ಬೀಜಿಂಗ್/ನವದೆಹಲಿ, ನ.13- ಇಂಡೋ-ಚೀನಾ ಗಡಿಭಾಗದಲ್ಲಿ ಪದೇ ಪದೇ ತಗಾದೆ ತೆಗೆಯುತ್ತಿರುವ ಚೀನಾ ಈಗ ವಾಸ್ತವ ನಿಯಂತ್ರಣ ರೇಖೆ (ಎಲ್‍ಎಸಿ) ಉದ್ದಕ್ಕೂ 3,488 ಕಿ.ಮೀ. ಪ್ರದೇಶದಲ್ಲಿ ಕೈಗೊಂಡಿರುವ ನಿರ್ಮಾಣ ಚಟುವಟಿಕೆ ಭಾರತಕ್ಕೆ ಆತಂಕ ಸೃಷ್ಟಿಸಿದೆ.
ಎಲ್‍ಎಸಿ ಉದ್ದಕ್ಕೂ ಸಮಗ್ರ ಮಾದರಿ ಗ್ರಾಮಗಳನ್ನು ಚೀನಾ ಅಭಿವೃದ್ಧಿಗೊಳಿಸುತ್ತಿದೆ. ಅಲ್ಲದೆ, ಇದನ್ನು ವಿಸ್ತರಿಸಿ ಕಂಟೋನ್ಮೆಂಟ್ (ಸೇನಾ ದಂಡು ಪ್ರದೇಶ) ಆಗಿಯೂ ಬಳಸಬಹುದಾಗಿದೆ.
ವಾಸ್ತವ ಗಡಿರೇಖೆ ಉದ್ದಕ್ಕೂ ವಿಶಾಲ ಪ್ರದೇಶವನ್ನು ಸಮಗ್ರ ಗ್ರಾಮಗಳು ಮತ್ತು ಕಂಟೋನ್ಮೆಂಟ್ ಈ ಎರಡೂ ಉದ್ದೇಶಗಳಿಗೂ ಚೀನಾ ಬಳಸಲು ನಿರ್ಧರಿಸಿರುವುದು ಭಾರತಕ್ಕೆ ಆತಂಕಕಾರಿಯಾಗಿದೆ ಎಂದು ರಕ್ಷಣಾ ಸಚಿವಾಲಯದ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಮಗ್ರ ಗ್ರಾಮಗಳ ಅಭಿವೃದ್ಧಿ ಸೋಗಿನಲ್ಲಿ ಚೀನಾ ತನ್ನ ಸೇನಾ ಚಟುವಟಿಕೆಗಳನ್ನು ವೃದ್ಧಿಸಲಿದೆ ಎಂಬುದು ಭಾರತದ ಕಳವಳಕ್ಕೆ ಕಾರಣ. ಎಲ್‍ಎಸಿಯಲ್ಲಿ ಅಭಿವೃದ್ಧಿಗೊಳ್ಳುತ್ತಿರುವ ಸಮಗ್ರ ಗ್ರಾಮಗಳ ಮಾದರಿ ಮನೆಗಳು, ಸಮುದಾಯ ಭವನ, ಕೆರೆ-ಕುಂಟೆಗಳು, ಬೌದ್ಧ ದೇಗುಲಗಳು ಇತ್ಯಾದಿ ನಿರ್ಮಾಣವಾಗುತ್ತಿವೆ. ಆದರೆ, ಈ ಮಾದರಿ ಗ್ರಾಮಗಳನ್ನು ಕಂಟೋನ್ಮೆಂಟ್‍ಗೂ ಬಳಸಿಕೊಳ್ಳಬಹುದು ಎಂದು ಚೀನಾ ಹೇಳುತ್ತಿದೆ. ಈ ವಿಸ್ತರಿತ ಯೋಜನೆಯಿಂದ ಭಾರತದ ಗಡಿ ಭಾಗಗಳಲ್ಲಿ ಚೀನಾದ ಮಿಲಿಟರಿ ಚಟುವಟಿಕೆಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ.
ಚೀನಾ ಈ ಹಿಂದೆ ಈಶಾನ್ಯ ಭಾರತದ ಗಡಿ ಭಾಗಗಳಲ್ಲಿ ನಿರ್ಮಾಣ ಚಟುವಟಿಕೆಗಳನ್ನು ಹೆಚ್ಚಿಸಿ ಕ್ಯಾತೆ ತೆಗೆದಿತ್ತು. ಡೋಕ್ಲಂನಲ್ಲಿ ಚೀನಾ ಈ ಹಿಂದೆ ಸೃಷ್ಟಿಸಿದ ಗಡಿ ಕ್ಯಾತೆ 72 ದಿನಗಳ ಕಾಲ ಮುಂದುವರಿದು ಉಭಯ ದೇಶಗಳ ನಡುವೆ ಯುದ್ಧದ ಕಾರ್ಮೋಡಗಳು ದಟ್ಟೈಸುವಂತೆ ಮಾಡಿದ್ದವು. ನಂತರ ಕೇಂದ್ರ ಸರ್ಕಾರದ ರಾಜತಾಂತ್ರಿಕ ಮಧ್ಯಸ್ಥಿಕೆಯಿಂದಾಗಿ ವಿವಾದ ಬಗೆಹರಿದಿತ್ತು.