ಪುತ್ತೂರು: ಹಲವು ಸಮಯಗಳಿಂದ ಕಾಯುತ್ತಿದ್ದ ಐತಿಹಾಸಿಕ ಅಯೋಧ್ಯೆ ರಾಮ ಜನ್ಮಭೂಮಿ ವಿವಾದ ಸಂಬಂಧ ಶನಿವಾರ ಕೊನೆಗೂ ಅಂತಿಮ ತೀರ್ಪು ಹೊರಬಿದ್ದಿದ್ದು, ಸುದೀರ್ಘ ವಿಚಾರಣೆಯ ಬಳಿಕ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೋಯ್ ನೇತೃತ್ವದ ಪಂಚ ಸದಸ್ಯ ಪೀಠ ತೀರ್ಪು ಪ್ರಕಟಿಸಿದೆ. ಈ ಕುರಿತ ವಿಚಾರಣೆ ಸಂದರ್ಭದಲ್ಲಿ ಬಾಬರಿ ಮಸೀದಿ ಪರವಾಗಿ ವಾದ ನಡೆಸಿದವರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ನ್ಯಾಯವಾದಿಯೋರ್ವರು ಕಾರ್ಯ ನಿರ್ವಹಿಸಿದ್ದರು.
ಬಾಬರಿ ಮಸೀದಿ ಪರ ವಾದ ನಡೆಸಿದ ನ್ಯಾಯವಾದಿಗಳ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಹಿರೇಬಂಡಾಡಿ ನಿವಾಸಿ ಅಬ್ದುಲ್ ರಹಿಮಾನ್ ಕೂಡಾ ಇದ್ದರು. ಉಪ್ಪಿನಂಗಡಿ ಹಿರೇಬಂಡಾಡಿ ನಿವಾಸಿ ದಿ. ಇಸುಬು ಬ್ಯಾರಿ ಹಾಗೂ ಆಮಿನಮ್ಮ ದಂಪತಿಯ ಪುತ್ರನೇ ಅಬ್ದುಲ್ ರಹಿಮಾನ್. ಇವರು ಪುತ್ತೂರಿನ ನ್ಯಾಯಾಲಯದಲ್ಲಿ ವಕೀಲ ವೃತ್ತಿ ನಡೆಸುವ ಮೂಲಕ ತನ್ನ ವೃತ್ತಿ ಜೀವನವನ್ನು ಪ್ರಾರಂಭಿಸಿದ್ದರು.
ಕೆಲ ಸಮಯದ ಬಳಿಕ ಇವರು ಸರ್ವೋಚ್ಛ ನ್ಯಾಯಾಲಯದ ನ್ಯಾಯವಾದಿಯಾಗಿ ಕರ್ತವ್ಯ ನಿರ್ವಹಿಸಲು ಆರಂಭಿಸಿದ್ದರು. ಬಾಬರಿ ಮಸೀದಿ ಪರ ಹಕ್ಕು ಪ್ರತಿಪಾದಿಸಿದ್ದ ಸುನ್ನಿ ವಕ್ ಮಂಡಳಿ ತನ್ನ ಪರ ವಾದ ಮಾಡುವ ಸಲುವಾಗಿ ಪ್ರಮುಖ ನ್ಯಾಯವಾದಿಗಳನ್ನೇ ಆಯ್ಕೆ ಮಾಡಿತ್ತು. ನ್ಯಾಯವಾದಿಗಳ ಪೈಕಿ ಉಪ್ಪಿನಂಗಡಿಯ ಅಬ್ದುಲ್ ರಹಿಮಾನ್ ಕೂಡಾ ಒಬ್ಬರಾಗಿದ್ದರು.
ಸುಪ್ರೀಂ ಕೋರ್ಟ್ ಹಿರಿಯ ನ್ಯಾಯವಾದಿಗಳಾದ ಡಾ. ರಾಜೀವ್ ಧವನ್, ಮೀನಾಕ್ಷಿ ಅರೋರಾ, ದಫರುಲ್ಲಾ ಜೀಲಾನಿ ಮತ್ತು ಕಿರಿಯ ನ್ಯಾಯವಾದಿಗಳಾದ ಶಕೀಲ್ ಅಹ್ಮದ್, ಇರ್ಷಾದ್ ಹನೀಫ್, ಇಜಾಝ್ ಅಹ್ಮದ್, ಶರೀಫ್ ಕೆ.ಎ., ಶೈಕ್ ಮೌಲಾಲಿ ಬಾಷಾ, ಅನ್ಸಾರುಲ್ ಹಕ್ ಇಂಧೋರಿ ಜೊತೆ ಪುತ್ತೂರಿನ ಅಬ್ದುಲ್ ರಹಿಮಾನ್ ವಾದ ಮಂಡಿಸಿದ್ದರು.