ಬೆಂಗಳೂರು, ನ.14- ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನಗೊಳ್ಳಲು ಕಾರಣರಾದವರು ವಿಧಾನಸಭೆ ಉಪ ಚುನಾವಣೆಯಲ್ಲಿ ಸೋಲಬೇಕು. ಅದಕ್ಕಾಗಿ ಕಾರ್ಯತಂತ್ರವನ್ನು ರೂಪಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆಲ್ಲಬೇಕು ಎಂಬುದು ನಮ್ಮ ಮೊದಲ ಆದ್ಯತೆ. ಅದು ಸಾಧ್ಯವಾಗದಿದ್ದರೆ. ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಿದವರು ಸೋಲಬೇಕು ಎಂಬುದು ನಮ್ಮ ಎರಡನೇ ಆದ್ಯತೆ ಎಂದರು.
ಹದಿನೈದು ಮಂದಿ ಅನರ್ಹ ಶಾಸಕರನ್ನು ಬಿಜೆಪಿ ಕಣಕ್ಕಿಳಿಸಿದ್ದೇ ಆದರೆದ ಅವರೆಲ್ಲರೂ ಚುನಾವಣೆಯಲ್ಲಿ ಸೋಲಬೇಕು ಎಂಬುದು ನಮ್ಮ ಅಪೇಕ್ಷೆ ಎಂದು ಹೇಳಿದರು.
ಬಿಜೆಪಿ , ಕಾಂಗ್ರೆಸ್ ಮೇಲಾಗಲಿ ವ್ಯಾಮೋಹವಿಲ್ಲ. ಜನರ ಕಷ್ಟಕ್ಕೆ ಸ್ಪಂದಿಸಬೇಕು ಎಂಬುದು ನಮ್ಮ ಆದ್ಯತೆ. ಎರಡೂ ರಾಷ್ಟ್ರೀಯ ಪಕ್ಷಗಳ ನಡುವೆ ಸಮಾನ ಅಂತರ ಕಾಯ್ದುಕೊಂಡು ಚುನಾವಣೆಯನ್ನು ಎದುರಿಸಲಾಗುವುದು.
ಹದಿನಾಲ್ಕು ಕ್ಷೇತ್ರಗಳಲ್ಲ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದು, ಕೆಲವೆಡೆ ನಮಗೆ ಶಕ್ತಿ ಇಲ್ಲದಿದ್ದರೂ ಅಭ್ಯರ್ಥಿಗಳನ್ನು ಆಕದೇ ಇರಲಾಗುವುದಿಲ್ಲ. ನಮ್ಮದೇ ಆದ ಚುನಾವಣಾ ಕಾರ್ಯತಂತ್ರವನ್ನು ಬಳಕೆ ಮಾಡಬೇಕಿದೆ ಎಂದರು.
ನಿನ್ನೆ ಪಕ್ಷದ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮೂರು ವರ್ಷಗಳ ಕಾಲ ಮುಂದುವರೆಯುತ್ತಾರೆ, ಸಿದ್ದರಾಮಯ್ಯ ವಿಪಕ್ಷ ನಾಯಕರಾಗಿ ಮುಂದುವರೆಯುತ್ತಾರೆ ಎಂದು ಹೇಳಿರುವುದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ. ಗೌಡರು ರಾಜಕೀಯದ ಒಳ ನೋಟದಿಂದ ಈ ರೀತಿ ಹೇಳಿರಬಹುದು. ಹಾಗೆಂದು ಬಿಜೆಪಿ ಜತೆ ಕೈ ಜೋಡಿಸುವುದಿಲ್ಲ. ಉಪ ಚುನಾವಣೆ ಮೂರು ಪಕ್ಷಗಳಿಗೆ ಅಗ್ನಿ ಪರೀಕ್ಷೆಯಾಗಿದೆ. 7 ಕ್ಷೇತ್ರಗಳಲ್ಲಿ ಗೆದ್ದು 113 ಶಾಸಕರ ಬೆಂಬಲವಿದ್ದಾಗ ಮಾತ್ರ ಯಡಿಯೂರಪ್ಪ ಅವರ ಸರ್ಕಾರ ಉಳಿಯಲಿದೆ ಎಂದು ಹೇಳಿದರು.
ಉಪಚುನಾವನೆ ಫಲಿತಾಂಶದ ನಂತರ ಹೊಸ ರಾಜಕೀಯ ಚಟುವಟಿಕೆ ಶುರುವಾಗಲಿದೆ. ಮಾಜಿ ಶಾಸಕರಾದ ಸುಧಾಕರ್ ಹಾಗೂ ಯೋಗೇಶ್ವರ್ ಈಗ ತಮ್ಮನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ. ಮೈತ್ರಿ ಸರ್ಕಾರ ಪತನಗೊಳ್ಳಲು ಅವರಿಬ್ಬರ ಪಾತ್ರವೂ ಇದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ ಎಂದು ತಿಳಿಸಿದರು.
ಸಂಜೆ ಅಂತಿಮ:
ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರಕ್ಕೆ ಪ್ರಬಲ ಹಾಗೂ ಗೆಲ್ಲುವ ಅಭ್ಯರ್ಥಿಗಳನ್ನು ನಿಲ್ಲಿಸಬೇಕೆಂಬ ಸರ್ಕಸ್ ಮಾಡಲಾಗುತ್ತಿದೆ. ಸಂಜೆ ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಸಿ ಅಭ್ಯರ್ಥಿಯನ್ನು ಅಂತಿಮಗೊಳಿಸಲಾಗುವುದು. ಆಕಾಂಕ್ಷಿಗಳ ಒತ್ತಡ ಹೆಚ್ಚಾಗಿದೆ ಎಂದರು.
ಎರಡು ಬಾರಿ ಪಕ್ಷಕ್ಕೆ ಟೋಪಿ ಹಾಕಿದವರಿಗೆ ಸರಿಸಮನಾದ ಅಭ್ಯರ್ಥಿಗಳನ್ನ ಕಣಕ್ಕಿಳಿಸಬೇಕು. ಹಾಗಾಗಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂದು ಕುಮಾರಸ್ವಾಮಿ ಹೇಳಿದರು.
ನಾಳೆ ಶಾಸಕಾಂಗ ಪಕ್ಷದ ಸಭೆ:
ವಿಧಾನಸಭೆ ಉಪಚುನಾವಣೆಗೆ ಜವಾಬ್ದಾರಿ ಹಂಚಿಕೆ ಮಾಡುವ ಸಂಬಂಧ ನಾಳೆ ಜೆಡಿಎಸ್ನ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ವಿಧಾನಸಭೆ ಹಾಗೂ ವಿಧಾನಪರಿಷತ್ನ ಸದಸ್ಯರು ಸಭೆಗೆ ಆಗಮಿಸಲಿದ್ದು, ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಕಾರ್ಯ ನಿರ್ವಹಿಸಲು ಕ್ಷೇತ್ರಗಳ ಜವಾಬ್ದಾರಿಯನ್ನು ಹಂಚಿಕೆ ಮಾಡಲಾಗುವುದು ಎಂದರು.