ಬೆಂಗಳೂರು, ನ.12-ಗೋಕಾಕ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ತಮ್ಮ ಸಹೋದರ ಲಖನ್ ಜಾರಕಿಹೊಳಿಗೆ ಟಿಕೆಟ್ ನೀಡದೆ ಇದ್ದರೆ ಜಿಲ್ಲೆಯಲ್ಲಿನ ಮೂರು ವಿಧಾನಸಭಾ ಕ್ಷೇತ್ರಗಳ ಫಲಿತಾಂಶದಲ್ಲೂ ವ್ಯತ್ಯಯವಾಗಲಿದೆ ಎಂಬ ಎಚ್ಚರಿಕೆಯನ್ನು ಸತೀಶ್ ಜಾರಕಿಹೊಳಿ ಕಾಂಗ್ರೆಸ್ ನಾಯಕರಿಗೆ ರವಾನಿಸಿದ್ದಾರೆ.
ಈ ಹಿಂದೆ ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಅನಗತ್ಯ ಹಸ್ತಕ್ಷೇಪದಿಂದಾಗಿ ಸಮ್ಮಿಶ್ರ ಸರ್ಕಾರ ಪತನವಾಗಿದೆ. ಅನಂತರವಾದರೂ ಕಾಂಗ್ರೆಸ್ ನಾಯಕರು ಬುದ್ಧಿ ಕಲಿಯಬೇಕಿತ್ತು. ಮತ್ತೆ ತಮ್ಮದೇ ಆದ ಚಟುವಟಿಕೆಗಳನ್ನು ಆರಂಭಿಸಿದ್ದು, ಜಿಲ್ಲಾ ರಾಜಕಾರಣದಲ್ಲಿ ಹಸ್ತಕ್ಷೇಪ ಆರಂಭಿಸಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಸಂಕಷ್ಟದ ಸಂದರ್ಭದಲ್ಲೂ ಪಕ್ಷದ ಜೊತೆ ನಿಂತ ತಮ್ಮನ್ನು ಮೂಲೆಗುಂಪು ಮಾಡುವ ಪ್ರಯತ್ನ ನಡೆದಿದ್ದೇ ಆದರೆ ಅದಕ್ಕೆ ತಕ್ಕ ಪ್ರತಿಫಲ ಅನುಭವಿಸಬೇಕಾಗುತ್ತದೆ ಎಂದು ಸತೀಶ್ ಜಾರಕಿ ಹೊಳಿ ಖಾರವಾದ ಮಾತುಗಳಲ್ಲಿ ಹೈಕಮಾಂಡ್ ನಾಯಕರ ಬಳಿಯೇ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.
ಗೋಕಾಕ್, ಅಥಣಿ ಮತ್ತು ಕಾಗವಾಡ ವಿಧಾನಸಭಾ ಕ್ಷೇತ್ರಗಳಿಗೆ ಡಿ.5ರಂದು ಉಪಚುನಾವಣೆ ನಡೆಯಲಿದೆ. ಕಾಂಗ್ರೆಸ್ನಿಂದ ಆಯ್ಕೆಯಾದ ಮೂರು ಮಂದಿ ಶಾಸಕರ ರಾಜೀನಾಮೆಯಿಂದ ತೆರವಾಗಿರುವ ಈ ಕ್ಷೇತ್ರಗಳಿಗೆ ಕಾಂಗ್ರೆಸ್ನಿಂದ ಆಯ್ಕೆಯಾದವರು ಬಿಜೆಪಿ ಅಭ್ಯರ್ಥಿಗಳಾಗಲು ಮುಂದಾಗಿದ್ದಾರೆ.
ಈ ಹಿಂದೆ ಬಿಜೆಪಿ ಅಭ್ಯರ್ಥಿಯಾಗಿದ್ದವರು ಕಾಂಗ್ರೆಸ್ ಬಾಗಿಲು ಬಡಿದಿದ್ದು, ಅನರ್ಹರ ವಿರುದ್ಧ ಕಣಕ್ಕಿಳಿಯಲು ಟಿಕೆಟ್ ಪಡೆಯುವ ಸಾಹಸ ನಡೆಸುತ್ತಿದ್ದಾರೆ. ಬಿಜೆಪಿಯಿಂದ ವಲಸೆ ಬರಲು ಮುಂದಾದ ಅಶೋಕ್ ಪೂಜಾರಿ ಮತ್ತು ರಾಜು ಕಾಗೆ ಅವರು ಮಾಜಿ ಸಚಿವ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
ಆದರೆ ಜಿಲ್ಲೆಯ ಪ್ರಭಾವಿ ನಾಯಕರಾದ ಸತೀಶ್ ಜಾರಕಿಹೊಳಿ ಅವರೊಂದಿಗೆ ಈ ಇಬ್ಬರೂ ಮಾತುಕತೆ ನಡೆಸಿಲ್ಲ ಎಂದು ಹೇಳಲಾಗುತ್ತಿದೆ. ಯಾವುದೇ ನಿರ್ಧಾರ ಕೈಗೊಳ್ಳುವುದಾದರೂ ಸತೀಶ್ ಜಾರಕಿ ಹೊಳಿ ಅವರನ್ನು ಕೇಳಿಯೇ ತೀರ್ಮಾನಿಸುತ್ತೇವೆ ಎಂದು ರಾಜ್ಯ ನಾಯಕರು ಹೇಳುತ್ತಿದ್ದಾರೆ. ಆದರೆ ಅನಗತ್ಯವಾಗಿ ಏಕಾಏಕಿ ಸೃಷ್ಟಿಯಾದ ಈ ಗೊಂದಲಗಳು ಜಾರಕಿ ಹೊಳಿ ಕುಟುಂಬವನ್ನು ರೊಚ್ಚಿಗೆಬ್ಬಿಸಿವೆ.
