ಮುಂಬೈ, ನ.15- ವಿಧಾನಸಭೆ ಚುನಾವಣಾ ಫಲಿತಾಂಶದ ನಂತರ ಮಹಾರಾಷ್ಟ್ರದಲ್ಲಿ ಅನೇಕ ಬೆಳವಣಿಗೆಗಳಿಗೆ ಸಾಕ್ಷಿಯಾದ ಅಧಿಕಾರ ಹಂಚಿಕೆ ಬಿಕ್ಕಟ್ಟು ಕೊನೆಗೊಳ್ಳುವ ಸ್ಪಷ್ಟ ಲಕ್ಷಣಗಳು ಗೋಚರಿಸುತ್ತಿವೆ. ಶಿವಸೇನೆ, ರಾಷ್ಟ್ರೀಯವಾದಿ ಕಾಂಗ್ರೆಸ್(ಎನ್ಸಿಪಿ) ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆಯಾಗುವುದು ಬಹುತೇಕ ಖಚಿತವಾಗಿದೆ.
ಈ ಮೂರು ಪಕ್ಷಗಳು ಸರ್ಕಾರ ರಚನೆಗಾಗಿ 40 ಅಂಶಗಳ ಸಾಮಾನ್ಯ ಕನಿಷ್ಠ ಕಾರ್ಯಕ್ರಮ (ಸಿಎಂಪಿ) ರೂಪಿಸಿದ್ದು. ಸೌಹಾರ್ದಯುತವಾಗಿ ಅಧಿಕಾರ ಹಂಚಿಕೊಂಡು ಹೊಸ ಸರ್ಕಾರ ರಚನೆಗೆ ಮುಂದಾಗಿವೆ.
ನಿನ್ನೆ ರಾತ್ರಿ ಮುಂಬೈನಲ್ಲಿ ನಡೆದ ಮೂರು ಪಕ್ಷಗಳ ಮಹತ್ವದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಸಿಎಂಪಿ ರೂಪಿಸಲಾಗಿದೆ. ಶಿವಸೇನೆಯ ಮುಖಂಡರಾದ ಎಕನಾಥ್ ಶಿಂಧೆ ಮತ್ತು ಸುಭಾಷ್ ದೇಸಾಯಿ, ಎನ್ಸಿಪಿ ಧುರೀಣರಾದ ಜಯಂತ್ ಪಾಟೀಲ್, ನವಾಬ್ ಮಲಿಕ್ ಮತ್ತು ಛಗ್ಗನ್ ಭುಜಬಲ್ ಹಾಗೂ ಕಾಂಗ್ರೆಸ್ನ ಪೃಥ್ವಿರಾಜ್ ಚೌಹಾಣ್ ಮತ್ತು ಜಯ್ ವಡೆಟ್ಟಿವರ್ ಪಾಲ್ಗೊಂಡು ಈ ಕುರಿತು ಒಮ್ಮತದ ನಿರ್ಧಾರ ಕೈಗೊಂಡರು.
ಹೊಸ ಸೂತ್ರದಂತೆ ಶಿವಸೇನೆಗೆ ಮುಖ್ಯಮಂತ್ರಿ ಹುದ್ದೆ ಮತ್ತು 16 ಸಚಿವರ ಸ್ಥಾನಗಳು ಲಭಿಸಿವೆ. ಎನ್ಸಿಪಿಗೆ ಉಪ ಮುಖ್ಯಮಂತ್ರಿ ಸ್ಥಾನ ಮತ್ತು 14 ಮಂತ್ರಿ ಹುದ್ದೆಗಳು ದಕ್ಕಲಿವೆ. ಅದೇ ರೀತಿ ಕಾಂಗ್ರೆಸ್ನಿಂದ ಡಿಸಿಎಂ ಮತ್ತು 12 ಮಂದಿ ಸಚಿವರಾಗಲಿದ್ದಾರೆ.
ಕಾಂಗ್ರೆಸ್ನ ಹಿರಿಯ ಶಾಸಕರೊಬ್ಬರು ವಿಧಾನಸಭಾಧ್ಯಕ್ಷರಾಗಲಿದ್ದಾರೆ. ಶಿವಸೇನೆಗೆ ಡೆಪ್ಯೂಟಿ ಸ್ಪೀಕರ್ ಸ್ಥಾನ ನೀಡಲಾಗುತ್ತಿದೆ. ವಿಧಾನಪರಿಷತ್ತಿನ ಸಭಾಪತಿ ಸ್ಥಾನ ಎನ್ಸಿಪಿ ಪಾಲಾಗಲಿದೆ. ಉಸ ಸಭಾಪತಿ ಹುದ್ದೆ ಶಿವಸೇನೆಗೆ ನೀಡುವ ಸಂಬಂಧ ಸಮ್ಮತಿ ಸೂಚಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಈ ಸಿಎಂಪಿ ವರದಿಯನ್ನು ಮೂರು ಪಕ್ಷಗಳ ಉನ್ನತ ನಾಯಕರಿಗೆ ಇನ್ನೆರಡು ದಿನಗಳಲ್ಲಿ ಸಲ್ಲಿಸುವ ನಿರೀಕ್ಷೆ ಇದೆ.
ಶಿವಸೇನೆ ಮುಖ್ಯಸ್ಥ ಉದ್ದವ್ ಠಾಕ್ರೆ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ ಈ ಸಿಎಂಪಿ ಸೂತ್ರಕ್ಕೆ ಸಮ್ಮತಿ ನೀಡಲಿದ್ದಾರೆ. ಇದರ ಅಂತಿಮ ನೀಲನಕ್ಷೆ ನವೆಂಬರ್ 19ರೊಳಗೆ ಸಿದ್ದವಾಗಲಿದೆ.
ಸರ್ಕಾರ ರಚನೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚೌಹಾಣ್ ಮತ್ತು ವಡೆಟ್ಟಿವರ್, ಮಹಾರಾಷ್ಟ್ರದಲ್ಲಿ ಸ್ಥಿರ ಮತ್ತು ಸದೃಢ ಸರ್ಕಾರ ರಚಿಸಲು ಮೂರು ಪಕ್ಷಗಳ ಮುಖಂಡರೊಂದಿಗೆ ಮಹತ್ವದ ಸಮಾಲೋಚನೆ ನಡೆದಿದೆ. ಇದಕ್ಕಾಗಿ ಸಿಎಂಪಿ ರಚಿಸಲಾಗಿದೆ. ಈ ಬಗ್ಗೆ ಪಕ್ಷಗಳ ಉನ್ನತ ನಾಯಕರು ನಿರ್ಧಾರ ಕೈಗೊಳ್ಳಲಿದ್ದು, ಮಂಗಳವಾರದ ವೇಳೆಗೆ ಸ್ಪಷ್ಟ ಚಿತ್ರ ಲಭಿಸಲಿದೆ ಎಂದು ಹೇಳಿದರು.