ಬೆಂಗಳೂರು, ನ.16- ಉಪಚುನಾವಣೆಯಲ್ಲಿ ಸುಲಭವಾಗಿ ಗೆಲ್ಲಬಹುದಾದ ಅವಕಾಶಗಳನ್ನು ಕಾಂಗ್ರೆಸ್ ಉದ್ದೇಶ ಪೂರ್ವಕವಾಗಿ ಕೈ ಚೆಲ್ಲುತ್ತಿದೆಯಾ ಎಂಬ ಅನುಮಾನ ಕಾರ್ಯಕರ್ತರನ್ನು ಕಾಡಲಾರಂಭಿಸಿದೆ.
ಟಿಕೆಟ್ ಹಂಚಿಕೆಯಲ್ಲಿನ ಅವಾಂತರಗಳನ್ನು ಗಮನಿಸಿದರೆ ಕಾಂಗ್ರೆಸ್ ನಾಯಕರು ಬಿಜೆಪಿ ಸರ್ಕಾರ ಉಳಿಸಲು ಪಣ ತೊಟ್ಟಂತೆ ಕಂಡು ಬರುತ್ತಿದೆ. ಪ್ರಬಲ ಅಭ್ಯರ್ಥಿಗಳು ಇರುವ ಕಡೆಯೂ ಉದ್ದೇಶ ಪೂರ್ವಕವಾಗಿ ತಮ್ಮ ಬೆಂಬಲಿಗರಿಗೆ ಮಣೆ ಹಾಕುವ ಮೂಲಕ ಕಾಂಗ್ರೆಸ್ ನಾಯಕರು ಅನುಮಾನಾಸ್ಪದ ನಡೆಯನ್ನು ಅನುಸರಿಸಿದ್ದಾರೆ.
ಈಗಾಗಲೇ ಪ್ರಕಟವಾಗಿರುವ ಎಂಟು ಕ್ಷೇತ್ರಗಳ ಅಭ್ಯರ್ಥಿಗಳ ಪೈಕಿ ಎರಡರಿಂದ ಮೂರು ಮಂದಿ ಮಾತ್ರ ಗೆಲ್ಲುವ ನಿರೀಕ್ಷೆಯಿದ್ದು, ಉಳಿದ ಕಡೆ ಪ್ರಬಲ ಪೈಪೋಟಿ ನೀಡುವ ಬಗ್ಗೆ ಅನುಮಾನಗಳಿವೆ.
ಬೆಂಗಳೂರಿಗೆ ಸೇರಿದ ಹೊಸಕೋಟೆ, ಕೆ.ಆರ್.ಪುರಂ, ಮಹಾಲಕ್ಷ್ಮೀ ಲೇಔಟ್ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸಂಪೂರ್ಣ ಎಡವಿದೆ ಎಂದು ಹೇಳಲಾಗುತ್ತಿದೆ. ಬೈರತಿ ಸುರೇಶ್ ಅವರ ಪತ್ನಿ ಪದ್ಮಾವತಿಯನ್ನು ಹೊಸಕೋಟೆಯಿಂದ ಕಣಕ್ಕಿಳಿಸುವ ಬದಲು ಕೆ.ಆರ್.ಪುರಂನಿಂದ ಕಣಕ್ಕಿಳಿಸಿ, ಶರತ್ ಬಚ್ಚೆಗೌಡ ಅವರನ್ನು ಕಾಂಗ್ರೆಸ್‍ಗೆ ಕರೆ ತಂದು ಹೊಸಕೋಟೆಯಿಂದ ಕಣಕ್ಕಿಳಿಸಿದ್ದರೆ ಹೆಚ್ಚು ಅನುಕೂಲವಾಗುತ್ತಿತ್ತು.
ಅದೇ ರೀತಿ ಮಾಗಡಿಯ ಹಾಲಿ ಶಾಸಕ ಎ.ಮಂಜು ಕಾಂಗ್ರೆಸ್‍ನತ್ತ ಮುಖ ಮಾಡಿದ್ದು, ಆ ಕ್ಷೇತ್ರದ ಮಾಜಿ ಶಾಸಕ ಬಾಲಕೃಷ್ಣ ಅವರನ್ನು ಮಹಾಲಕ್ಷ್ಮೀ ಲೇಔಟ್ ನಿಂದ ಕಣಕ್ಕಿಳಿಸಲು ಡಿ.ಕೆ. ಸಹೋದರರು ಯೋಜನೆ ರೂಪಿಸಿದ್ದರು. ಇದಕ್ಕೆ ಬಾಲಕೃಷ್ಣ ಕೂಡ ಸಮ್ಮತಿಸಿದ್ದರು. ಡಿ.ಕೆ.ಸಹೋದರರು ಕಾನೂನಿನ ಸಂಕಷ್ಟದಲ್ಲಿದ್ದಾಗಲೂ ಪಕ್ಷದ ಹಿತದೃಷ್ಠಿಯಿಂದ ರೂಪಿಸಿದ್ದ ಯೋಜನೆ ಜಾರಿಯಾಗಬೇಕು ಎನ್ನುವ ಹಂತದಲ್ಲಿ ಕೆಲ ನಾಯಕರ ಒತ್ತಡಕ್ಕೆ ಮಣಿದು ಎಂಟು ಕ್ಷೇತ್ರಗಳಿಗೂ ಟಿಕೆಟ್ ಘೋಷಣೆ ಮಾಡಲಾಗಿದೆ ಎಂದು ಹೇಳಲಾಗಿದೆ. ಇದರಿಂದ ಬೇಸರಗೊಂಡ ಡಿ.ಕೆ.ಸಹೋದರರು ಉಪ ಚುನಾವಣೆಯ ರಗಳೆಯಿಂದ ದೂರ ಉಳಿದಿದ್ದಾರೆ ಎನ್ನಲಾಗುತ್ತಿದೆ.
ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಮಾಜಿ ಸಂಸದ ಆರ್.ಎಲ್.ಜಾಲಪ್ಪ ಅವರ ಅಳಿಯ ವೆಂಕಟೇಶ್ ಆಕಾಂಕ್ಷಿಯಾಗಿದ್ದರು. ಅವರಲ್ಲದೆ ಯಳವನಹಳ್ಳಿ ರಮೇಶ್ ಸೇರಿ ಹಲವು ಮಂದಿ ಪ್ರಬಲ ಆಕಾಂಕ್ಷಿಗಳಿದ್ದರೂ, ಅವರನ್ನೆಲ್ಲಾ ಬದಿಗೆ ಸರಿಸಿ ಜೆಡಿಎಸ್ ಮುಖಂಡ ಎಂ.ಆಂಜನಪ್ಪ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಟಿಕೆಟ್ ಘೋಷಣೆಯಾದ ನಂತರ ಆಂಜನಪ್ಪ ಕಾಂಗ್ರೆಸ್ ಸೇರ್ಪಡೆಯಾದರು. ಚಿಕ್ಕಬಳ್ಳಾಪುರ ಮತ್ತು ಹೊಸಕೋಟೆ ಕ್ಷೇತ್ರಗಳ ಅಭ್ಯರ್ಥಿಯನ್ನು ಬದಲಾವಣೆ ಮಾಡುವಂತೆ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಎರಡು ಮೂರು ಬಾರಿ ಒತ್ತಡ ಹೇರಿದರೂ ಕೆಪಿಸಿಸಿ ನಾಯಕರು ಕ್ಯಾರೆ ಎಂದಿಲ್ಲ.
ಈ ಎಲ್ಲಾ ಕ್ಷೇತ್ರಗಳಲ್ಲಿ ತರಾತುರಿಯಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿರುವುದರ ಹಿಂದೆ ಅನರ್ಹರ ಮೇಲಿನ ಹಳೆಯ ಮಮತೆಯೇ ಕಾರಣ. ಹಾಗಾಗಿ ಹೆಚ್ಚು ಚರ್ಚೆ ಮಾಡದೆ ವೀಕ್ಷಕರ ವರದಿಯನ್ನು ನೆಪ ಇಟ್ಟುಕೊಂಡು ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ ಎಂಬ ಆಕ್ಷೇಪಗಳಿವೆ.
ಬಾಕಿ ಇರುವ ಏಳು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯಲ್ಲೂ ಮತ್ತಷ್ಟು ಅನಾವುತಗಳನ್ನು ಸೃಷ್ಠಿಸಲಾಗಿದೆ ಎನ್ನಲಾಗಿದೆ. ಮೊದಲ ಹಂತದಲ್ಲಿನ ಅಭ್ಯರ್ಥಿಗಳ ಪಟ್ಟಿ ನೋಡಿ ಕಂಗಾಲಾದ ಹಿರಿಯ ನಾಯಕರು ಎರಡನೇ ಹಂತದಲ್ಲಿ ಇದೇ ರೀತಿಯ ತಪ್ಪುಗಳಾಗಬಾರದು ಎಂದು ಎರಡು ಮೂರು ದಿನಗಳ ಕಾಲ ನಡೆದ ಹಿರಿಯರ ಸಭೆಗಳಲ್ಲಿ ಭಾಗವಹಿಸಿದ್ದರು.
ಆದರೂ ಅಂತಿಮವಾಗಿ ತಮ್ಮ ಅಭಿಪ್ರಾಯಗಳಿಗೆ ಬೆಲೆ ಸಿಗುತ್ತಿಲ್ಲ. ನೆಪ ಮಾತ್ರಕಷ್ಟೆ ಸಭೆ ನಡೆಸುತ್ತಾರೆ ಎಂದು ಮನವರಿಕೆಯಾದ ಮೇಲೆ ನಿನ್ನೆ ಸಭೆಯಿಂದಲೂ ದೂರ ಉಳಿದಿದ್ದಾರೆ.
ಅಭ್ಯರ್ಥಿಗಳ ಆಯ್ಕೆಯಲ್ಲಿ ಯಾರು ಮೇಲುಗೈ ಸಾಧಿಸಿದ್ದಾರೋ ಅವರೇ ಉಪಚುನಾವಣೆಯಲ್ಲೂ ಕೆಲಸ ಮಾಡಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿಕೊಂಡು ಬರಲಿ ಎಂದು ಸಿಡಿಮಿಡಿಗೊಳ್ಳುವ ಮೂಲಕ ಮೂಲ ಕಾಂಗ್ರೆಸಿಗರೂ ಉಪಚುನಾವಣೆಯಿಂದ ದೂರ ಸರಿಯಲು ಮುಂದಾಗಿದ್ದಾರೆ ಎನ್ನಲಾಗಿದೆ.