ಪೇಜಾವರ ಶ್ರೀ ಕಂಡ ಅಯೋಧ್ಯೆ ಹೋರಾಟದ ವಿವಿಧ ಮಜಲುಗಳು

ಉಡುಪಿ: ಅಯೋಧ್ಯೆ ಸುಪ್ರೀಂ ತೀರ್ಪು ಪ್ರಕಟಗೊಂಡ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ೧೯೮೫ರಲ್ಲಿ ನಡೆದ ಧರ್ಮ ಸಂಸತ್ ತೀರ್ಮಾನದಂತೆ ಅಯೋಧ್ಯೆಯಲ್ಲಿರುವ ದೇವಸ್ಥಾನದ ಬಾಗಿಲಿನ ಬೀಗ ತೆಗೆಯಲಾಗಿತ್ತು ಎಂದು ಅಯೋಧ್ಯೆ ಹೋರಾಟದ ವಿವಿಧ ಮಜಲುಗಳನ್ನು ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಬಿಚ್ಚಿಟ್ಟಿದ್ದಾರೆ.

ನಾವು ೧೯೮೦ರಿಂದ ರಾಮ ಜನ್ಮಭೂಮಿ ಹೋರಾಟದಲ್ಲಿ ಪಾಲ್ಗೊಂಡಿದ್ದೇವೆ. ರಾಮಜನ್ಮ ಭೂಮಿಯಲ್ಲಿರುವ ಗುಡಿಯಲ್ಲಿ ಪ್ರಾರ್ಥನೆ ಮಾಡುವುದಕ್ಕೆ ಹೋಗಲು ಅವಕಾಶವಿರಲಿಲ್ಲ. ಅದಕ್ಕೆ ಬೀಗ ಹಾಕಲಾಗಿತ್ತು. ಅದರ ಕೀಲಿಕೈ ಕೊಡಬೇಕು ಎಂದು ಹೋರಾಟ ಆಗುತ್ತಿತ್ತು. ಅದರ ತೆಗೆಯಬೇಕು ಎನ್ನುವ ತೀರ್ಮಾನ ಉಡುಪಿಯಲ್ಲಿ ತಮ್ಮ ೧೯೮೫ರ ತಮ್ಮ ಪರ್ಯಾಯ ಅವಯಲ್ಲಿ ನಡೆದ ಧರ್ಮ ಸಂಸತ್‌ನಲ್ಲಿ ಕೈಗೊಳ್ಳಲಾಗಿತ್ತು. ಬಳಿಕ ಅದನ್ನು ಅಂದಿನ ಪ್ರಧಾನಿ ರಾಜೀವ್ ಗಾಂ ಅವರು ಒಪ್ಪಿ ಬೀಗ ತೆಗೆಯುವುದಕ್ಕೆ ಅವಕಾಶ ಕೊಟ್ಟರು.

