ಮುಂಬೈ, ನ.23- ಹೈವೋಲ್ಟೇಜ್ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ಒಂದು ತಿಂಗಳ ಬಳಿಕ ಅಚ್ಚರಿ ರಾಜಕೀಯ ಬೆಳವಣಿಗೆಯೊಂದರಲ್ಲಿ ಭಾರತೀಯ ಜನತಾಪಕ್ಷ (ಬಿಜೆಪಿ) ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ(ಎನ್ಸಿಪಿ) ಮೈತ್ರಿ ಸರ್ಕಾರ ರಚನೆಯಾದ ಬೆನ್ನಲ್ಲೇ ಅನಿರೀಕ್ಷಿತ ವಿದ್ಯಮಾನಗಳೂ ಘಟಿಸುತ್ತಿವೆ. ಭುಗಿಲೆದ್ದ ಭಿನ್ನಾಭಿಪ್ರಾಯಗಳಿಂದಾಗಿ ಎನ್ಸಿಪಿ ಈಗ ಇಬ್ಭಾಗವಾಗುವತ್ತ ಸಾಗಿದೆ.
ಶಿವಸೇನೆ ಮತ್ತು ಕಾಂಗ್ರೆಸ್ ಜತೆ ಸೇರಿ ಎನ್ಸಿಪಿ ಇನ್ನೇನು ಸರ್ಕಾರ ರಚಿಸಲಿದೆ ಎನ್ನುವಷ್ಟರಲ್ಲೇ ಇಂದು ಮುಂಜಾನೆ ನಡೆದ ಹಠಾತ್ ರಾಜಕೀಯ ವಿದ್ಯಮಾನದಲ್ಲಿ ಬಿಜೆಪಿ ಜತೆ ಸೇರಿ ಎನ್ಸಿಪಿ ಸರ್ಕಾರ ರಚಿಸಿದೆ. ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವಿಸ್ ಎರಡನೆ ಬಾರಿ ಪ್ರಮಾಣ ವಚನ ಸ್ವೀಕರಿಸಿದರೆ, ಉಪ ಮುಖ್ಯಮಂತ್ರಿಯಾಗಿ ಎನ್ಸಿಪಿ ಹಿರಿಯ ನಾಯಕ ಅಜಿತ್ ಪವಾರ್ ಪದಗ್ರಹಣ ಮಾಡಿದರು.
ಆದರೆ, ಬಿಜೆಪಿಗೆ ಬೆಂಬಲ ನೀಡಿ ಎನ್ಸಿಪಿ ಸರ್ಕಾರ ರಚಿಸಿರುವುದು ಆ ಪಕ್ಷದಲ್ಲೇ ಭಿನ್ನಾಭಿಪ್ರಾಯಗಳು ಸ್ಫೋಟಗೊಳ್ಳುವಂತೆ ಮಾಡಿದೆ. ಎನ್ಸಿಪಿ ಅಧ್ಯಕ್ಷ ಶರದ್ ಯಾದವ್ ಅವರೇ ಇದು ತಮ್ಮ ಪಕ್ಷದ ನಿರ್ಧಾರವಲ್ಲ. ಇದು ಅಜಿತ್ ಪವಾರ್ ವೈಯಕ್ತಿಕ ಮತ್ತು ಸ್ವಂತ ನಿರ್ಧಾರ ಎಂದು ಸ್ಪಷ್ಟಪಡಿಸಿದ್ದಾರೆ. ಇದು ಎನ್ಸಿಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದಕ್ಕೆ ನಿದರ್ಶನವಾಗಿದೆ.
ಈ ಬೆಳವಣಿಗೆಯಿಂದಾಗಿ ಎನ್ಸಿಪಿ ಈಗ ಎರಡು ಭಾಗವಾಗುವ ಸಾಧ್ಯತೆ ಇದೆ. ಇಂದು ಶರದ್ ಪವಾರ್ ಬಣ ಮತ್ತೊಂದು ಅಜಿತ್ ಪವಾರ್ ಗುಂಪು ಎಂದು ಪ್ರತ್ಯೇಕವಾಗಿ ಗುರುತಿಸಿಕೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ.
ಶಿವಸೇನೆ-ಎನ್ಸಿಪಿ-ಕಾಂಗ್ರೆಸ್ ನಿನ್ನೆ ರಾತ್ರಿವರೆಗೆ ಹೊಸ ಮೈತ್ರಿ ಸರ್ಕಾರ ರಚನೆ ಬಗ್ಗೆ ಚರ್ಚಿಸಿ ಇಂದು ಅಧಿಕೃತ ಘೋಷಣೆಯಾಗಬೇಕಿತ್ತು. ಅಷ್ಟರೊಳಗೆ ನಿನ್ನೆ ಮಧ್ಯರಾತ್ರಿ ನಂತರ ನಡೆದ ಕ್ಷಿಪ್ರ ಬೆಳವಣಿಗೆಯಲ್ಲಿ ಬಿಜೆಪಿ-ಎನ್ಸಿಪಿ ಮೈತ್ರಿ ಸರ್ಕಾರ ರಚನೆಯಾಗಿ ಸಿಎಂ ಮತ್ತು ಡಿಸಿಪಿ ಅಧಿಕಾರ ಸ್ವೀಕರಿಸಿರುವುದು ಶಿವಸೇನೆ ಮತ್ತು ಕಾಂಗ್ರೆಸ್ಗೆ ಮಾತ್ರವಲ್ಲದೆ ಎನ್ಸಿಪಿಯ ಕೆಲವು ನಾಯಕರಿಗೂ ಶಾಕ್ ನೀಡಿದಂತಾಗಿದೆ.
ಅಜಿತ್ ಪವಾರ್ ನಮ್ಮ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಈ ಮೂರು ಪಕ್ಷಗಳ ಮುಖಂಡರು ಆರೋಪಿಸುತ್ತಿದ್ಧಾರೆ.
ಶಿವಸೇನೆ ನಾಯಕ ಸಂಜಯ್ ರಾವತ್, ಎನ್ಸಿಪಿ ಮುಖಂಡರಾದ ನವಾಬ್ ಮಲ್ಲಿಕ್, ತಾರೀಖ್ ಅನ್ವರ್ ಹಾಗೂ ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲ, ಬಿಜೆಪಿ ಮತ್ತು ಅಜಿತ್ ಪವಾರ್ ವಿರುದ್ಧ ಕೆಂಡಾಮಂಡಲವಾಗಿದ್ದಾರೆ. ಒಟ್ಟಾರೆ ಮುಂದಿನ ಬೆಳವಣಿಗೆ ಕುತೂಹಲಕಾರಿಯಾಗಿದೆ.