ಬೆಂಗಳೂರು,ನ.13- ಡಿಸೆಂಬರ್ 5ರಂದು ನಡೆಯುವ ಉಪಚುನಾವಣೆಗೆ ಅನರ್ಹ ಶಾಸಕರು ಸ್ಫರ್ಧಿ ಸಬಹುದೆಂದು ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಎಲ್ಲರಿಗೂ ಬಿಜೆಪಿ ಟಿಕೆಟ್ ನೀಡುವುದು ಪಕ್ಕಾ ಆಗಿದೆ.
ಈ ಸಂಬಂಧ ಇಂದು ಸಂಜೆ ಪಕ್ಷದ ಕಚೇರಿಯಲ್ಲಿ ಮಹತ್ವದ ಕೋರ್ ಕಮಿಟಿ ಸಭೆ ನಡೆಯಲಿದ್ದು, ಯಾವ ಯಾವ ಕ್ಷೇತ್ರಗಳಿಗೆ ಯಾರಿಗೆ ಟಿಕೆಟ್ ನೀಡಬೇಕು ಎಂಬುದರ ಕುರಿತು ಚರ್ಚೆ ನಡೆಯಲಿದೆ.
ಮುಖ್ಯಮಂತ್ರಿ ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್, ಕೋರ್‍ಕಮಿಟಿ ಸದಸ್ಯರಾದ ಜಗದೀಶ್ ಶೆಟ್ಟರ್, ಆರ್.ಅಶೋಕ್, ಕೆ.ಎಸ್.ಈಶ್ವರಪ್ಪ, ಡಿ.ವಿ.ಸದಾನಂದಗೌಡ, ಪ್ರಹ್ಲಾದ್ ಜೋಷಿ ಮತ್ತಿತರ ಪ್ರಮುಖರು ಭಾಗವಹಿಸಿ ಉಪಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಿದ್ದಾರೆ.
ರಾಜ್ಯ ಘಟಕದ ವತಿಯಿಂದ ಪಕ್ಷದ ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಿಕೊಡುವ ಪಟ್ಟಿಯೇ ಅಂತಿಮವಾಗಲಿದ್ದು, ಬಹುತೇಕ 15 ಕ್ಷೇತ್ರಗಳಿಗೂ ಕಾಂಗ್ರೆಸ್-ಜೆಡಿಎಸ್‍ನಿಂದ ಅನರ್ಹಗೊಂಡ ಶಾಸಕರಿಗೆ ಮಣೆ ಹಾಕುವುದು ಸ್ಪಷ್ಟವಾಗಿದೆ.
ರಾಜೀನಾಮೆ ನೀಡುವ ಮುನ್ನವೇ ಉಪಚುನಾವಣೆಯಲ್ಲಿ ಟಿಕೆಟ್ ಹಾಗೂ ಮಂತ್ರಿಸ್ಥಾನದ ಆಶ್ವಾಸನೆಯನ್ನು ಕೊಡಲಾಗಿತ್ತು ಎನ್ನಲಾಗಿದೆ.
ಖುದ್ದು ಹಾಲಿ ಸಿಎಂ ಯಡಿಯೂರಪ್ಪನವರೇ ಈ ಭರವಸೆಯನ್ನು ನೀಡಿದ್ದರಿಂದ ಶಾಸಕರು ತಮ್ಮ ಪಕ್ಷಗಳಿಂದ ಹೊರಬಂದು ರಾಜೀನಾಮೆ ನೀಡುವ ತೀರ್ಮಾನಕ್ಕೆ ಬಂದಿದ್ದರು.
ಇದೀಗ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಸುಪ್ರೀಂಕೋರ್ಟ್ ಅವಕಾಶ ನೀಡಿರುವುದರಿಂದ ಬಹುತೇಕ 15 ಮಂದಿ ಅನರ್ಹರಿಗೆ ಟಿಕೆಟ್ ಸಿಗುವುದು ಪಕ್ಕಾ ಎನ್ನಲಾಗುತ್ತಿದೆ.
ಈ ಮೊದಲು ಕೆಲವು ಕ್ಷೇತ್ರಗಳಲ್ಲಿ ಅನರ್ಹರಿಗೆ ಟಿಕೆಟ್ ನೀಡುವ ಕುರಿತಂತೆ ಪಕ್ಷದ ವಲಯದಲ್ಲಿ ಪರ-ವಿರೋಧ ವ್ಯಕ್ತವಾಗಿತ್ತು. ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ನಿರೀಕ್ಷಿತ ಫಲಿತಾಂಶ ಬಾರದಿರುವ ಕಾರಣ ಹೈಕಮಾಂಡ್ ಕೂಡ ತುಸು ಮೆತ್ತಗಾದಂತೆ ಕಂಡುಬಂದಿದೆ.
