ಮುಂಬೈ,ನ.23- ಬಿಜೆಪಿಯೇತರ ಸರ್ಕಾರ ರಚನೆ ಸ್ಪಷ್ಟರೂಪ ಪಡೆಯುತ್ತಿದ್ದಾಗಲೇ ಈ ಮೈತ್ರಿ ಕೂಟಕ್ಕೆ ಕೈ ಕೊಟ್ಟು ಬಿಜೆಪಿ ಜೊತೆ ಸೇರಿ ಉಪಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿರುವ ಎನ್ಸಿಪಿ ಪ್ರಭಾವಿ ನಾಯಕ ಅಜಿತ್ ಪವಾರ್ ವಿರುದ್ದ ಪಕ್ಷವೂ ಇಂದು ಸಂಜೆ ಶಿಸ್ತುಕ್ರಮ ಕೈಗೊಳ್ಳಲಿದೆ.
ಮುಂಬೈನಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ ಈ ವಿಷಯ ತಿಳಿಸಿದರು.
ಅಜಿತ್ ಬಿಜೆಪಿ ಜೊತೆ ಕೈ ಜೋಡಿಸಿರುವುದು ಪಕ್ಷದ ತತ್ವ ಸಿದ್ದಾಂತಗಳಿಗೆ ವಿರೋಧವಾದುದು ಎಂದ ಅವರು, ಅವರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳುವ ಬಗ್ಗೆ ಇಂದು ಸಂಜೆ ನಡೆಯುವ ಎನ್ಸಿಪಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವುದಾಗಿ ಅವರು ತಿಳಿಸಿದರು.
ಅಜಿತ್ಗೆ 11 ಶಾಸಕರ ಬೆಂಬಲ:
ಈ ಮಧ್ಯೆ ಅಜಿತ್ ಪವಾರ್ಗೆ ಎನ್ಸಿಪಿಯ 10ರಿಂದ 11 ಶಾಸಕರು ಬೆಂಬಲ ನೀಡಿದ್ದಾರೆ ಎಂದು ಸಂಗತಿಯೂ ಮಹಾರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.
ರಾಜ್ಯಪಾಲ ಭಗತ್ ಸಿಂಗ ಕೋಶಿಯಾರಿ ಅವರನ್ನು ಅಜಿತ್ ಭೇಟಿ ಮಾಡಿದ ಸಂದರ್ಭದಲ್ಲಿ 11 ಶಾಸಕರು ಅವರೊಂದಿಗೆ ತೆರಳಿದ್ದರು. ಆದರೆ ಈ ಶಾಸಕರು ತಮ್ಮ ಬೆಂಬಲ ಶರದ್ ಪವಾರ್ ಅವರ ಪರ ಇದೆ ಎಂದು ಹೇಳುತ್ತಿದ್ದರಾದರೂ ಅಜಿತ್ ಪವಾರ್ ಜೊತೆ ಇವರು ಹೋಗಿದ್ದು ಏಕೆ ಎಂಬುದು ಗೊಂದಲಕಾರಿಯಾಗಿದೆ.
ಇಂದು ಸಂಜೆ ನಡೆಯುವ ಎನ್ಸಿಪಿ ಮಹತ್ವದ ಸಭೆಯಲ್ಲಿ ಪವಾರ್ ವಿರುದ್ದ ಶಿಸ್ತು ಕ್ರಮ ಕೈಗೊಂಡು ಒಂದು ವೇಳೆ ಅವರನ್ನು ಪಕ್ಷದಿಂದ ಉಚ್ಛಾಟಿಸುವ ನಿರ್ಧರಿಸಿದ್ದೇಯಾದರೆ ಮುಂದಿನ ಬೆಳವಣಿಗೆ ಕುತೂಹಲಕಾರಿಯಾಗಿದೆ.
ಒಟ್ಟಾರೆ ಮಹಾರಾಷ್ಟ್ರದ ರಾಜ್ಯ ರಾಜಕಾರಣದ ಪ್ರಸ್ತುತ ಸ್ಥಿತಿ ಸಾಂವಿಧಾನಿಕ ಬಿಕ್ಕಟ್ಟಿಗೂ ಎಡೆ ಮಾಡಿಕೊಡುವ ಸಾಧ್ಯತೆಯೂ ಇದೆ.