಾಯಕವಾಗಿದೆ ಎಂದರು.
ಸಾರ್ವಜನಿಕರು ನಮ್ಮನ್ನು ಆಯ್ಕೆ ಮಾಡಿ ಸಂಸತ್ತಿಗೆ ಕಳುಹಿಸಿದ್ದಾರೆ. ಅವರ ಸಮಸ್ಯೆಗಳನ್ನು ಸದನದಲ್ಲಿ ಪ್ರಸ್ತಾಪಿಸಿ ಪರಿಹಾರ ಕಂಡುಕೊಳ್ಳಬೇಕಾಗಿದೆ. ಆದರೆ, ರಾಹುಲ್ ಗಾಂಧಿ ಸದನದಿಂದ ನಾಪತ್ತೆಯಾಗಿದ್ದಾರೆ ಎಂದು ಅವರು ಹೇಳಿದರು.ನವೆಂಬರ್ 18 ರಿಂದ ಆರಂಭವಾಗಿರುವ ಸಂಸತ್ತಿನ ಚಳಿಗಾಲದ ಅಧಿವೇಶನ ಡಿಸೆಂಬರ್ 13ರವರೆಗೆ ನಡೆಯಲಿದೆ.