ಅಯೋಧ್ಯೆಯಲ್ಲಿ ೨ಬಾರಿ ಬಂಧನ

ಮುಲಾಯಂ ಸಿಂಗ್ ಮುಖ್ಯಮಂತ್ರಿ ಆಗಿದ್ದಾಗ ಅಯೋಧ್ಯೆ ಚಳುವಳಿಯಾಗಿತ್ತು. ಆಗ ೧೦ಮಂದಿಯ ಹತ್ಯೆಯಾಗಿತ್ತು. ನಾವು ಉಡುಪಿಯಿಂದ ವಿದ್ಯಾಮಾನ್ಯತೀರ್ಥರು, ವಿಬುಧೇಶತೀರ್ಥರು, ಸುಬ್ರಹ್ಮಣ್ಯದ ಹಿಂದಿನ ಪೀಠಾಪತಿ ವಿದ್ಯಾಭೂಷಣತೀರ್ಥರ ಸಹಿತ ಹತ್ತು ಮಂದಿ ಸಂತರು ಹೋಗಿದ್ದೆವು. ಆದರೆ ಅಲಹಾಬಾದ್ ತಲುಪುವುದಕ್ಕೂ ಮೊದಲು ನಮ್ಮ ಬಂಧನವಾಯಿತು. ಅಲ್ಲಿಂದ ಬೇರೆ ಬೇರೆ ಕಡೆ ಕರೆದೊಯ್ದು ಗೃಹಬಂಧನದಲ್ಲಿ ಇಟ್ಟಿದ್ದರು. ಬಳಿಕ ನಮ್ಮನ್ನು ಬಿಡುಗಡೆ ಮಾಡಿದರು. ಅಲ್ಲಿಂದ ನಾವು ಮತ್ತು ವಿದ್ಯಾಭೂಷಣರು ಅಯೋಧ್ಯೆಗೆ ಹೋದೆವು. ಅಲ್ಲಿ ಹೋಗುವಾಗ ಮತ್ತೆ ಬಂಧನವಾಯಿತು. ಅಲಹಾಬಾದ್‌ನಲ್ಲಿ ಮತ್ತೆ ಗೃಹ ಬಂಧನದಲ್ಲಿಟ್ಟರು. ಹೊರಗೆ ಹೋಗಲು ಬಿಟ್ಟಿರಲಿಲ್ಲ. ಆಮೇಲೆ ನಾವು ರಾಷ್ಟ್ರಪತಿಗಳಿಗೆ ಅರ್ಜಿ ಕೊಟ್ಟೆವು. ಆಗ ರಾಷ್ಟ್ರಪತಿ ವೆಂಕಟರಾಮನ್ ನಮ್ಮನ್ನು ಬಿಡುಗಡೆ ಮಾಡಬೇಕೆಂದು ಆದೇಶ ನೀಡಿದರು. ಅದರ ಪ್ರಕಾರ ಬಿಡುಗಡೆಯಾಗಿ ಅಯೋಧ್ಯೆಗೆ ಹೋಗಿ ರಾಮದರ್ಶನ ಪಡೆದು ಬಂದೆವು.

ಬೇಡ ಎಂದರೂ ಮಾತು ಕೇಳಲಿಲ್ಲ

ನಂತರ ವಿ.ಪಿ. ಸಿಂಗ್ ಪ್ರಧಾನಮಂತ್ರಿಯಾಗಿದ್ದಾಗ ಅನೇಕ ಸಂಧಾನ ಸಭೆಗಳಾಗಿತ್ತು. ಆದರೆ ಅವು ಫಲಕಾರಿಯಾಗಲಿಲ್ಲ. ಬಳಿಕ ೧೯೯೨ರಲ್ಲಿ ಪಿ.ವಿ. ನರಸಿಂಗ ರಾವ್ ಇದ್ದಾಗ ಎರಡನೇ ಬಾರಿ ಅಲ್ಲಿ ಸಾಂಕೇತಿಕವಾಗಿ ಕರಸೇವೆ ಮಾಡುವುದೆಂದು ತೀರ್ಮಾನಿಸಲಾಗಿತ್ತು. ಮಸೀದಿ ಮುಟ್ಟುವುದಿಲ್ಲ ಎಂದು ಮಾತು ಕೊಟ್ಟಿದ್ದೆವು. ಆದರೆ ಅನಿರೀಕ್ಷಿತವಾಗಿ ಕರಸೇವೆ ಮಾಡುವ ಕಾರ್ಯಕರ್ತರು ಮಸೀದಿ ಮೇಲೆ ಹತ್ತಿ ಅದನ್ನು ಒಡೆಯುವುದಕ್ಕೆ ಆರಂಭಿಸಿದರು. ಆಗ ಇದು ನಮ್ಮ ನಿರ್ಣಯಕ್ಕೆ ವಿರುದ್ಧ, ಇದು ತಪ್ಪು ಎಂದು ಮೈಕ್‌ನಲ್ಲಿ ಹೇಳಿದೆ. ಅದನ್ನು ತಡೆಯುವುದಕ್ಕೂ ಹೋದೆ, ಆದರೆ ನಮ್ಮನ್ನು ಮೇಲೆ ಹೋಗುವುದಕ್ಕೆ ಬಿಡಲಿಲ್ಲ, ಹೋಗಬೇಡಿ, ಗುಂಡು ಹಾರಾಟವಾಗಬಹುದು ಎಂದು ನಮ್ಮನ್ನು ಎಳೆದು ತಂದರು.

