ಬೆಂಗಳೂರು, ನ.23-ರಾಜ್ಯದ ಹದಿನೈದು ಕ್ಷೇತ್ರಗಳ ಉಪಚುನಾವಣಾ ಪ್ರಚಾರದ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜಿದ್ದಾಜಿದ್ದಿಗೆ ಬಿದ್ದಿರುವ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳ ನಾಯಕರು ಮತದಾರರ ಮನವೊಲಿಕೆಗೆ ಹರಸಾಹಸ ಪಡುತ್ತಿದ್ದಾರೆ.
ಬಹಿರಂಗ ಸಭೆ, ರೋಡ್ಶೋ, ರ್ಯಾಲಿಗಳ ಮೂಲಕ ಮತದಾರರನ್ನು ತಮ್ಮತ್ತ ಸೆಳೆಯುವ ಪ್ರಯತ್ನ ಒಂದೆಡೆಯಾದರೆ , ಔತಣಕೂಟ, ಬಾಡೂಟ, ಉಡುಗೊರೆಗಳ ಮೂಲಕ ಮತದಾರರನ್ನು ಆಕರ್ಷಿಸುವ ತಂತ್ರ ಮತ್ತೊಂದೆಡೆ ನಡೆಯುತ್ತಿದೆ. ಮಹಾಲಕ್ಷ್ಮೀ ಲೇಔಟ್, ಯಶವಂತಪುರ, ಕೆ.ಆರ್.ಪುರ, ಶಿವಾಜಿನಗರ, ಚಿಕ್ಕಬಳ್ಳಾಪುರ, ಕೆ.ಆರ್.ಪೇಟೆ, ಹುಣಸೂರು, ರಾಣೆಬೆನ್ನೂರು, ಹಿರೇಕೆರೂರು, ಯಲ್ಲಾಪುರ, ಅಥಣಿ, ಗೋಕಾಕ, ಕಾಗವಾಡ, ವಿಜಯನಗರ ಹದಿನೈದು ಕ್ಷೇತ್ರಗಳಲ್ಲಿ ಚುನಾವಣೆ ಪ್ರಚಾರದ ಭರಾಟೆ ಜೋರಾಗಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಬೆಳಗಾವಿಯ ಮೂರು ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರೆ, ಮಾಜಿಮುಖ್ಯಮಂತ್ರಿ ಕುಮಾರಸ್ವಾಮಿ ಬೆಂಗಳೂರಿನ ನಗರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಇಂದು ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ವೀಕ್ಷಕರ ಸಭೆ ನಡೆಸಿ ಚುನಾವಣಾ ಪ್ರಚಾರ ಪ್ರಗತಿಯ ಬಗ್ಗೆ ಮಾಹಿತಿ ಪಡೆದರು.
ಅಭ್ಯರ್ಥಿಗಳು ಮತದಾರರ ಮನವೊಲಿಸಲು ತಮ್ಮ ಬೆಂಬಲಿಗರೊಂದಿಗೆ ಬೆಳಗ್ಗೆಯಿಂದಲೇ ಮನೆ ಮನೆಗೆ ತೆರಳಿ ಮತ ಯಾಚಿಸುತ್ತಿದ್ದಾರೆ. ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಪಕ್ಷ ಬದಲಿಸಿರುವುದರಿಂದ ಗೊಂದಲ ಏರ್ಪಟ್ಟಿದ್ದು, ಅಭ್ಯರ್ಥಿಗಳು ಹಾಗೂ ಬೆಂಬಲಿಗರು ಪಕ್ಷ ಮತ್ತು ಚಿಹ್ನೆಯನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡುತ್ತಿದ್ದಾರೆ.
ಕೆ.ಆರ್.ಪೇಟೆ, ಚಿಕ್ಕಬಳ್ಳಾಪುರ, ಹುಣಸೂರಿನ ಹಲವೆಡೆ ಮತದಾರರ ಮನವೊಲಿಕೆಗೆ ವಿವಿಧ ಆಮಿಷಗಳನ್ನು ಒಡ್ಡಲಾಗುತ್ತಿದೆ. ಹೊಸಕೋಟೆಯಲ್ಲಿ ಮತದಾರರಿಗೆ ಕುಕ್ಕರ್ಗಳನ್ನು ನೀಡಲಾಗುತ್ತಿದೆ. ಅತ್ತ ಹುಣಸೂರು ಕ್ಷೇತ್ರದಲ್ಲಿ ಬೀಗರ ಔತಣಕೂಟದ ನೆಪದಲ್ಲಿ ಸಾವಿರಾರು ಜನರಿಗೆ ಬಾಡೂಟ ಏರ್ಪಡಿಸಲಾಗಿದೆ.
ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸೀರೆಗಳನ್ನು ವಿತರಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಕೆ.ಆರ್.ಪೇಟೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮದ್ಯದ ಕೂಪನ್ಗಳನ್ನು ನೀಡಲಾಗಿದೆ. ಚುನಾವಣಾ ಆಯೋಗ ಚಾಪೆ ಕೆಳಗೆ ನುಸುಳಿದರೆ ಅಭ್ಯರ್ಥಿಗಳು ರಂಗೋಲಿ ಕೆಳಗೆ ನುಸುಳುವ ತಂತ್ರ ಅನುಸರಿಸಿದ್ದಾರೆ.
