ಮಹಾರಾಷ್ಟ್ರ: ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟು ಕುತೂಹಲದ ಘಟ್ಟಕ್ಕೆ ಬಂದು ತಲುಪಿದೆ. ಅಧಿಕಾರ ಹಂಚಿಕೆ ಕುರಿತಾಗಿ ಹಾಗೂ ಶಿವಸೇನೆ ನಡುವೆ ತಲೆಧೋರಿದ ತಿಕ್ಕಾಟ ತೀವ್ರ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ ಅತಿ ಹೆಚ್ಚು ಸ್ಥಾನ ಪಡೆದಿರುವ ಬಿಜೆಪಿಗೆ ಸರಕಾರ ರಚಿಸಲು ರಾಜ್ಯಪಾಲರು ಆಹ್ವಾನ ನೀಡಿದ್ದಾರೆ. ದೇವೇಂದ್ರ ಫಡ್ನವೀಸ್ ನೇತೃತ್ವದ ಬಿಜೆಪಿ ಎರಡನೇ ಬಾರಿ ಸರಕಾರ ರಚಿಸುವ ಹುಮ್ಮಸ್ಸಿನಲ್ಲಿದ್ದರೆ ಶಿವಸೇನೆ ಮುಂದಿನ ನಡೆ ನಿಗೂಢವಾಗಿದೆ.
288 ಸದಸ್ಯ ಬಲ ಹೊಂದಿರುವ ಮಹಾರಾಷ್ಟ್ರದಲ್ಲಿ ಬಿಜೆಪಿ 105 ಸ್ಥಾನಗಳನ್ನು ಪಡೆದುಕೊಂಡರೆ ಮಿತ್ರ ಪಕ್ಷ ಶಿವಸೇನೆ 56 ಸ್ಥಾನಗಳನ್ನು ಪಡೆದುಕೊಂಡಿದೆ. ಬಹುಮತಕ್ಕೆ 145 ಸ್ಥಾನಗಳ ಅಗತ್ಯವಿದ್ದು ಶಿವಸೇನೆ ಹಾಗೂ ಬಿಜೆಪಿಯ ನಡುವೆ ಅಧಿಕಾರ ಹಂಚಿಕೆ ಕುರಿತಾಗಿ ತಲೆಧೋರಿದ ಭಿನ್ನಮತ ತೀವ್ರ ಸ್ವರೂಪ ಪಡೆದುಕೊಂಡು ಚುನಾವಣಾ ಪೂರ್ವ ಮೈತ್ರಿಯ ಮಾತುಕತೆ ಮುರಿದುಬಿದ್ದಿದೆ.
ಮಿತ್ರಪಕ್ಷಗಳ ನಡುವೆ ಅಧಿಕಾರ ಹಂಚಿಕೆ ಕುರಿತಾಗಿ ನಡೆದ ಸರಣಿ ಸಂಧಾನಗಳು ವಿಫಲವಾದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ರಾಜ್ಯಪಾಲರು ಅತಿ ದೊಡ್ಡ ಪಕ್ಷ ಬಿಜೆಪಿಯನ್ನು ಸರಕಾರ ರಚನೆ ಮಾಡುವಂತೆ ಆಹ್ವಾನಿಸಿದ್ದಾರೆ.
ಬಿಜೆಪಿ ಬಹುಮತದ ಕೊರತೆಯ ನಡುವೆಯೂ ಸರಕಾರ ರಚನೆಯ ಹುಮ್ಮಸ್ಸಿನಲ್ಲಿದ್ದು ವಿಶ್ವಾಸಮತ ಯಾಚನೆಯ ಸಂದರ್ಭದಲ್ಲಿ ಕುದುರೆ ವ್ಯಾಪಾರ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಶಿವಸೇನೆ ತನ್ನ 56 ಶಾಸಕರನ್ನು ರೆಸಾರ್ಟ್ನಲ್ಲಿಟ್ಟಿದ್ದು ಮುಂದಿನ ಬೆಳವಣಿಗೆಗಳನ್ನು ಗಮನಿಸಿ ಹೆಜ್ಜೆ ಇಡಲು ತೀರ್ಮಾನಿಸಿದೆ.
54 ಕ್ಷೇತ್ರಗಳಲ್ಲಿ ಗೆದ್ದಿರುವ ಎನ್ಸಿಪಿ ಹೆಜ್ಜೆ ಕೂಡಾ ಕುತೂಹಲ ಕೆರಳಿಸಿದ್ದು ಒಂದು ವೇಳೆ ಬಿಜೆಪಿ ಸರಕಾರ ರಚನೆಗೆ ಮುಂದಾದರೆ ವಿಶ್ವಾಸಮತಯಾಚನೆಯ ವೇಳೆ ಬಿಜೆಪಿ ವಿರುದ್ಧವಾಗಿ ಮತಚಲಾಯಿಸಲು ನಿರ್ಧರಿಸಿದ್ದು ಈ ವೇಳೆ ಸರಕಾರ ಬಿದ್ದರೆ ರಾಜ್ಯದ ಜನರ ಹಿತಾಸಕ್ತಿಯಿಂದ ಪರ್ಯಾಯ ರಚನೆಗೆ ಮುಂದಾಗುವ ಸೂಚನೆ ನೀಡಿದೆ.
ನವೆಂಬರ್ 12 ರಂದು ಎನ್ಸಿಪಿ ಶಾಸಕರ ಸಭೆ ಕರೆದಿದ್ದು ಎನ್ಸಿಪಿ ವರಿಷ್ಠ ಶರದ್ ಪವಾರ್ ನೇತೃತ್ವದಲ್ಲಿ ಚರ್ಚೆ ನಡೆಸಿ ಮುಂದಿನ ರಾಜಕೀಯ ಹೆಜ್ಜೆಯನ್ನು ಇಡಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.