ನವದೆಹಲಿ: ಮಹಾರಾಷ್ಟ್ರ ಸರ್ಕಾರ ರಚನೆ ಇನ್ನು ಕಗ್ಗಂಟ್ಟಾಗಿದ್ದು, ಸರ್ಕಾರ ರಚನೆಗೆ ಯಾವುದೇ ಪಕ್ಷ ಇನ್ನು ಒಮ್ಮತದ ನಿರ್ಣಯಕ್ಕೆ ಬಾರದ ಹಿನ್ನೆಲೆ ಈ ಕುರಿತು ಇಂದು ಪ್ರಧಾನಿ ನರೇಂದ್ರ ಮೋದಿ ಜೊತೆ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕ ಶರದ್ ಪವಾರ್ ಮಾತುಕತೆ ನಡೆಸಲಿದ್ದಾರೆ.
ಸಂಸತ್ ಅಧಿವೇಶನದ ಬಳಿಕ ಇಬ್ಬರು ನಾಯಕರು ಭೇಟಿ ಮಾಡಲಿದ್ದಾರೆ. ಇದೇ ವೇಳೆ ಅವರು ಮಹಾರಾಷ್ಟ್ರ ರೈತರ ಸಮಸ್ಯೆ ಕೂಡ ಚರ್ಚಿಸಲಿದ್ದಾರೆ.
ಮಹಾರಾಷ್ಟ್ರದಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬಾರದ ಹಿನ್ನೆಲೆ ಮೈತ್ರಿ ಪಕ್ಷಕ್ಕೆ ಬೆಂಬಲ ನೀಡುವಲ್ಲಿ ಎನ್ಸಿಪಿ ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿರುವ ಹಿನ್ನೆಲೆ ಶರದ್ ಪವಾರ್ ಅವರ ಈ ಭೇಟಿ ಅತ್ಯಂತ ಮಹತ್ವದ್ದಾಗಿದೆ.
ಇದಾದ ಬಳಿಕ ಸಂಜೆ ಎನ್ಸಿಪಿ ಮತ್ತು ಕಾಂಗ್ರೆಸ್ ನಾಯಕರು ಭೇಟಿಯಾಗಿ ಮಾತನಾಡಲಿದ್ದು, ಶಿವಸೇನೆಗೆ ಬೆಂಬಲಿಸುವ ಕುರಿತು ಚರ್ಚೆ ನಡೆಸಲಿದ್ದಾರೆ. ಇಷ್ಟು ವರ್ಷಗಳ ಕಾಲ ಬಿಜೆಪಿಗೆ ಬೆಂಬಲಿಸಿದ್ದ ಶಿವಸೇನೆ ಈಗ ಮೈತ್ರಿ ಮುರಿದಿದ್ದು, ಶಿವಸೇನೆಯೊಡನೆ ತಮ್ಮ ಮೈತ್ರಿಯ ಭವಿಷ್ಯದ ಬಗ್ಗೆ ಕೂಡ ಚರ್ಚಿಸಲಿದ್ದಾರೆ.
ತಮ್ಮ ರಾಜಕೀಯ ಎದುರಾಳಿಯಾಗಿರುವ ಎನ್ಸಿಪಿ ಹಾಗೂ ಕಾಂಗ್ರೆಸ್ ಜೊತೆ ಸರ್ಕಾರ ರಚಿಸುವ ಭರವಸೆಯಲ್ಲಿ ಸೇನೆ ಇದೆ. ಆದರೆ ಈ ಎರಡು ಪಕ್ಷಗಳು ಕಾದು ನೋಡುವ ತಂತ್ರವನ್ನು ಅನುಸರಿಸುತ್ತಿದೆ.
ಇನ್ನು ರಾಜ್ಯಸಭೆಯ 250ನೇ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಸದನದಲ್ಲಿ ಎನ್ಸಿಪಿಯನ್ನು ಹಾಡಿ ಹೊಗಳಿದ್ದರು. ಎರಡು ಪಕ್ಷಗಳು ಸಂಸತ್ತಿನ ಸಂಪ್ರದಾಯಕ್ಕೆ ಬದ್ಧವಾಗಿ ನಡೆದುಕೊಂಡಿದೆ, ನನ್ನನ್ನೂ ಸೇರಿದಂತೆ ಇತರೆ ಪಕ್ಷಗಳು ಅವುಗಳಿಂದ ಕಲಿಯಬೇಕಿದೆ ಎಂದು ಶ್ಲಾಘಿಸಿದ್ದರು.
ಮೂಲಗಳ ಪ್ರಕಾರ ಚುನಾವಣೆಯಲ್ಲಿ ಮೂರನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಎನ್ಸಿಪಿ, ಬಿಜೆಪಿ ಜೊತೆ ಕೈ ಜೋಡಿಸಿದರೆ ಸರ್ಕಾರ ರಚನೆಯಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಈ ಹಿನ್ನೆಲೆ ಇವರ ಭೇಟಿ ಸಾಕಷ್ಟು ಕುತೂಹಲ ಕೆರಳಿಸಿದೆ.
ಇನ್ನು ಪವಾರ್ ಪ್ರಧಾನಿಯನ್ನು ಭೇಟಿಯಾಗುತ್ತಿರುವ ವಿಷಯ ಕುರಿತು ಪ್ರತಿಕ್ರಿಯಿಸಿರುವ ಸೇನೆ ನಾಯಕ ಸಂಜಯ್ ರಾವತ್, ಪವರ್ ರಾಜ್ಯದ ದೊಡ್ಡ ನಾಯಕರಾಗಿದ್ದು, ರೈತರ ಸಮಸ್ಯೆಗಳನ್ನು ಚರ್ಚಿಸಿ ಎಂದು ಅವರಿಗೆ ನಾವು ಮನವಿ ಮಾಡಿದ್ದೇವೆ. ಶರದ್ ನಮ್ಮ ಜೊತೆ ಸಂಪರ್ಕದಲ್ಲಿದ್ದಾರೆ ಎಂದರು.