ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಳ್ಳಲು ಕಾರಣವಾಗಿದ್ದ 17 ಮಂದಿ ಅನರ್ಹ ಶಾಸಕರಲ್ಲಿ 16 ಮಂದಿ ಗುರುವಾರ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸಮ್ಮುಖದಲ್ಲಿ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತೀಯ ಜನತಾ ಪಾರ್ಟಿಗೆ ಸೇರ್ಪಡೆಯಾದರು.
ಪ್ರಸಕ್ತ ವಿಧಾನಸಭೆಯ ಶಾಸಕರಾಗಿ ಬಂಡಾಯವೆದ್ದು ರಾಜೀನಾಮೆ ನೀಡಿದ್ದ ಹಿನ್ನಲೆಯಲ್ಲಿ ಹಿಂದಿನ ಸ್ಪೀಕರ್ ಕೆ ಆರ್ ರಮೇಶ್ ಕುಮಾರ್ ಅವರನ್ನು ಅನರ್ಹಗೊಳಿಸಿದ್ದರು.
ತಮ್ಮ ಅನರ್ಹತೆಯನ್ನು ಪ್ರಶ್ನಿಸಿ ಶಾಸಕರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ನಿನ್ನೆ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್ ಸ್ಪೀಕರ್ ಆದೇಶವನ್ನು ಎತ್ತಿಹಿಡಿದು ಮುಂದಿನ ತಿಂಗಳು 5ರಂದು ನಡೆಯುವ ಉಪ ಚುನಾವಣೆಯಲ್ಲಿ ಸ್ಪರ್ಧಿಸಬಹುದೆಂದು ತೀರ್ಪು ನೀಡಿದೆ. ಇದರಿಂದ ಅನರ್ಹ ಶಾಸಕರ ರಾಜಕೀಯ ಬದುಕಿಗೆ ಸದ್ಯಕ್ಕೆ ಮರುಚೈತನ್ಯ ಸಿಕ್ಕಂತಾಗಿದೆ.
ಭಾರತೀಯ ಜನತಾ ಪಾರ್ಟಿಯ ಬೆಂಬಲದಿಂದಲೇ ಈ ಶಾಸಕರು ರಾಜೀನಾಮೆ ನೀಡಿದ್ದರು. ನಂತರ ಬಿಜೆಪಿಗೆ ಸೇರುತ್ತಾರೆ ಎಂಬ ಮಾತುಗಳೇ ದಟ್ಟವಾಗಿ ಕೇಳಿಬರುತ್ತಿತ್ತು. ಇದೀಗ ಉಪ ಚುನಾವಣೆ ದಿನಾಂಕ ಘೋಷಣೆಯಾದ ನಂತರ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ಹೆಚ್ಚಾಗಿ ಓಡಾಡುತ್ತಿದ್ದು, ಅಲ್ಲಿಗೆ ಹೆಚ್ಚಿನ ಅನುದಾನ, ಯೋಜನೆ, ನೆರವು ಪ್ರಕಟಿಸುತ್ತಿದ್ದಾರೆ. ಚುನಾವಣೆಯಲ್ಲಿ ಬಹುತೇಕ ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಕೂಡ ಬಿಜೆಪಿ ಹೊಂದಿದೆ.
ಬಿಜೆಪಿಗೆ ಸೇರ್ಪಡೆಗೊಂಡವರು: ಎಚ್. ವಿಶ್ವನಾಥ್, ಮಹೇಶ್ ಕುಮಟಳ್ಳಿ, ರಮೇಶ್ ಜಾರಕಿಹೊಳಿ, ಆರ್. ಶಂಕರ್, ಆನಂದ್ ಸಿಂಗ್, ಪ್ರತಾಪ್ ಗೌಡ ಪಾಟೀಲ್, ಶಿವರಾಂ ಹೆಬ್ಬಾರ್, ನಾರಾಯಣ ಗೌಡ, ಎಸ್ ಟಿ ಸೋಮಶೇಖರ್, ಗೋಪಾಲಯ್ಯ, ಬೈರತಿ ಬಸವರಾಜ, ಮುನಿರತ್ನ, ಎಂಟಿಬಿ ನಾಗರಾಜ್, ಡಾ. ಸುಧಾಕರ್ ಕೆ ಹಾಗೂ ಶ್ರೀಮಂತ ಪಾಟೀಲ, ಬಿ ಸಿ ಪಾಟೀಲ್.