ನವದೆಹಲಿ:ಐಎನ್ ಎಕ್ಸ್ ಮೀಡಿಯಾ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ವಿತ್ತ ಸಚಿವ ಪಿ.ಚಿದಂಬರಂಗೆ ದೆಹಲಿ ಹೈಕೋರ್ಟ್ ಜಾಮೀನು ತಿರಸ್ಕರಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿ ಬಗ್ಗೆ ಉತ್ತರ ನೀಡುವಂತೆ ಸುಪ್ರೀಂಕೋರ್ಟ್ ಬುಧವಾರ ಜಾರಿ ನಿರ್ದೇಶನಾಲಯಕ್ಕೆ ನೋಟಿಸ್ ಜಾರಿ ಮಾಡಿದೆ.
ಈ ಹಿನ್ನೆಲೆಯಲ್ಲಿ ಚಿದಂಬರಂ ಜಾಮೀನು ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ನವೆಂಬರ್ 26ಕ್ಕೆ ಮುಂದೂಡಿದೆ. ಇದರಿಂದಾಗಿ ಚಿದಂಬರಂ ಜೈಲುವಾಸ ಮುಂದುವರಿದಂತಾಗಿದೆ.
ನೂತನವಾಗಿ ಸಿಜೆಐ ಆಗಿ ಆಯ್ಕೆಯಾಗಿದ್ದ ಎಸ್.ಎ.ಬೋಬ್ಡೆ ಅವರು, ಚಿದಂಬರಂ ಜಾಮೀನು ಅರ್ಜಿ ಕುರಿತ ವಿಚಾರಣೆಯನ್ನು ನಡೆಸಲು ಸೂಕ್ತ ಪೀಠಕ್ಕೆ ನೀಡಲು ಆದೇಶಿಸುವುದಾಗಿ ಸೋಮವಾರ ತಿಳಿಸಿದ್ದರು. ಚಿದಂಬರಂ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ನವೆಂಬರ್ 15ರಂದು ವಜಾಗೊಳಿಸಿತ್ತು. ಮೇಲ್ನೋಟಕ್ಕೆ ಚಿದಂಬರಂ ಮೇಲೆ ಇರುವ ಆರೋಪ ಗಂಭೀರವಾಗಿದ್ದು, ಈ ಆರೋಪದಲ್ಲಿ ಚಿದಂಬರಂ ಸಕ್ರಿಯವಾಗಿ ಮತ್ತು ಮುಖ್ಯ ಪಾತ್ರ ವಹಿಸಿದ್ದರು ಎಂದು ಇ.ಡಿ ಪರ ವಕೀಲರು ಆಕ್ಷೇಪಣೆ ಸಲ್ಲಿಸಿದ್ದರು.
ಐಎನ್ ಎಕ್ಸ್ ಮೀಡಿಯ ಪ್ರಕರಣದಲ್ಲಿ ಸಿಬಿಐ ಆಗಸ್ಟ್ 21ರಂದು ಚಿದಂಬರಂ ಅವರನ್ನು ಬಂಧಿಸಿತ್ತು. ಅಕ್ಟೋಬರ್ 22ರಂದು ಸುಪ್ರೀಂಕೋರ್ಟ್ ಈ ಪ್ರಕರಣದಲ್ಲಿ ಜಾಮೀನು ನೀಡಿತ್ತು. ಏತನ್ಮಧ್ಯೆ ಹಣಕಾಸು ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 16ರಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದರು.