ಬೆಂಗಳೂರು,ನ.15- ಚುನಾವಣೆಯಲ್ಲಿ ನನಗೆ ಟಿಕೆಟ್ ಕೈ ತಪ್ಪಿರುವುದಕ್ಕೆ ಯಾವುದೇ ರೀತಿಯ ಬೇಸರವಿಲ್ಲ. ನನ್ನ ಮುಂದಿನ ರಾಜಕೀಯ ಭವಿಷ್ಯವನ್ನು ಹೈಕಮಾಂಡ್ ತೀರ್ಮಾನಿಸುತ್ತದೆ. ನಾನು ಅಭ್ಯರ್ಥಿಗಳ ಪರ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಅಥಣಿಯಿಂದ ಉಪಚುನಾವಣೆಯಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದು ನಿಜ. ನನಗೆ ನೀಡಬೇಕೆಂದು ವರಿಷ್ಠರಲ್ಲಿ ಮನವಿ ಮಾಡಿದ್ದೆ. ಅಂತಿಮವಾಗಿ ಮಹೇಶ್ ಕುಮಟಳ್ಳಿಗೆ ಟಿಕೆಟ್ ನೀಡಲಾಗಿದೆ. ನನ್ನ ವೈಯಕ್ತಿಕ ಹಿತಾಸಕ್ತಿ ಏನೇ ಇರಲಿ ಪಕ್ಷದ ಗೆಲುವು ಮುಖ್ಯ ಎಂದು ತಿಳಿಸಿದರು.
ಕಡಿಮೆ ಅಂತರದಲ್ಲಿ ಪರಾಭವಗೊಂಡಿದ್ದರಿಂದ ಟಿಕೆಟ್ ಕೇಳಿದ್ದೆ. ಹಾಗೆಂದ ಮಾತ್ರಕ್ಕೆ ಮಹೇಶ್ ಕುಮಟಳ್ಳಿಗೆ ಟಿಕೆಟ್ ನೀಡಬಾರದೆಂದು ನಾನು ಎಲ್ಲಿಯೂ ಹೇಳಿಲ್ಲ ಎಂದು ತಿಳಿಸಿದರು.
ಒಂದು ಬಾರಿ ಕ್ಷೇತ್ರ ಕೈತಪ್ಪಿ ಹೋದರೆ ಅದನ್ನು ಮರಳಿ ಪಡೆಯುವುದು ಭಾರೀ ಸಾಹಸದ ಕೆಲಸವೇ ಸರಿ. ನನ್ನ ರಾಜಕೀಯ ಒಲವು, ನಿಲುವು ಏನೇ ಇರಲಿ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಕೆಲಸ ಮಾಡುತ್ತೇನೆ. ವರಿಷ್ಠರು ಕೊಟ್ಟಿರುವ ಸೂಚನೆಯನ್ನು ಚಾಚುತಪ್ಪದೇ ಪಾಲನೆ ಮಾಡುತ್ತೇನೆ ಎಂದು ತಿಳಿಸಿದರು.
ಅಥಣಿಯಿಂದ ಮಹೇಶ್ ಕುಮಟಳ್ಳಿಗೆ ಟಿಕೆಟ್ ನೀಡಿದ್ದರಿಂದ ಲಕ್ಷ್ಮಣ್ ಸವದಿ ಮುನಿಸಿಕೊಂಡು ಯಾರ ಕೈಗೂ ಸಿಗದೆ ರಹಸ್ಯ ಸ್ಥಳದಲ್ಲಿ ನಿನ್ನೆ ರಾತ್ರಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸೂಚನೆಯಂತೆ ಡಾಲರ್ಸ್ ಕಾಲೋನಿಯ ನಿವಾಸಕ್ಕೆ ಬಂದು ಮಾತುಕತೆ ನಡೆಸಿದ್ದರು.
ಇದೀಗ ಸವದಿ ತಮ್ಮ ಮುನಿಸು ಮರೆತು ಪಕ್ಷದ ಪರ ಕೆಲಸ ಮಾಡುವುದಾಗಿ ಹೇಳಿರುವುದರಿಂದ ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿಗೆ ಎದುರಾಗಿದ್ದ ಭಿನ್ನಮತ ಬಹುತೇಕ ನಿವಾರಣೆಯಾದಂತೆ ಕಾಣುತ್ತಿದೆ.