ಮರುದಿನ ರಾಮನ ವಿಗ್ರಹ ಸ್ಥಾಪನೆ

ವಿಧ್ವಂಸ ಕಾರ್ಯಕ್ಕೆ ನಾನಿಲ್ಲ ಎಂದು ಹೇಳಿದ್ದೆ, ಆದರೆ ವಿದಾಯ ಕಾರ್ಯಕ್ಕೆ ಮುಂದಾದೆ. ಮಸೀದಿ ಒಡೆಯುವ ದಿನ ಜನರು ಭಜನೆ ಮಾಡುತ್ತಾ ಭಾವೋದ್ವೇಗ ಅದನ್ನು ಉರುಳಿಸಿದ್ದರು. ಆದರೆ ಕಟ್ಟಡದ ಕೆಡವಿದ ನಂತರ ಅಲ್ಲಿ ಅನೇಕ ಪುರಾವೆಗಳು ಸಿಕ್ಕಿದವು. ಶಿಲಾಲೇಖ, ಗಣೇಶನ ವಿಗ್ರಹ ಸಿಕ್ಕಿದವು. ಹಿಂದು ಚಿಹ್ನೆಗಳಿದ್ದವು. ಆಗ ಅದು ದೇವಸ್ಥಾನ ಆಗಿತ್ತು ಎಂಬುದು ಮನವರಿಕೆಯಾಯಿತು. ಶಿಲಾಲೇಖದಲ್ಲಿ ರಾಮ ಮಂದಿರದ ಉಲ್ಲೇಖವಿತ್ತು. ಅಲ್ಲಿ ಸಿಕ್ಕ ವಸ್ತುಗಳಿಂದ ಇದು ಮಸೀದಿ ಅಲ್ಲ, ದೇವಸ್ಥಾನ ಎಂಬುದನ್ನು ಖಚಿತವಾಗಿತ್ತು. ಅದಾದ ನಂತರ ಸ್ವಲ್ಪ ಸಮಾಧಾನವಾಯಿತು. ರಾಮ ಪೂಜೆ ನಿಂತು ಹೋಗಬಾರದು ಎಂದು ಮರುದಿನ ನಾವೇ ಅಲ್ಲಿ ರಾಮನ ಮೂರ್ತಿಯ ಸ್ಥಾಪನೆ ನಾವೇ ಮಾಡಿದ್ದೇವೆ.

ದಲಿತರೊಬ್ಬರಿಂದ ಶಂಕುಸ್ಥಾಪನೆ

ಮಸೀದಿ ಧ್ವಂಸದ ಬಳಿಕ ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಶಂಕು ಸ್ಥಾಪನೆ ಆಯಿತು. ಅದಕ್ಕೆ ಯಾವುದೇ ನಿರ್ಬಂಧ ಇರಲಿಲ್ಲ. ಹಿಂದುಗಳಲ್ಲಿ ಯಾರನ್ನೂ ನಾವು ಉಪೇಕ್ಷಿಸುವುದಿಲ್ಲ. ರಾಮಮಂದಿರ ಎಲ್ಲರಿಗೂ ಸಂಬಂಸಿದ್ದು ಎನ್ನುವ ನೆಲೆಯಲ್ಲಿ ಅಲ್ಲಿನ ಒಬ್ಬ ದಲಿತರೊಬ್ಬರಿಂದ ಶಂಕು ಸ್ಥಾಪನೆ ನೆರವೇರಿಸಲಾಯಿತು. ಈ ಕಾರ್ಯಕ್ರಮಕ್ಕೂ ನಾವು ಹೋಗಿದ್ದೆವು. ಅದಾದ ನಂತರ ಹೋರಾಟಗಳು ನಡೆಯಲಿಲ್ಲ. ಆದರೆ ಆಗಾಗ್ಗೆ ಅಯೋಧ್ಯೆಗೆ ಹೋಗಿ ರಾಮನ ದರ್ಶನ ಮಾಡಿ ಬರುತ್ತಿದ್ದೆವು. ಇದೀಗ ತೀರ್ಪು ಬಂದಿದ್ದು, ಮುಂದಿನ ಕಾರ್ಯ ನಡೆಯಬೇಕಾಗಿದೆ ಎಂದು ತಮ್ಮ ಹೋರಾಟದ ಹಾದಿಯನ್ನು ಎಳೆಎಳೆಯಾಗಿ ವಿವರಿಸಿದರು ಪೇಜಾವರ ಶ್ರೀಗಳು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