ಹೀಗಾಗಿ ಯಡಿಯೂರಪ್ಪನವರ ಯಾವುದೇ ತೀರ್ಮಾನಕ್ಕೂ ಸದ್ಯದ ಪರಿಸ್ಥಿತಿಯಲ್ಲಿ ವಿರೋಧ ವ್ಯಕ್ತವಾಗುವ ಪ್ರಮೇಯವೂ ಉದ್ಭವವಾಗುವುದಿಲ್ಲ.
ಬಿಎಸ್‍ವೈ ಕೊಟ್ಟಿರುವ ಭರವಸೆಯಂತೆ ಡಿ.5ರಂದು ನಡೆಯಲಿರುವ ಬೆಂಗಳೂರಿನ ಹೊಸಕೋಟೆ, ಚಿಕ್ಕಬಳ್ಳಾಪುರ, ಹುಣಸೂರು, ಮಹಾ ಲಕ್ಷ್ಮಿ ಲೇಔಟ್, ರಾಜರಾಜೇಶ್ವರಿನಗರ, ಯಶವಂತಪುರ, ಶಿವಾಜಿನಗರ, ಕೆ.ಆರ್.ಪುರ, ಹಿರೇಕೆರೂರು, ಅಥಣಿ, ರಾಣೆಬೆನ್ನೂರು, ಕಾಗವಾಡ, ಗೋಕಾಕ್, ವಿಜಯನಗರ, ಮಸ್ಕಿ, ಯಲ್ಲಾಪುರದಲ್ಲಿ ಅನರ್ಹರಗೊಂಡವರಿಗೆ ಟಿಕೆಟ್ ಖಾತ್ರಿಯಾಗಿದೆ.
ಹುಣಸೂರಿನಲ್ಲಿ ಮಾಜಿ ಸಚಿವ ಎಚ್.ವಿಶ್ವನಾಥ್ ಸ್ಪರ್ಧೆ ಮಾಡುವ ಬಗ್ಗೆ ಈವರೆಗೂ ಯಾವುದೇ ರೀತಿಯ ನಿರ್ಧಾರ ಕೈಗೊಂಡಿಲ್ಲ. ಬದಲಿಗೆ ತಮ್ಮನ್ನು ಪರಿಷತ್‍ನಿಂದ ಆಯ್ಕೆ ಮಾಡುವಂತೆ ಪಕ್ಷದ ಮುಖಂಡರಿಗೆ ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಎಂಟಿಬಿ ನಾಗರಾಜ್,ಡಾ.ಕೆ.ಸುಧಾಕರ್, ನಾರಾಯಣಗೌಡ, ಕೆ.ಗೋಪಾಲಯ್ಯ,ಮುನಿರತ್ನ, ಎಸ್.ಟಿ.ಸೋಮಶೇಖರ್,ರೋಷನ್‍ಬೇಗ್, ಭೈರತಿ ಬಸವರಾಜ್, ಬಿ.ಸಿ.ಪಾಟೀಲ್,ಮಹೇಶ್ ಕುಮಟಳ್ಳಿ, ಆರ್.ಶಂಕರ್, ಶ್ರೀಮಂತ ಪಾಟೀಲ್,ರಮೇಶ್ ಜಾರಕಿಹೊಳಿ, ಆನಂದ್‍ಸಿಂಗ್, ಪ್ರತಾಪ್ ಗೌಡ ಪಾಟೀಲ್, ಶಿವರಾಮ್ ಹೆಬ್ಬಾರ್ ಅವರುಗಳಿಗೆ ಟಿಕೆಟ್ ಬಹುತೇಕ ಖಾತ್ರಿಯಾಗಲಿದೆ.
ಟಿಕೆಟ್ ಸಿಗದೆ ಪಕ್ಷದ ವಿರುದ್ದ ಸಡ್ಡು ಹೊಡೆದಿರುವ ಭಿನ್ನಮತೀಯರನ್ನು ಪಕ್ಷದಿಂದಲೇ ಕಿತ್ತು ಹಾಕಲು ಬಿಜೆಪಿ ಸಜ್ಜಾಗಿದೆ.