ಬೆಂಗಳೂರು, ನ.14- ಕಾಂಗ್ರೆಸ್ ಪಕ್ಷದಲ್ಲಿ ತಮ್ಮನ್ನು ಗಡೆಗಣಿಸಲಾಗುತ್ತಿದೆ ಎಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಶಿವಾಜಿನಗರ ಕ್ಷೇತ್ರದ ಆರ್.ರೋಷನ್ ಬೇಗ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳದೆ ಬಿಜೆಪಿ ತ್ರಿಶಂಕು ಸ್ಥಿತಿಗೆ ತಳ್ಳಿದೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬರಲು ಕಾರಣರಾದ 17 ಮಂದಿ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರ ಪೈಕಿ ರೋಷನ್ ಬೇಗ್ ಹೊರತುಪಡಿಸಿ ಬಿಜೆಪಿ 16 ಮಂದಿಯನ್ನು ತನ್ನ ಪಕ್ಷಕ್ಕೆ ಸೇರಿಸಿಕೊಂಡಿದೆ.
ಕೊನೆ ಕ್ಷಣದಲ್ಲಿ ರೋಷನ್ಬೇಗ್ ಅವರನ್ನು ಸೇರಿಸಿಕೊಳ್ಳಲಾಗದೆ ಮುಖ್ಯಮಂತ್ರಿ ಬಿ.ಎಸ್.ಯಡಿಸಯೂರಪ್ಪ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ನಿನ್ನೆ ತಡ ರಾತ್ರಿಯವರೆಗೂ ರೋಷನ್ಬೇಗ್ ನಡೆಸಿದ ಕಸರತ್ತು ವಿಫಲವಾಗಿದೆ.
ನಿನ್ನೆ ರಾತ್ರಿ 16 ಮಂದಿ ಅನರ್ಹರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆ ಬಿಡುಗಡೆಯಾಗಿತ್ತು. ಅದರಲ್ಲಿ ತಮ್ಮ ಹೆಸರು ಇಲ್ಲದೇ ಇರುವುದನ್ನು ಕಂಡು ಗಾಬರಿಯಾದ ರೋಷನ್ಬೇಗ್ ಅವರು ರಾತ್ರಿ 12 ಗಂಟೆಗೆ ಯಡಿಯೂರಪ್ಪ ಅವರ ಮನೆಗೆ ಹೋಗಿದ್ದಾರೆ.
ಆದರೆ, ಈ ಸಂದರ್ಭದಲ್ಲಿ ಹೈಕಮಾಂಡ್ ಅನುಮತಿ ಸಿಗದೇ ಇರುವುದನ್ನು ತಿಳಿಸಲಾಗಿದ್ದು, ಉಪಚುನಾವಣೆಯಲ್ಲಿ ಶರವಣ ಎಂಬುವರಿಗೆ ಟಿಕೆಟ್ ನೀಡಲಾಗುತ್ತದೆ. ನೀವು ಮುಂದೆ ನಿಂತು ಆತನನ್ನು ಗೆಲ್ಲಿಸಿಕೊಂಡು ಬನ್ನಿ. ಚುನಾವಣೆ ಮುಗಿದ ಬಳಿಕ ನಿಮ್ಮ ಮಗನನ್ನು ವಿಧಾನಪರಿಷತ್ ಸದಸ್ಯನನ್ನಾಗಿ ಮಾಡಿ, ಸಚಿವ ಸ್ಥಾನ ನೀಡುತ್ತೇವೆ. ಶಿವಾಜಿನಗರದಲ್ಲಿ ಮೂರು ಅವಧಿಯಿಂದಲೂ ಬಿಜೆಪಿ ಗೆದ್ದಿಲ್ಲ. ಈ ಬಾರಿ ನಿಮ್ಮಿಂದಾಗಿ ಗೆದ್ದರೆ ಹೈಕಮಾಂಡ್ಗೆ ಮನವರಿಕೆ ಮಾಡಿಕೊಟ್ಟು ನಿಮ್ಮ ಮಗನನ್ನು ಸಚಿವನನ್ನಾಗಿ ಮಾಡುತ್ತೇವೆ. ಐಎಂಎ ತನಿಖೆ ಪೂರ್ಣಗೊಳ್ಳುವವರೆಗೂ ನಿಮಗೆ ಯಾವ ಅಧಿಕಾರ ನೀಡಲು ಹೈಕಮಾಂಡ್ ಒಪ್ಪುತ್ತಿಲ್ಲ ಎಂದು ಯಡಿಯೂರಪ್ಪ ಅವರ ಪುತ್ರರೊಬ್ಬರು ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.
ಇದಕ್ಕೂ ಮೊದಲು ಗುರುವಾರ ಬಿಜೆಪಿ ಸೇರ್ಪಡೆ ಕಾರ್ಯಕ್ರಮವಿದೆ. ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಗರು ಆಗಮಿಸಿ ಎಂದು ರೋಷನ್ ಬೇಗ್ ಅವರ ಪುತ್ರ ರುಮಾನ್ ಬೇಗ್ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿ ಕರೆ ನೀಡಿದ್ದರು.
ಇನ್ನು ಬಹಳಷ್ಟು ಮಂದಿಗೆ ಪೋನ್ ಮಾಡಿ ಆಹ್ವಾನಿಸಲಾಗಿತ್ತು. ಆದರೆ, ರಾತ್ರಿ 10.30ರ ನಂತರದ ದಿಢೀರ್ ಬೆಳವಣಿಗೆ ಶಿವಾಜಿನಗರದಲ್ಲಿ ರೋಷನ್ಬೇಗ್ ಅವರ ಬೆಂಬಲಿಗರನ್ನು ಕಂಗೆಡಿಸಿದೆ.