ಮುಂಬೈ: ಭಾರ್ತಿ ಏರ್ ಟೆಲ್ ಮತ್ತು ವೋಡಾ ಫೋನ್ ದರ ಏರಿಕೆ ಮಾಡುವುದಾಗಿ ಘೋಷಿಸಿದ ಬೆನ್ನಲ್ಲೇ ಉಳಿದ ಟೆಲಿಕಾಂ ಸಂಸ್ಥೆಗಳು ದರ ಏರಿಕೆ ಮಾಡುವುದಾಗಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಮುಂಬೈ ಶೇರುಪೇಟೆ ವಹಿವಾಟು ಬುಧವಾರ ಭಾರೀ ಜಿಗಿತ ಕಂಡಿದೆ.
ಮುಂಬೈ ಶೇರು ಪೇಟೆ ಸೆನ್ಸೆಕ್ಸ್ ಸೂಚ್ಯಂಕ ವಹಿವಾಟಿನ ಆರಂಭದಲ್ಲೇ 346 ಅಂಕಗಳಷ್ಟು ದಾಖಲೆ ಮಟ್ಟದ ಏರಿಕೆ ಕಂಡಿದ್ದು, ವಹಿವಾಟು 40,816 ಅಂಕಗಳ ಗಡಿ ದಾಟಿದೆ.
ರಾಷ್ಟ್ರೀಯ ಶೇರು ಮಾರುಕಟ್ಟೆ ನಿಫ್ಟಿ ಸೂಚ್ಯಂಕ 94 ಅಂಕಗಳ ಏರಿಕೆಯೊಂದಿಗೆ 12,034 ಅಂಕಗಳ ದಾಖಲೆಯ ಗಡಿದಾಟಿದೆ ಎಂದು ಶೇರುಪೇಟೆ ವರದಿ ತಿಳಿಸಿದೆ.
ಮುಂಬೈ ಶೇರುಪೇಟೆ ಸೆನ್ಸೆಕ್ಸ್ ಏರಿಕೆಯಿಂದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಡೆಡ್ ನ ಶೇರುಗಳು ಶೇ.4ರಷ್ಟು ಏರಿಕೆ ಕಂಡಿದ್ದು, ಶೇರು ಬೆಲೆ 1,571.85 ರೂಪಾಯಿಯಷ್ಟು ಏರಿಕೆಯಾಗಿದೆ. ಇದರೊಂದಿಗೆ ಆರ್ ಐಎಲ್ ಮಾರುಕಟ್ಟೆ ಬಂಡವಾಳ ಹತ್ತು ಲಕ್ಷ ಕೋಟಿ ರೂಪಾಯಿಗೆ ತಲುಪಿದೆ.
ಇನ್ನು ಇಂಡಸ್ ಲ್ಯಾಂಡ್ ಬ್ಯಾಂಕ್, ಸನ್ ಫಾರ್ಮಾ, ಎಲ್ ಅ್ಯಂಡ್ ಟಿ, ಭಾರ್ತಿ ಏರ್ ಟೆಲ್, ಟಿಸಿಎಸ್, ಮಾರುತಿ ಮತ್ತು ಬಜಾಜ್ ಫೈನಾನ್ಸ್ ಶೇರು ಲಾಭ ಕಂಡಿದೆ. ಯೆಸ್ ಬ್ಯಾಂಕ್, ಬಜಾಜ್ ಆಟೋ, ಎನ್ ಟಿಪಿಸಿ, ಇನ್ಫೋಸಿಸ್, ಕೋಟಕ್ ಬ್ಯಾಂಕ್, ಎಚ್ ಯುಎಲ್ ಶೇರುಗಳು ನಷ್ಟ ಕಂಡಿರುವುದಾಗಿ ವರದಿ ತಿಳಿಸಿದೆ.