ಈ ಮೊದಲು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಜಿಲ್ಲಾ ಸಹಕಾರ ಬ್ಯಾಂಕ್ನ ಚುನಾವಣೆ ಹಿನ್ನೆಲೆಯಲ್ಲಿ ಜಾರಕಿ ಹೊಳಿ ಸಹೋದರರ ವಿರುದ್ಧ ಸಮರ ಸಾರಿದ್ದರು. ಆ ಸಂದರ್ಭದಲ್ಲಿ ಸತೀಶ್ ಜಾರಕಿ ಹೊಳಿ ಮತ್ತು ರಮೇಶ್ ಜಾರಕಿಹೊಳಿ ಒಟ್ಟಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಬೆಂಬಲ ನೀಡುತ್ತಿದ್ದ ಡಿ.ಕೆ.ಶಿವಕುಮಾರ್ ವಿರುದ್ಧ ಕಿಡಿಕಾರಿದ್ದರು. ಇದರ ಮುಂದುವರೆದ ಭಾಗವಾಗಿ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಹೋಗಿದ್ದರು. ನಂತರದ ಬೆಳವಣಿಗೆಯಲ್ಲಿ ಸಮ್ಮಿಶ್ರ ಸರ್ಕಾರವು ಪತನವಾಗಿತ್ತು. ಈಗ ಉಪಚುನಾವಣೆಗಳು ಎದುರಾಗಿವೆ. ಮತ್ತೊಮ್ಮೆ ಲಕ್ಷ್ಮಿಹೆಬ್ಬಾಳ್ಕರ್ ಅಖಾಡಕ್ಕಿಳಿದಿದ್ದು, ಬಿಜೆಪಿಯ ಅಶೋಕ್ ಪೂಜಾರಿಯವರನ್ನು ಕರೆತಂದು ಗೋಕಾಕ್ ಕ್ಷೇತ್ರದಲ್ಲಿ ಕಣಕ್ಕಿಳಿಸುವ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.
ಈ ಬೆಳವಣಿಗೆಯ ಭಾಗವಾಗಿ ಅಶೋಕ್ಪೂಜಾರಿ, ರಾಜು ಕಾಗೆ ಅವರು ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದರು. ಗೋಕಾಕ್ ಕ್ಷೇತ್ರಕ್ಕೆ ಲಖನ್ ಜಾರಕಿ ಹೊಳಿ ಅಭ್ಯರ್ಥಿ ಎಂದು ಈಗಾಗಲೇ ಅನೌಪಚಾರಿಕವಾಗಿ ಘೋಷಣೆಯಾಗಿದೆ. ಸತೀಶ್ ಜಾರಕಿ ಹೊಳಿ ಅವರು ತಮ್ಮ ಸೋದರನ ಪರವಾಗಿ ಪ್ರಚಾರ ನಡೆಸುತ್ತಿದ್ದು, ರಮೇಶ್ ಅವರನ್ನು ಸೋಲಿಸಲು ಶತ ಪ್ರಯತ್ನ ಮಾಡುತ್ತಿದ್ದಾರೆ. ಈ ಹಂತದಲ್ಲಿ ಬಿಜೆಪಿ ನಾಯಕರನ್ನು ಕರೆತರುವುದು ಲಖನ್ ಜಾರಕಿ ಹೊಳಿಗೆ ಟಿಕೆಟ್ ತಪ್ಪಿಸುವ ಪ್ರಯತ್ನ ನಡೆಸಿರುವುದು ಜಾರಕಿ ಹೊಳಿ ಕುಟುಂಬವನ್ನು ಕೆರಳಿಸಿದೆ.
ಒಂದು ವೇಳೆ ಕುಟುಂಬಕ್ಕೆ ಟಿಕೆಟ್ ಕೈ ತಪ್ಪಿದ್ದೇ ಆದರೆ ಅಥಣಿ, ಕಾಗವಾಡ, ಗೋಕಾಕ್ ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ಗೆ ಸೋಲಿನ ರುಚಿ ತೋರಿಸುವುದಾಗಿ ಸತೀಶ್ ಜಾರಕಿ ಹೊಳಿ ಎಚ್ಚರಿಕೆ ನೀಡಿದ್ದಾರೆ ಎಂದು ಹೇಳಲಾಗಿದೆ. ಈ ಬೆಳವಣಿಗೆ ಕಾಂಗ್ರೆಸ್ಗೆ ನುಂಗಲಾರದ ಬಿಸಿ ತುಪ್ಪವಾಗಿದೆ.