ಬೆಂಗಳೂರು, ನ.14- ನಾವು ಅಧಿಕಾರಕ್ಕಾಗಿ ಶಾಸಕ ಸ್ಥಾನವನ್ನು ತ್ಯಾಗ ಮಾಡಲಿಲ್ಲ. ರಾಕ್ಷಸಿ ರಾಜಕಾರಣವನ್ನು ಕೊನೆಗಾಣಿಸಬೇಕು ಎಂಬ ಉದ್ದೇಶದಿಂದ ರಾಜೀನಾಮೆ ನೀಡಿದೆವು ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಸ್ಪಷ್ಟಪಡಿಸಿದರು.
ಮಲ್ಲೇಶ್ವರಂನ ಕಚೇರಿಯಲ್ಲಿ ಬಿಜೆಪಿಗೆ ಸೇರ್ಪಡೆಯಾಗಿ ಮಾತನಾಡಿದ ಅವರು, 17 ಶಾಸಕರು ಆಡಳಿತಾರೂಢ ಸರ್ಕಾರದ ವಿರುದ್ಧ ತಿರುಗಿ ಬಿದ್ದು, ರಾಜೀನಾಮೆ ಕೊಡುತ್ತಾರೆ ಎಂಬುದು ಸುಮ್ಮನೆ ಮಾತಲ್ಲ. ನಾವು ಅಧಿಕಾರಕ್ಕಾಗಿ ಸ್ಥಾನ ತ್ಯಾಗ ಮಾಡಲಿಲ್ಲ. ಕೆಟ್ಟ ಸರ್ಕಾರ ಹೋಗಬೇಕೆಂಬ ಕಾರಣಕ್ಕಾಗಿ ಎಲ್ಲರೂ ಈ ತೀರ್ಮಾನ ಕೈಗೊಂಡೆವು ಎಂದರು.
ನಾವು ಪಕ್ಷಾಂತರ ಮಾಡಿದ್ದೇವೆ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಇದು ಪಕ್ಷಾಂತರವಲ್ಲ. ಇದೊಂದು ರಾಜಕೀಯ ದೃವೀಕರಣ. ಪಕ್ಷ ರಾಜಕಾರಣ ವಿಫಲವಾಗಿ ದೇಶದಲ್ಲೇ ದೃವೀಕರಣವಾಗುತ್ತಿರುವುದು ಇಲ್ಲಿ ನಡೆದಿರುವ ಘಟನೆಯೇ ಸಾಕ್ಷಿ ಎಂದು ಹೇಳಿದರು.
ಅತ್ಯಂತ ಸಂತೋಷದಿಂದ ಬಿಜೆಪಿ ಸೇರಿದ್ದೇವೆ. ಅನೇಕ ವರ್ಷಗಳಿಂದ ರಾಜಕಾರಣ ಮಾಡಿಕೊಂಡು ಬಂದಿದ್ದೇವೆ. ಯಾವ ಸಂದರ್ಭದಲ್ಲಿ ಏನಾಗುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ ಎಂದರು.
ಸೃಷ್ಟಿಕರ್ತ ಹೇಳಿದನಂತೆ…ಎಲೆ ಮನುಷ್ಯನೇ ಯಾವ ಕಾಲಕ್ಕೆ ನಿನಗೆ ಯೋಗ ಫಲಾಫಲ ಬರುತ್ತದೆಯೋ ಸೃಷ್ಟಿಕರ್ತನಾದ ನನಗೆ ಅರ್ಥವಾಗುವುದಿಲ್ಲ. ಬಂದ ಫಲಾನುಫಲಗಳನ್ನು ಅನುಭವಿಸಿ ಎಂದು. ಅದನ್ನೇ ನಾವು ಮಾಡಿದ್ದೇವೆ ಎಂದು ತಿಳಿಸಿದರು.
