ತನ್ವೀರ್ ಸೇಠ್ ಹತ್ಯೆ ಯತ್ನಕ್ಕೆ ಬಾಲಿವುಡ್ ಸಿನಿಮಾ ಪ್ರೇರಣೆ

ಮೈಸೂರು: ಮಾಜಿ ಸಚಿವ ಹಾಗೂ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಹತ್ಯೆ ಯತ್ನಕ್ಕೆ ಬಾಲಿವುಡ್ ಸಿನಿಮಾವೊಂದು ಪ್ರೇರಣೆಯಾಗಿದೆ ಎಂಬ ಸ್ಫೋಟಕ ಸುದ್ದಿ ಪೊಲೀಸ್ ಮೂಲಗಳಿಂದ ಲಭ್ಯವಾಗಿದೆ.

ಭಾನುವಾರ ತನ್ವೀರ್ ಸೇಠ್ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಮೈಸೂರು ಪೊಲೀಸರು, ಹಲವಾರು ಆಯಾಮಗಳಲ್ಲಿ ತನಿಖೆ ಮಾಡುತ್ತಿದ್ದಾರೆ. ಈ ವೇಳೆ ಆರೋಪಿ ತನ್ವೀರ್ ಸೇಠ್ ಅವರ ಮೇಲೆ ಹಲ್ಲೆ ಮಾಡುವ ಮುನ್ನಾ ಬಾಲಿವುಡ್ ಸಿನಿಮಾವೊಂದನ್ನು ಐದಾರು ಬಾರಿ ನೋಡಿದ್ದ ಎಂದು ಆತನ ಸ್ನೇಹಿತರು ಹೇಳಿದ್ದಾರೆ.

ಆರೋಪಿ ಫರಾನ್ ಪಾಷಾ ತನ್ವೀರ್ ಸೇಠ್ ಅವರ ಹತ್ಯೆಗೆ ಯತ್ನ ಮಾಡುವ ಹಿಂದಿನ ರಾತ್ರಿ ಬಾಲಿವುಡ್‍ನ ವಾಸ್ತವ್ ಸಿನಿಮಾವನ್ನು ಐದಾರು ಬಾರಿ ನೋಡಿದ್ದ. ಇದು ಬಾಲಿವುಡ್ ನಟ ಸಂಜಯ್ ದತ್ ನಟನೆಯ ಗ್ಯಾಂಗ್ ಸ್ಟಾರ್ ಸಿನಿಮಾವಾಗಿದ್ದು, ಸಿನಿಮಾವನ್ನು ಹಲ್ಲೆ ಮಾಡುವ ಹಿಂದಿನ ರಾತ್ರಿ ಐದಾರು ಬಾರಿ ನೋಡಿದ್ದ ಎಂದು ಆರೋಪಿ ಸ್ನೇಹಿತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅದೇ ಸಿನಿಮಾ ಯಾಕೆ ನೋಡ್ತಿದ್ದೀಯಾ ಎಂದು ಪ್ರಶ್ನಿಸಿದಾಗ ಆ ಸಿನಿಮಾ ಹೀರೋ ಥರ ನಾನು ಆಗಬೇಕು. ನನಗೆ ಇದು ಪ್ರೇರಣೆ ಆಗ್ತಿದೆ ಎಂದು ಫರಾನ್ ಹೇಳಿದ್ದನಂತೆ.

ಭಾನುವಾರ ರಾತ್ರಿ ಮೈಸೂರಿನ ತನ್ವೀರ್ ಸೇಠ್ ಬನ್ನಿ ಮಂಟಪ ಸಮೀಪದ ಪಾರ್ಟಿ ಹಾಲಿಗೆ ತಮ್ಮ ಆತ್ಮೀಯ ಮಗನ ಮದುವೆಯ ಬೀಗರೂಟಕ್ಕೆ ಆಗಮಿಸಿದ್ದರು. ಈ ವೇಳೆ ಯುವಕ ಫರಾನ್ (24) ಚಾಕುವಿನಿಂದ ಹಲ್ಲೆ ಮಾಡಿದ್ದ. ಅವರ ಕತ್ತಿಗೆ ಭಾಗಕ್ಕೆ ಚಾಕು ಹಾಕಿ ಪರಾರಿಯಾಗುತ್ತಿದ್ದ ಆತನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ನಂತರ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಸೇಠ್ ಅವರನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಸದ್ಯ ಆರೋಪಿ ಫರಾನ್ ಪೋಲಿಸರ ವಶದಲ್ಲಿದ್ದು, ಆರೋಪಿಯನ್ನು ಸೋಮವಾರ ರಾತ್ರಿ ನ್ಯಾಯಾಧೀಶರ ಮುಂದೆ ಪೊಲೀಸರು ಹಾಜರು ಪಡಿಸಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ 15 ದಿನಗಳ ಕಾಲ ತಮ್ಮ ವಶಕ್ಕೆ ನೀಡಬೇಕು ಎಂದು ಪೊಲೀಸರು ನ್ಯಾಯಾಧೀಶರಲ್ಲಿ ಮನವಿ ಮಾಡಿದ್ದರು. ಮನವಿಯನ್ನು ಪುರಸ್ಕರಿಸಿದ ಮೈಸೂರು ಜೆಎಂಎಫ್‍ಸಿ ನ್ಯಾಯಾಧೀಶರು ಆರೋಪಿ ಫರಾನ್ ನನ್ನು 12 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