ನವದೆಹಲಿ, ನ.13- ವಿಶ್ವವಿಖ್ಯಾತ ಶಬರಿಮಲೆಯ ಶ್ರೀ ಸ್ವಾಮಿ ಅಯ್ಯಪ್ಪ ದೇಗುಲಕ್ಕೆ ಎಲ್ಲ ವಯೋಮಾನದ ಮಹಿಳೆಯರು ಪ್ರವೇಶಿಸಬಹುದು ಎಂದು ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ಕುರಿತು ನಾಳೆ ಸರ್ವೋನ್ನತ ನ್ಯಾಯಾಲಯ ಮಹತ್ವದ ಆದೇಶ ನೀಡಲಿದೆ.
2018ರ ಸೆಪ್ಟೆಂಬರ್ನಲ್ಲಿ ಎಲ್ಲ ವಯೋಮಾನದ ಮಹಿಳೆಯರು ಕೇರಳದ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಪ್ರವೇಶಿಸಬಹುದೆಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿತ್ತು.
ಈ ತೀರ್ಪಿನ ಮರು ಪರಿಶೀಲನೆಗೆ ಅರ್ಜಿಗಳು ಸಲ್ಲಿಕೆಯಾಗಿದ್ದವು. ದೇವಸ್ಥಾನದ ತಂತ್ರಿ ಹಾಗೂ ನಾರ್ಯಸೇವಾ ಸಮಾಜ (ಎನ್ಎಸ್ಎಸ್) ಸೇರಿದಂತೆ ಹಲವಾರು ಸಂಘಟನೆಗಳು ಸುಪ್ರೀಂಕೋರ್ಟ್ ಮುಂದೆ ತಮ್ಮ ವಾದವನ್ನು ಮಂಡಿಸಿ ತೀರ್ಪಿನ ಮರು ಪರಿಶೀಲನೆಗಾಗಿ ಯತ್ನಿಸಿದ್ದವು.
ಈ ವರ್ಷ ಫೆಬ್ರವರಿಯಲ್ಲಿ ಈ ಬಗ್ಗೆ ವಿಚಾರಣೆ ನಡೆಸಿದ್ದ ಸುಪ್ರೀಂ ತೀರ್ಪನ್ನು ಕಾಯ್ದಿರಿಸಿತ್ತು. ಈ ಕುರಿತ ಮಹತ್ವದ ತೀರ್ಪು ಕೂಡ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನಿವೃತ್ತಿಗೂ ಮುನ್ನವೇ ಹೊರಬೀಳಲಿದೆ.
ನಾಳೆ ಮರುಪರಿಶೀಲನಾ ಅರ್ಜಿ ಕುರಿತು ಹೊರಬೀಳುವ ತೀರ್ಪಿಗಾಗಿ ದೇಶಾದ್ಯಂತ ಇರುವ ಅಯ್ಯಪ್ಪ ಭಕ್ತರು ಮತ್ತು ಮಹಿಳಾ ಸಮುದಾಯ ಕಾತರದಿಂದ ಕಾಯುತ್ತಿದೆ.