ಮೈಸೂರು: ಅನರ್ಹ ಶಾಸಕ ಎಂಟಿಬಿ ನನಗೆ ಸಾಲ ಕೊಟ್ಟಿಲ್ಲ, ಆಪರೇಷನ್ ಕಮಲ ಮಾಡಲು ಬಿಜೆಪಿಗೆ ದುಡ್ಡು ಕೊಟ್ಟಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಪರೇಷನ್ ಕಮಲಕ್ಕೆ ಎಂಟಿಬಿ ನಾಗರಾಜ್ ಸಾಲ ಕೊಟ್ಟಿದ್ದಾನೆ. ಅದಕ್ಕೆ ಯಡಿಯೂರಪ್ಪಗೆ ಎಂಟಿಬಿ ನಾಗರಾಜ್ ಮೇಲೆ ಪ್ರೀತಿ. ಆತ ಆಪರೇಷನ್ ಕಮಲದಲ್ಲಿ ಹಣ ಪಡೆದಿಲ್ಲ. ಬದಲಿಗೆ ಅವನೇ ಯಡಿಯೂರಪ್ಪಗೆ ಹಣ ನೀಡಿದ್ದಾನೆ ಎಂದು ವ್ಯಂಗ್ಯವಾಡಿದರು.
ನನ್ನ ಬಳಿ ಸಿದ್ದರಾಮಯ್ಯ ಸಾಲ ಪಡೆದು ಅದನ್ನು ವಾಪಸ್ ಮಾಡಿಲ್ಲ ಎಂಬ ಎಂಟಿಬಿ ಆರೋಪವನ್ನು ತಳ್ಳಿಹಾಕಿರುವ ಅವರು, ನಾನು ನಾಗರಾಜನಿಂದ ಸಾಲವನ್ನೇ ಪಡೆದಿಲ್ಲ. ಸಾಲ ಪಡೆದಿಲ್ಲದ ಮೇಲೆ ವಾಪಸ್ ಕೊಡುವುದು ಏನನ್ನು? ಕೃಷ್ಣಭೈರೇಗೌಡ ಲೋಕಸಭೆ ಚುನಾವಣೆ ವೇಳೆ ಸಾಲ ಪಡೆದಿದ್ದ. ಅವನು ಅದನ್ನು ವಾಪಸ್ ಮಾಡಿದ್ದಾನೆ ಎಂದು ತಿಳಿಸಿದರು.
ಇದೇ ವೇಳೆ ಪಾರದರ್ಶಕವಾಗಿ ಚುನಾವಣೆ ನಡೆಯುತ್ತಿಲ್ಲ. ಕುಕ್ಕರ್ ಸೀರೆ ಫ್ರಿಡ್ಜ್ಳನ್ನು ಹಂಚುತ್ತಿದ್ದಾರೆ. ಮಾರಾಟವಾದಾಗಲೂ ದುಡ್ಡು ಬಂದಿದೆ. ಚುನಾವಣೆಗೆ ಅಂತಾನೂ ದುಡ್ಡು ಬಂದಿದೆ. ಅಡ್ಡಬಿಟ್ಟಿ ದುಡ್ಡು ಅದಕ್ಕೆ ಹಂಚುತ್ತಿದ್ದಾರೆ ಎಂದು ಪರೋಕ್ಷವಾಗಿ ಎಚ್ ವಿಶ್ವನಾಥ್ ಮೇಲೆ ಕಿಡಿಕಾರಿದರು.
ಜಿಟಿಡಿ ಜೊತೆ ಮಾತನಾಡುತ್ತೇನೆ. ಅವರು ಯಾಕೆ ಚುನಾವಣೆಯಲ್ಲಿ ತಟಸ್ಥರಾಗಿದ್ದಾರೆ ಎಂದು ಕೇಳುತ್ತೇನೆ. ನೋಡೋಣಾ ಏನೇನಾಗುತ್ತೆ ಎಂದರು.
ಯಡಿಯೂರಪ್ಪ ಬರೀ ಸುಳ್ಳು ಹೇಳುತ್ತಾರೆ. ಹಿಂದೆ ಈ ತಾಲೂಕನ್ನು ದತ್ತು ಪಡೆಯುವುದಾಗಿ ಹೇಳಿದ್ದರು. ಎಲ್ಲಿ ಪಡೆದರು? ಇದು ಬರೀ ಚುನಾವಣಾ ಗಿಮಿಕ್.
ಯಡಿಯೂರಪ್ಪ ಎಲ್ಲರನ್ನೂ ಗೆಲ್ಲಿಸುತ್ತೇನೆ ಅಂತಾರೆ. ಆದರೆ ಜನರನ್ನು ದಡ್ಡರನ್ನಾಗಿ ಮಾಡಲು ಸಾಧ್ಯವಿಲ್ಲ. ಜನರಿಗೆ ಎಲ್ಲಾ ಗೊತ್ತಿದೆ ಎಂದು ಸಿಎಂ ಮೇಲೆ ಕಿಡಿಕಾರಿದರು.