ಮದ್ಯದ ಕೂಪನ್, ಉಡುಗೊರೆಗಳ ಕೂಪನ್ಗಳನ್ನು ನೀಡುತ್ತಿದ್ದಾರೆ. ಆಯೋಗದ ಅಧಿಕಾರಿಗಳು ಮದ್ಯದ ಅಂಗಡಿಗಳಿಗೆ ಭೇಟಿ ನೀಡಿ ಕೂಪನ್ಗಳನ್ನು ಪಡೆದು ಮದ್ಯ ನೀಡಬಾರದು ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.
ಬಹಿರಂಗ ಪ್ರಚಾರಕ್ಕೆ ಇನ್ನು ಹತ್ತು ದಿನಗಳು ಬಾಕಿ ಇದ್ದು, 15 ಕ್ಷೇತ್ರಗಳಲ್ಲಿರುವ ಮೂರು ಪಕ್ಷಗಳ ಅಭ್ಯರ್ಥಿಗಳು ಪ್ರಚಾರವನ್ನು ತೀವ್ರಗೊಳಿಸಿದ್ದಾರೆ. ತಾರಾ ಪ್ರಚಾರಕರೊಂದಿಗೆ ಮತದಾರರ ಮನ ಸೆಳೆಯಲು ಮುಂದಾಗಿದ್ದಾರೆ.
ಚಲನಚಿತ್ರ ನಟ-ನಟಿಯರು ಕಿರುತೆರೆಗಳ ಕಲಾವಿದರನ್ನು ತಮ್ಮ ಕ್ಷೇತ್ರಗಳಿಗೆ ಆಹ್ವಾನಿಸಿ ಮತ ಪ್ರಚಾರ ಮಾಡುವ ತಂತ್ರ ಅನುಸರಿಸುತ್ತಿದ್ದಾರೆ. ಮಂದಿರ, ಮಸೀದಿ ಚರ್ಚ್ಗಳಿಗೆ ಭೇಟಿ ನೀಡಿ ಧಾರ್ಮಿಕ ಮುಖಂಡರೊಂದಿಗೆ ಮಾತುಕತೆ ನಡೆಸಿ ಬೆಂಬಲ ಯಾಚಿಸುತ್ತಿದ್ದಾರೆ.
ಚಿಕ್ಕಬಳ್ಳಾಪುರ, ಕೆ.ಆರ್.ಪೇಟೆ, ಕೋಲಾರ, ಹುಣಸೂರು, ಮಹಾಲಕ್ಷ್ಮೀ ಲೇಔಟ್, ಹೊಸಕೋಟೆ, ಕೆ.ಆರ್.ಪುರ ಮುಂತಾದೆಡೆ ಚುನಾವಣಾ ಪ್ರಚಾರಕ್ಕೆ ಕೂಲಿ ಕಾರ್ಮಿಕರು ತೆರಳುತ್ತಿರುವುದರಿಂದ ಕೆಲಸಕ್ಕೆ ಜನ ಸಿಗುತ್ತಿಲ್ಲ ಎಂದು ಗುತ್ತಿಗೆದಾರರು ಗೊಣಗುತ್ತಿದ್ದಾರೆ. ದಿನವೊಂದಕ್ಕೆ ಪ್ರಚಾರಕ್ಕೆ ಹೋಗುವವರಿಗೆ 500 ರಿಂದ 1000 ರೂ.ಗಳ ಕೊಡಲಾಗುತ್ತದೆ. ಹಾಗಾಗಿ ಕೂಲಿ ಕೆಲಸ ಬಿಟ್ಟು ಪಕ್ಷದ ಬಾವುಟ ಹಿಡಿದು ಕೂಲಿ ಕಾರ್ಮಿಕರು ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿರುವುದರಿಂದ ಕೆಲಸಕ್ಕೆ ಆಳುಗಳು ಸಿಗುತ್ತಿಲ್ಲ. ಬಹುತೇಕ ಕಡೆ ಇದೇ ಪರಿಸ್ಥಿತಿ ಇದೆ.
ಒಟ್ಟಾರೆ ಉಪಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಚುನಾವಣಾ ಕಣ ರಂಗೇರತೊಡಗಿದೆ. ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ಅಸ್ತಿತ್ವದ ಪ್ರಶ್ನೆಯಾಗಿರುವ ಚುನಾವಣೆ ಪ್ರತಿಪಕ್ಷ ಕಾಂಗ್ರೆಸ್-ಜೆಡಿಎಸ್ಗೆ ಪ್ರತಿಷ್ಠೆಯಾಗಿರುವುದರಿಂದ ತೀವ್ರ ಪೈಪೋಟಿಯ ಪ್ರಚಾರ ನಡೆದಿದೆ. ಮೂರೂ ಪಕ್ಷಗಳ ಮುಖಂಡರು ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ. ಹೆಚ್ಚಾಗಿ ವೈಯಕ್ತಿಕ ನಿಂದನೆಗಳು ಕೂಡ ಕೇಳಿ ಬರುತ್ತಿವೆ. ಡಿ.5 ರಂದು ನಡೆಯಲಿರುವ ಚುನಾವಣೆಯಲ್ಲಿ ಮತದಾರ ಯಾರ ಕೈ ಹಿಡಿಯಲಿದ್ದಾರೆ ಎಂಬುದನ್ನು ಕಾದು ನೋಡಬೇಕು.