ಬೆಂಗಳೂರು,ನ.12- ಜೆಡಿಎಸ್ನಿಂದ ಬಹುತೇಕ ದೂರ ಸರಿದಿರುವ ಮೈಸೂರು ಭಾಗದ ಪ್ರಭಾವಿ ಒಕ್ಕಲಿಗ ನಾಯಕ, ಮಾಜಿ ಸಚಿವ ಹಾಗೂ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೆಗೌಡ ಬಿಜೆಪಿಗೆ ಸೇರ್ಪಡೆಯಾಗಲು ವೇದಿಕೆ ಸಜ್ಜಾಗಿದೆ.
ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳೀನ್ಕುಮಾರ ಕಟೀಲ್, ಮುಖಂಡರಾದ ಆರ್.ಅಶೋಕ್ ಸೇರಿದಂತೆ ಮತ್ತಿತರರ ಜೊತೆ ಮಾತುಕತೆ ನಡೆಸಿರುವ ಜಿಟಿಡಿ ಶೀಘ್ರದಲ್ಲಿ ಜೆಡಿಎಸ್ಗೆ ಗುಡ್ಬೈ ಹೇಳಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ತಿಳಿದುಬಂದಿದೆ.
ಡಿಸೆಂಬರ್ 5ರಂದು ನಡೆಯಲಿರುವ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಮುಗಿದ ನಂತರ ಫಲಿತಾಂಶಕ್ಕೂ ಮುನ್ನವೇ ಜಿಟಿಡಿ ಬಿಜೆಪಿಗೆ ಸೇರ್ಪಡೆಯಾಗುವ ಕುರಿತಂತೆ ತಮ್ಮ ಆಪ್ತರ ಬಳಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ತಕ್ಷಣವೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಮತ್ತೊಂದು ಉಪಚುನಾವಣೆ ನಡೆಯಲಿದ್ದು, ಪರಿಸ್ಥಿತಿ ನೋಡಿಕೊಂಡು ಪಕ್ಷಕ್ಕೆ ಸೇರ್ಪಡೆಯಾಗುವಂತೆ ಬಿಜೆಪಿ ನಾಯಕರು ಸಲಹೆ ಮಾಡಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಚಿವ ಆರ್. ಅಶೋಕ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಬಿಜೆಪಿಗೆ ಸೇರ್ಪಡೆಯಾಗುವುದಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ. ಪ್ರಸ್ತುತದ ದಿನಗಳಲ್ಲಿ ಉಪಚುನಾವಣೆ ನಡೆಸುವುದು ಅಷ್ಟು ಸುಲಭದ ಮಾತಲ್ಲ. ಹೇಗಿದ್ದರೂ ಜೆಡಿಎಸ್ನಿಂದ ಅಂತರ ಕಾಯ್ದುಕೊಂಡಿದ್ದೀರಿ. ಸ್ವಲ್ಪದಿನ ತಾಳ್ಮೆಯಿಂದ ಇರಬೇಕೆಂದು ಬಿಜೆಪಿ ನಾಯಕರು ಕಿವಿಮಾತು ಹೇಳಿದ್ದಾರೆ.
ನಾಳೆ ಸುಪ್ರೀಂಕೋರ್ಟ್ ಅನರ್ಹ ಶಾಸಕರ ಅರ್ಜಿ ವಿಚಾರಣೆಯ ತೀರ್ಪು ಪ್ರಕಟವಾಗಲಿದೆ. ಆಗ ಸಾಕಷ್ಟು ರಾಜಕೀಯ ಏರುಪೇರಾಗುವ ಸಾಧ್ಯತೆಗಳಿವೆ. ಅನರ್ಹ ಶಾಸಕರ ನಡುವೆಯೇ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಸೇರ್ಪಡೆಯಾದರೆ ನಂತರದಲ್ಲಿ ಅನಗತ್ಯವಾಗಿ ನೀವು ಉಪಚುನಾವಣೆ ನಡೆಯಲು ಕಾರಣರಾದಿರಿ ಎಂದು ಜೆಡಿಎಸ್-ಕಾಂಗ್ರೆಸ್ ಅಪಪ್ರಚಾರ ನಡೆಸುತ್ತವೆ. ಹೀಗಾಗಿ ದುಡುಕಿನ ನಿರ್ಧಾರ ಕೈಗೊಳ್ಳಬಾರದೆಂದು ಖುದ್ದು ಸಿಎಂ ಯಡಿಯೂರಪ್ಪನವರೇ ಜಿಟಿಡಿಗೆ ಸಲಹೆ ಮಾಡಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಜಿಟಿದೇವೇಗೌಡರಿಗೆ ಉನ್ನತಶಿಕ್ಷಣ ಖಾತೆ ನೀಡಲಾಗಿತ್ತು. ಅಂದಿನಿಂದ ದಳಪತಿಗಳ ವಿರುದ್ದ ಒಂದಿಲ್ಲೊಂದು ಕಾರಣಕ್ಕೆ ಮುನಿಸಿಕೊಂಡಿರುವ ಜಿ.ಟಿ.ದೇವೇಗೌಡರು ಸಮ್ಮಿಶ್ರ ಸರ್ಕಾರ ಪತನಗೊಂಡಾಗ ಅದನ್ನು ಉಳಿಸುವ ಪ್ರಯತ್ನ ಮಾಡಿರಲಿಲ್ಲ.
ಪಕ್ಷದ ಎಲ್ಲ ಚಟುವಟಿಕೆಗಳಿಂದ ದೂರ ಉಳಿದಿರುವ ಜಿಟಿಡಿ ಈಗಾಗಲೇ ಜೆಡಿಎಸ್ ಪಕ್ಷ ಬಿಡುವ ಮುನ್ಸೂಚನೆ ನೀಡಿದ್ದಾರೆ.