‘ಅನರ್ಹ’ರ ಕೈಯಲ್ಲಿ ಕಮಲ, ಎದೆಯಲ್ಲಿ ತಳಮಳ! ಗೆಲುವಿನ ಭರವಸೆ ತುಂಬಿದ ಕಟೀಲ್

ಬೆಂಗಳೂರು: ಕೇಸರಿ ಶಾಲು ಹೊದ್ದು, ಕಮಲ ಬಾವುಟ ಹಿಡಿದ ಅನರ್ಹ ಶಾಸಕರಿಗೆ ಬಿಜೆಪಿ ಆತ್ಮೀಯವಾಗಿ ಬರಮಾಡಿಕೊಂಡಿದೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಜಗನ್ನಾಥ ಭವನದ ಬಿಜೆಪಿ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅನರ್ಹರನ್ನು ಪಕ್ಷಕ್ಕೆ ಬರಮಾಡಿಕೊಂಡರು.

ಭಯ ಬೇಡ, ನಾನಿದ್ದೇನೆ’: ಅನರ್ಹರಿಗೆ ಕಟೀಲ್ ಭರವಸೆ!
17 ಅನರ್ಹ ಶಾಸಕರನ್ನು ಪಕ್ಷಕ್ಕೆ ಬರಮಾಡಿಕೊಂಡ ನಂತರ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಅನರ್ಹ ಶಾಸಕರು ಅಧಿಕೃತವಾಗಿ ನಮ್ಮ ಕುಟುಂಬ ಸೇರಿದ್ದಾರೆ ಎಂದು ಹೇಳಿದ್ದಾರೆ. ನಿಮ್ಮನ್ನು ಗೆಲ್ಲಿಸುವ ಭರವಸೆ ನನ್ನದು ಎಂದ ಕಟೀಲ್, ಬಿಜೆಪಿ ರಾಜ್ಯಾಧ್ಯಕ್ಷನಾಗಿ ನಾನು ನಿಮಗೆ ಈ ಭರವಸೆ ನೀಡುತ್ತಿದ್ದೇನೆ ಎಂದರು. ಬಿಜೆಪಿ ಕಾರ್ಯಕರ್ತರು ನಿಮ್ಮ ಜೊತೆ ಹೊಂದಿಕೊಳ್ಳುತ್ತಾರೆ, ಯಾವುದೇ ಆತಂಕ ಬೇಡ ಎಂದು ಅನರ್ಹ ಶಾಸಕರಿಗೆ ನಳೀನ್ ಕುಮಾರ್ ಕಟೀಲ್ ಭರವಸೆ ತುಂಬಿದರು.

ಅಪಾರ್ಥ ಮಾಡ್ಕೋಬೇಡಿ’: ಯಡಿಯೂರಪ್ಪ
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಯಡಿಯೂರಪ್ಪ, 17 ಅನರ್ಹ ಶಾಸಕರನ್ನು ಭಾವಿ ಶಾಸಕರು, ಭಾವಿ ಸಚಿವರು ಎಂದೇ ಸಂಬೋಧಿಸಿದರು. ಬಳಿಕ ತರಾತುರಿಯಲ್ಲಿ ಅನರ್ಹ ಶಾಸಕರನ್ನು ಪಕ್ಷಕ್ಕೆ ಸ್ವಾಗತಿಸಿ ತುಮಕೂರಿಗೆ ಹೊರಟರು. ತುಮಕೂರಿನಲ್ಲಿ ಸಹಕಾರ ಇಲಾಖೆ ರಾಜ್ಯಮಟ್ಟದ ಕಾರ್ಯಕ್ರಮ ಇರುವ ಕಾರಣ, ಯಡಿಯೂರಪ್ಪ ತುರ್ತಾಗಿ ತುಮಕೂರಿಗೆ ಹೊರಟರು. ತಮ್ಮ ತರಾತುರಿಯನ್ನು ಅಪಾರ್ಥ ಮಾಡಿಕೊಳ್ಳಬೇಡಿ ಎಂದೂ ಯಡಿಯೂರಪ್ಪ ಸ್ಪಷ್ಟಪಡಿಸಿದರು.

ಆದ್ರೂ.. ಅನರ್ಹರಿಗೆ ಏನೋ ತಳಮಳ..
ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡಿದ್ದರೂ ಕೂಡಾ, ವೇದಿಕೆ ಮೇಲಿದ್ದರೂ ಕೂಡಾ ಅನರ್ಹ ಶಾಸಕರಿಗೆ ಅದೇನೋ ತಳಮಳ ಕಾಡುತ್ತಿತ್ತು. ಅನರ್ಹರು ಟೆನ್ಶನ್‌ನಲ್ಲಿದ್ದಾರೆ ಅನ್ನೋದು ಅವರ ಮುಖಭಾವದಲ್ಲೇ ವ್ಯಕ್ತವಾಗುತ್ತಿತ್ತು. ಕೆಪಿಜೆಪಿಯಿಂದ ಕಾಂಗ್ರೆಸ್‌ಗೆ ಹಾರಿ ಅನರ್ಹರಾದ ಆರ್‌. ಶಂಕರ್ ಅವರಂತೂ ಯಡಿಯೂರಪ್ಪ ಹಿಂದಿಂದೆಯೇ ಓಡಾಡುತ್ತಿದ್ದರು. ಯಡಿಯೂರಪ್ಪ ಮಾತಿಗೆ ಸಿಗದಿದ್ದಾಗ ಆರ್. ಅಶೋಕ್ ಜೊತೆ ಮಾತುಕತೆ ನಡೆಸಿದರು. ಅವಸರ ಅವಸರವಾಗಿ ತುಮಕೂರಿಗೆ ಹೊರಟ ಸಿಎಂ, ಬಳಿಕ ಮಾತಾಡೋದಾಗಿ ಶಂಕರ್‌ಗೆ ಹೇಳಿದ್ರು. ಈ ಎಲ್ಲಾ ಬೆಳವಣಿಗೆಗಳ ನಡುವೆ ಕಾರ್ಯಕ್ರಮಕ್ಕೆ ಲಕ್ಷ್ಮಣ ಸವದಿ ಗೈರು ಹಾಜರಾಗಿದ್ದು ಎದ್ದು ಕಾಣುತ್ತಿತ್ತು. ಕಾಗವಾಡ ಕ್ಷೇತ್ರದ ಟಿಕೆಟ್ ಪೈಪೋಟಿ ಎಷ್ಟರ ಮಟ್ಟಿಗೆ ಕಾವೇರುತ್ತೆ ಅನ್ನೋದಕ್ಕೆ ಸವದಿ ಗೈರು ಹಾಜರಿಯೇ ಸಾಕ್ಷಿಯಾಗಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