ಹದಿನೇಳು ಮಂದಿಗೆ ಶಿಕ್ಷೆ ನೀಡಲೇಬೇಕೆಂದು ಹಿಂದಿನ ಸ್ಪೀಕರ್ ರಮೇಶ್ಕುಮಾರ್ ಕೆಟ್ಟ ನಿರ್ಧಾರ ತೆಗೆದುಕೊಂಡರು. ರಾಜ್ಯ ರಾಜಕಾರಣಿದಿಂದಲೇ ನಮ್ಮನ್ನು ದೂರವಿಡಬೇಕೆಂದು ನಿರ್ಧರಿಸಿದ್ದರು. ಆದರೆ, ಸುಪ್ರೀಂಕೋರ್ಟ್ ತೀರ್ಪು ಕೊಟ್ಟಿರುವುದು ಸಂತಸ ತಂದಿದೆ ಎಂದರು.
ರಾಜ್ಯದ ಅಭಿವೃದ್ಧಿಗಾಗಿ ದುಡಿಯುವಲ್ಲಿ ನಮ್ಮದು ಒಂದು ಭಾಗವಾಗಲಿ ಎಂಬ ಕಾರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಕನಸನ್ನು ನನಸು ಮಾಡಲು ಕೈ ಜೋಡಿಸಿದ್ದೇವೆ. ಇದಕ್ಕೆ ನಿಮ್ಮ ಆಶೀರ್ವಾದವೂ ಬೇಕು ಎಂದು ಜನತೆಯಲ್ಲಿ ವಿಶ್ವನಾಥ್ ಮನವಿ ಮಾಡಿದರು.
ಚಿಕ್ಕಬಳ್ಳಾಪುರದ ಮಾಜಿ ಶಾಸಕ ಡಾ.ಕೆ.ಸುಧಾಕರ್ ಮಾತನಾಡಿ, ವಿಧಾನಸಭೆಯ ಸ್ಪೀಕರ್ ಆಗಿದ್ದ ರಮೇಶ್ಕುಮಾರ್ ಅವರಂತಹ ಕ್ರೌರ್ಯ ಮನಸ್ಥಿತಿಯವರು ಮುಂದೆ ಸ್ಪೀಕರ್ ಆಗಲೇಬಾರದು ಎಂದು ಹಿಡಿಶಾಪ ಹಾಕಿದರು.
ನಮ್ಮನ್ನು ರಾಜಕಾರಣದಿಂದಲೇ ದೂರವಿಡಬೇಕೆಂದು ಹುನ್ನಾರ ನಡೆಸಿ ಅನರ್ಹತೆ ಮಾಡುವುದರ ಜತೆಗೆ ಈ ವಿಧಾನಸಭಾ ಅವಧಿ ಮುಗಿಯುವವರೆಗೂ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂದು ನಿರ್ಬಂಧ ಹಾಕಿದ್ದರು. ಸುಪ್ರೀಂಕೋರ್ಟ್ ಕೊಟ್ಟಿರುವ ತೀರ್ಪು ಒಂದು ರೀತಿ ಅವರಿಗೆ ಕಪಾಳಮೋಕ್ಷವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಇಂದು ಅಭ್ಯರ್ಥಿಗಳು ಸಿಗದೆ ಬೇರೆ ಬೇರೆ ಪಕ್ಷಗಳಿಂದ ಬರುವವರನ್ನು ಕಾಯುತ್ತಿದೆ. ರಾಜ್ಯದಲ್ಲಿ ಆ ಪಕ್ಷಕ್ಕೆ ಭವಿಷ್ಯವೇ ಇಲ್ಲ ಎಂದು ಟೀಕಿಸಿದರು.
ನಾವು ಯಾರದೋ ಕೃಪೆಯಿಂದ ಗೆದ್ದವರಲ್ಲ. ಕಾರ್ಯಕರ್ತರ ಜತೆ ನಿರಂತರವಾಗಿ ಸಂಪರ್ಕ ಇಟ್ಟುಕೊಂಡು ಬಂದವರು. ಅದರ ಫಲವಾಗಿ ಜನ ನಮ್ಮನ್ನು ಗೆಲ್ಲಿಸಿದ್ದಾರೆ. ಉಪ ಚುನಾವಣೆಯಲ್ಲಿ 15 ಕ್ಷೇತ್ರಗಳನ್ನೂ ಗೆಲ್ಲಲಿದ್ದೇವೆ ಎಂದು ಸುಧಾಕರ್ ವಿಶ್ವಾಸ ವ್ಯಕ್ತಪಡಿಸಿದರು.