ಮೂಡುಬಿದಿರೆಯ ನ್ಯಾ. ಜಸ್ಟಿಸ್ ಎಸ್. ಅಬ್ದುಲ್ ನಝೀರ್

ಮೂಡುಬಿದಿರೆ: ಸದಾ ನಗು… ಸರಳ ವ್ಯಕ್ತಿತ್ವ… ‘ನಾನು’ ಎಂಬ ಅಹಂ ಹತ್ತಿರವೇ ಇಲ್ಲ… ಆದರೆ ನನ್ನೂರು, ನನ್ನ ಶಾಲೆ ಎಂಬ ಅಗಾಧವಾದ ಪ್ರೀತಿ, ಈ ಮಣ್ಣಿನ ಮೇಲಿನ ಅಮೋಘ ಅಭಿಮಾನ ಅವರಿಗೆ. ಅವರು ಮತ್ಯಾರೂ ಅಲ್ಲ ಮೂಡುಬಿದಿರೆಯ ಮಣ್ಣಿನ ಮಗ, ದೇಶದ ಬಹುಸಂಖ್ಯಾತ ಹಿಂದೂಗಳ ಭಾವನೆಗಳಿಗೆ ಪುರಸ್ಕಾರ ನೀಡಿದ ಅಯೋಧ್ಯೆಯ ಮಹಾ ತೀರ್ಪು ನೀಡುವ  ಪಂಚ ಪೀಠದ ಸದಸ್ಯರ ಪೈಕಿ ಓರ್ವರಾದ ಮೂಡುಬಿದಿರೆಯ ನ್ಯಾ. ಜಸ್ಟಿಸ್ ಎಸ್. ಅಬ್ದುಲ್ ನಝೀರ್.

ಮೂಡುಬಿದಿರೆ ಸಮೀಪದ ಬೆಳುವಾಯಿಲ್ಲಿದ್ದ ಫಕೀರ್ ಸಾಹೇಬ್ ಅವರ ಸುಪುತ್ರ ಎಸ್.ಅಬ್ದುಲ್ ನಝೀರ್ ತನ್ನ ಪ್ರಾಥಮಿಕ ಶಿಕ್ಷಣವನ್ನು ಆಲಂಗಾರು ಸೈಂಟ್ ಇಗ್ನೇಷಿಯಸ್ ಅನುದಾನಿತ ಶಾಲೆಯಲ್ಲಿ ಮುಗಿಸಿ ಮೂಡುಬಿದಿರೆಯ ಮಹಾವೀರ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರೈಸಿದರು. ತದನಂತರ ಮಂಗಳೂರಿನ ಎಸ್.ಡಿ.ಎಂ.ಕಾನೂನು ಕಾಲೇಜಿನಲ್ಲಿ ವ್ಯಾಸಂಗ ಮಾಡಿದರು.

೧೯೮೩ರಲ್ಲಿ ಬೆಂಗಳೂರು ಕರ್ನಾಟಕ ಹೈಕೋರ್ಟ್‌ನಲ್ಲಿ  ವಕೀಲವೃತ್ತಿ ಅಭ್ಯಾಸ ಆರಂಭಿಸಿದರು. ೨೦೦೩ರ ತನಕ ಕರ್ನಾಟಕ ಉಚ್ಛನ್ಯಾಯಾಲಯದಲ್ಲಿ ವಕೀಲರಾಗಿ ಕಾರ್ಯನಿರ್ವಹಿಸಿದರು. ೨೦೦೩ರಲ್ಲಿ ಹೆಚ್ಚುವರಿ ನ್ಯಾಯಾಶರಾಗಿ  ಆಯ್ಕೆಯಾದರು. ೨೦೧೭ರ ಸುಪ್ರೀಂಕೋರ್ಟು ನ್ಯಾಯಾಶರಾಗಿ ನೇಮಕಗೊಂಡರು.  ಐತಿಹಾಸಿಕ ತ್ರಿವಳಿ ತಲಾಖ್ ಪ್ರಕರಣದ ಪಂಚ ಸದಸ್ಯ ಪೀಠದ ಏಕೈಕ ಮುಸ್ಲಿಂ ಸಮುದಾಯದ ನ್ಯಾಯಾಶರಾಗಿ ಜಸ್ಟಿಸ್ ಅಬ್ದುಲ್ ನಝೀರ್ ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ. ಇದೀಗ  ಅಯೋಧ್ಯೆ ಪ್ರಕರಣದಲ್ಲಿಯೂ ಪಂಚಪೀಠ ಸದಸ್ಯರ ಪೈಕಿ ಜಸ್ಟಿಸ್ ಅಬ್ದುಲ್ ನಝೀರ್ ಒಬ್ಬರಾಗಿದ್ದು ವಿಶೇಷವಾಗಿದೆ.

