ಉಡುಪಿ: ಶ್ರೀರಾಮನಿಗೆ ರಾಮ ಲಲ್ಲಾ ಜಾಗವನ್ನು ಅರ್ಪಿಸಿದ್ದು ಸಂತೋಷವಾಗಿದೆ. ನಮ್ಮ ಜೀವನದಲ್ಲಿ ಇದನ್ನು ಕೇಳುತ್ತೇವೋ ಎನ್ನುವ ನಂಬಿಕೆ ಇರಲಿಲ್ಲ. ಈಗ ಅದನ್ನು ಕಾಣುವ ಅವಕಾಶವಾಗಿದೆ…
ಹೀಗೆ ಭಾವುಕರಾದದ್ದು ಕಳೆದ ನಾಲ್ಕು ದಶಕಗಳಿಂದ ಅಯೋಧ್ಯಾ ಹೋರಾಟದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡ ಉಡುಪಿ ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ.
ಪೇಜಾವರ ಶ್ರೀಗಳು ೯೦ ದಶಕದಲ್ಲಿ ಅಯೋಧ್ಯೆ ಚಳುವಳಿಯ ವೇಳೆ ಎರಡೆರಡು ಬಾರಿ ಬಂಧನಕ್ಕೊಳಪಟ್ಟಿದ್ದರು. ಬಳಿಕ ನ್ಯಾಯಾಂಗ ಹೋರಾಟದ ಮೂಲಕ ಅಯೋಧ್ಯೆಯ ರಾಮ ಲಲ್ಲಾ ಜಾಗಕ್ಕೆ ಹೋಗಿಬಂದವರು. ಅಷ್ಟೇ ಅಲ್ಲ ಈಗ ಅಯೋಧ್ಯೆಯ ಗುಡಿಯಲ್ಲಿ ಪೂಜಿಸಲ್ಪಡುವ ಶ್ರೀರಾಮನ ವಿಗ್ರಹವನ್ನು ಪ್ರತಿಷ್ಠಾಪಿಸಿದವರು. ಅಯೋಧ್ಯೆಯ ವಿವಾದವನ್ನು ಸಂಧಾನದ ಮೂಲಕ ಬಗೆಹರಿಸಲು ಪ್ರಯತ್ನಪಟ್ಟಿದ್ದರು. ಮುಸ್ಲಿಮರಿಗೂ ಸೂಕ್ತ ನ್ಯಾಯ ಸಿಗಬೇಕು ಎಂದು ಅಪೇಕ್ಷಿಸುತ್ತಿದ್ದರು.
ಹಾಗಾಗಿ ಶನಿವಾರ ಸುಪ್ರೀಂ ಕೋರ್ಟ್ ಅಯೋಧ್ಯೆಯಲ್ಲಿರುವುದು ರಾಮಜನ್ಮಭೂಮಿಯೇ. ಅಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸರಕಾರ ಮುಂದಿನ ೩ತಿಂಗಳಲ್ಲಿ ಕ್ರಮಕೈಗೊಳ್ಳಬೇಕು. ಮಸೀದಿಗೆ ಅಯೋಧ್ಯೆಯಲ್ಲಿ ೫ಎಕರೆ ಜಮೀನು ನೀಡಬೇಕು ಎಂಬ ತೀರ್ಪು ಹೊರಬಿದ್ದಾಗ, ಅದನ್ನು ಟಿ.ವಿ.ಯಲ್ಲಿ ನೋಡುತ್ತಿದ್ದ ಪೇಜಾವರ ಶ್ರೀಗಳು ಭಾವುಕರಾದರು. ಒಂದು ಕ್ಷಣ ಕಣ್ಣಂಚಿನಲ್ಲಿ ಜಿನುಗುತ್ತಿದ್ದ ಆನಂದಭಾಷ್ಪವನ್ನು ತಡೆಯುವ ಪ್ರಯತ್ನ ನಡೆಸಿದರು. ಕೆಲಕಾಲ ಭಾವುಕರಾಗಿಯೇ ತದೇಕಚಿತ್ತದಿಂದ ತೀರ್ಪಿನ ವಿವರಗಳನ್ನು ಗಮನಿಸುತ್ತಿದ್ದರು.
ಬಳಿಕ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿ, ನಮಗೆ ಜೀವನದ ದೊಡ್ಡ ಇಚ್ಛೆ ನಮ್ಮ ಜೀವನದಲ್ಲಿ ಈಡೇರಿದ ಬಗ್ಗೆ ವೈಯುಕ್ತಿಕವಾದ ಸಂತೋಷವಿದೆ. ನಮ್ಮ ಅಪೇಕ್ಷೆಯಂತೆಯೇ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಉತ್ಖನನ ಮಾಡಿ ಸರಿಯಾದ ದಾಖಲೆ ಸಿಕ್ಕಿದ್ದರಿಂದ ಸುಪ್ರೀಂ ಕೋರ್ಟ್ ರಾಮನಿಗೆ ರಾಮ ಲಲ್ಲಾ ಜನ್ಮಭೂಮಿಯನ್ನು ಕೊಡುತ್ತದೆ ಎನ್ನುವ ವಿಶ್ವಾಸವಿತ್ತು. ಅದಕ್ಕೆ ಸರಿಯಾದ ವಾದ ಮಂಡಿಸಲಾಗಿತ್ತು. ರಾಮ ಜನ್ಮಭೂಮಿಯನ್ನು ಬದಲಾಯಿಸಲು ಆಗುವುದಿಲ್ಲ, ಮಸೀದಿಯನ್ನು ಎಲ್ಲಿ ಬೇಕಾದರೂ ನಿರ್ಮಿಸಬಹುದು. ಅವರಿಗೂ ಅಯೋಧ್ಯೆಯಲ್ಲಿ ಜಾಗ ಕೊಟ್ಟಿರುವುದು ಸಮಾಧಾನ ತಂದಿದೆ ಎಂದು ಹೇಳಿದರು.
ಬ್ರಹ್ಮಪುತ್ರ ತೀರ್ಥ ಸ್ನಾನ ಮುಂದೂಡಿಕೆ
ರಾಮ ಜನ್ಮಭೂಮಿ ಮುಖ್ಯ ವಿಚಾರ ಆಗಿರುವುದರಿಂದ ಭಾನುವಾರ ದಿಲ್ಲಿಯಲ್ಲಿ ನಡೆಯುವ ಹಿಂದು ಮುಸ್ಲಿಂ ಸೌಹಾರ್ದ ಸಭೆ ಬಹಳ ಮುಖ್ಯ. ಬೆಳಗ್ಗೆ ೭ಗಂಟೆಗೆ ವಿಶೇಷ ವಿಮಾನ ವ್ಯವಸ್ಥೆ ಮಾಡಿದ್ದಾರೆ. ನಂತರ ದಿಲ್ಲಿಯಲ್ಲಿ ೧೧ಗಂಟೆಗೆ ಸಭೆ ನಡೆಯಲಿದೆ. ಆದ್ದರಿಂದ ಬ್ರಹ್ಮಪುತ್ರಾ ನದಿ ಸ್ನಾನಕ್ಕೆ ಹೋಗುವುದಿಲ್ಲ. ಅವಕಾಶವಾದರೆ ಸಂಜೆ ಹೋಗಿ ತೀರ್ಥ ಸ್ನಾನ ಮಾಡುತ್ತೇವೆ ಅಥವಾ ಮರುದಿನ ಹೋಗುತ್ತೇವೆ.
– ಶ್ರೀವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