ಬೆಂಗಳೂರು, ನ.23- ಜೆಡಿಎಸ್ ರಾಜ್ಯದ ಜನರ ಅಭಿವೃದ್ಧಿಯ ಪರವಾಗಿದೆಯೇ ಹೊರತು ಯಾವುದೇ ಪಕ್ಷದ ಪರವಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದರು.
ಆದಿಚುಂಚನಗಿರಿ ವಿಜಯನಗರ ಶಾಖಾಮಠದಲ್ಲಿ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಆಶೀರ್ವಾದ ಪಡೆದ ನಂತರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ ಕಂದಾಯ ಸಚಿವ ಆರ್.ಅಶೋಕ್ ಅವರು ಜೆಡಿಎಸ್ ಯಾರ ಪರ ಎಂದು ಪ್ರಶ್ನಿಸಿದ್ದಾರೆ. ಆದರೆ, ನಾನು ಬಿಜೆಪಿ ಪರವೂ ಇಲ್ಲ, ಕಾಂಗ್ರೆಸ್ ಪರವೂ ಇಲ್ಲ. ನಾಡಿನ ಜನರ ಪರ ಎಂದರು.
ಅನರ್ಹ ಶಾಸಕರು ಅಭಿವೃದ್ಧಿಗೆ ಅನುದಾನ ನೀಡಿಲ್ಲ ಎಂದು ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಯಾವ ಯಾವ ಕ್ಷೇತ್ರಕ್ಕೆ ಎಷ್ಟೆಷ್ಟು ಅನುದಾನ ನೀಡಲಾಗಿದೆ ಎಂಬ ದಾಖಲೆ ಇದೆ. ಆ ದಾಖಲೆ ಜನರ ಮುಂದಿಡುತ್ತೇನೆ ಎಂದರು.
ನಗರೋತ್ಥಾನ ಯೋಜನೆಯಲ್ಲಿ ನೀಡಲಾಗಿರುವ ಅನುದಾನದ ಬಗ್ಗೆ ಮಾಹಿತಿ ಇದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಾವು ಮಂಜೂರು ಮಾಡಿದ್ದ ಅನುದಾನಕ್ಕೆ ಆದೇಶ ನೀಡಿದ್ದಾರೆ. ಆದರೆ, ಅನರ್ಹ ಶಾಸಕರು ತಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.
ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರಕ್ಕೆ ತಮ್ಮ ಅವಧಿಯಲ್ಲಿ ಎಷ್ಟು ಅನುದಾನ ನೀಡಿದ್ದೇನೆ ಎಂಬುದಕ್ಕೆ ದಾಖಲೆ ಇದೆ. ಆದರೆ, ಆ ಕ್ಷೇತ್ರದ ಶಾಸಕರು ಅಭಿವೃದ್ಧಿಗೆ ಅನುದಾನ ನೀಡಿಲ್ಲ ಎಂದು ಇಲ್ಲಸಲ್ಲದ ಆರೋಪ ಹೊರಿಸುತ್ತಿದ್ದಾರೆ. ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜನರ ವಿಶ್ವಾಸ ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದ್ದೇನೆಯೇ ಹೊರತು ಕೇವಲ ಪ್ರತಿಷ್ಠೆಗಾಗಿ ಅಲ್ಲ ಎಂದು ಸ್ಪಷ್ಟಪಡಿಸಿದರು.