ವರ್ಷದ ಹಿಂದೆ ಕಲಿತ ಶಾಲೆಗೆ ಬಂದಿದ್ದರು…: ಜಸ್ಟಿಸ್ ಅಬ್ದುಲ್ ನಝೀರ್ ಅವರು ವರ್ಷದ ಹಿಂದೆ ತಾನು ಕಲಿತ ಪ್ರಾಥಮಿಕ ಶಾಲೆಯ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಆಲಂಗಾರು ಸೈಂಟ್ ಇಗ್ನೇಷಿಯಸ್ ಅನುದಾನಿತ ಶಾಲೆಯಲ್ಲಿ ತಾವು ಕಳೆದ ಬಾಲ್ಯದ ನೆನಪುಗಳನ್ನು ಮಾಡಿದ್ದು ಮಾತ್ರವಲ್ಲದೆ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆಯುವ ಮೂಲಕ ಸರಳತೆಯನ್ನು ಸಾಬೀತು ಪಡಿಸಿದ್ದರು. ವರ್ಷಕ್ಕೊಮ್ಮೆಯಾದರೂ ಊರಿಗೆ ಬಂದರೆ ತೃಪ್ತಿ ಎಂದು ಹೇಳಿದ್ದ ಅವರು, ಹುಟ್ಟಿದೂರು, ಮಣ್ಣಿನ ಋಣ ಎಂದೆಂದೂ ಮರೆಯಲು ಸಾಧ್ಯವಿಲ್ಲ ಎಂದಿದ್ದರು.

ಜಸ್ಟಿಸ್ ಎಸ್ ಅಬ್ದುಲ್ ನಝೀರ್

ಜನ್ಮ: ಜನವರಿ ೫, ೧೯೫೮

ಸ್ಥಳ: ಮೂಡುಬಿದಿರೆ ಸಮೀಪದ ಬೆಳುವಾಯಿ.

ಐತಿಹಾಸಿಕ ಅಯೋಧ್ಯೆ ಪಂಚ ಸದಸ್ಯ ಪೀಠದಲ್ಲಿದ್ದ ನ್ಯಾಯಾಶ

ತ್ರಿವಳಿ ತಲಾಖ್‌ನ ಐತಿಹಾಸಿಕ ಪಂಚ ಪೀಠದಲ್ಲೂ ಇದ್ದರು

ಮೂಡುಬಿದಿರೆ ಮೂಲದ ಜಸ್ಟಿಸ್ ಎಸ್ ಅಬ್ದುಲ್ ನಝೀರ್ ಅವರನ್ನೊಳಗೊಂಡ  ಪಂಚ ಪೀಠದ ಐತಿಹಾಸಿಕ ತೀರ್ಪು ಮೂಡುಬಿದಿರೆಯ ಜನತೆಗೆ ಹರ್ಷ ತಂದಿದೆ. ಬಹುಸಂಖ್ಯಾತ ಹಿಂದೂಗಳ ಭಾವನೆಗಳಿಗೆ ಬೆಲೆ ನೀಡುವ ತೀರ್ಪು ಹೊರಬಿದ್ದಿದೆ ಎಂಬ ಹರ್ಷ ವ್ಯಕ್ತಪಡಿಸಿದ್ದಾರೆ.

ಸರಳ ವ್ಯಕ್ತಿತ್ವದ ನ್ಯಾಯತಜ್ಞ ನ್ಯಾ.ನಝೀರ್

“ ಮರ್ಯಾದಾ ಪುರುಷೋತ್ತಮ ಶ್ರೀರಾಮ ಚಂದ್ರನ ಜನ್ಮಸ್ಥಾನ ಅಯೋಧ್ಯೆಯ ವಿಚಾರದಲ್ಲಿ ಎದ್ದಿರುವ ವಿವಾದ ಕೊನೆಗೂ ಸುಖಾಂತ್ಯಗೊಂಡಿದೆ. ವಿವಾದಕ್ಕೆ ತಾರ್ಕಿಕ ಅಂತ್ಯ ಹಾಡಿದ ಸುಪ್ರೀಂಕೋರ್ಟ್ ಬಹುಸಂಖ್ಯಾತ ಹಿಂದೂಗಳ ಪವಿತ್ರ ಕ್ಷೇತ್ರವಾಗಿ ಅಯೋಧ್ಯೆಯಿದೆ ಎಂಬುದನ್ನು ಒಪ್ಪಿಕೊಂಡಿದೆ. ವಿವಾದಿತ ಪ್ರದೇಶದಲ್ಲಿ ಹಿಂದೂಗಳಿಗೆ ಮಂದಿರ ನಿರ್ಮಾಣಕ್ಕೆ ಅವಕಾಶ ನೀಡುವ ಮೂಲಕ ಇಡೀ ವಿಶ್ವದ ಚಿತ್ತ ದೇಶದತ್ತ ನೋಡುವಂತೆ ಮಾಡಿರುವ ಐತಿಹಾಸಿಕ ತೀರ್ಪು ಹೊರಬಿದ್ದಿದೆ. ಈ ಮಹತ್ವದ ಆದೇಶವನ್ನು ಮುಖ್ಯ ನ್ಯಾಯಾಶ ಗೊಗೋಯಿ ನೇತೃತ್ವದ ಪಂಚ ಸದಸ್ಯರ ಸಾಂವಿಧಾನಿಕ ಪೀಠ ಹೊರಡಿಸಿದೆ.  ಕರಾವಳಿಯ ಅದರಲ್ಲೂ ಮೂಡುಬಿದಿರೆಯ ಜಸ್ಟಿಸ್ ಅಬ್ದುಲ್ ನಝೀರ್ ಈ ಪೀಠದ ಸದಸ್ಯರಲ್ಲೋರ್ವರು ಎಂಬುದು ಗಮನಾರ್ಹ ಅಂಶ”

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