ಸಾಮರಸ್ಯದ ಭಾರತ , ಭವ್ಯ ರಾಮಮಂದಿರ ನಿರ್ಮಿಸೋಣ: ಭಾಗ್ವತ್

ಹೊಸದಿಲ್ಲಿ : ಜನರ ಭಾವನೆ, ನಂಬಿಕೆಗಳಿಗೆ ನ್ಯಾಯ ಒದಗಿಸುವ ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯದ ಈ ತೀರ್ಪನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘವು ಸ್ವಾಗತಿಸುತ್ತದೆ. ಈ ಐತಿಹಾಸಿಕ ತೀರ್ಪನ್ನು ಎಲ್ಲರೂ ಸ್ವಾಗತಿಸೋಣ. ಇದು ಯಾರದೇ ಸೋಲು ಅಥವಾ ಇನ್ನಾರದೇ ಗೆಲುವು ಎಂಬ ನೆಲೆಯಲ್ಲಿ ನಾವು ನೋಡುವುದಿಲ್ಲ. ಎಲ್ಲರೂ ಶಾಂತಿ ಕಾಯ್ದುಕೊಳ್ಳಬೇಕು.ನಾವೆಲ್ಲ ಭವ್ಯ ಶ್ರೀರಾಮ ಮಂದಿರ ನಿರ್ಮಾಣದಲ್ಲಿ ಒಂದಾಗಿ ಹೊಸ ಸಾಮರಸ್ಯದ ಅಧ್ಯಾಯವನ್ನು ಬರೆಯೋಣ ಎಂಬುದಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ್ ಮೋಹನ್ ಭಾಗ್ವತ್ ಕರೆ ನೀಡಿದ್ದಾರೆ.

ಸರ್ವೋಚ್ಚ ನ್ಯಾಯಾಲಯ ಅಯೋಧ್ಯೆ ವಿವಾದದ ಬಗೆಗಿನ ಐತಿಹಾಸಿಕ  ತೀರ್ಪು ನೀಡಿದ ಅನಂತರ ಅವರು ತುರ್ತು ಕರೆಯಲಾದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ದಶಕಗಳಿಂದ ನಡೆಯುತ್ತಿದ್ದ ಸುದೀರ್ಘ ಕಾನೂನಾತ್ಮಕ ಪ್ರಕ್ರಿಯೆಯು ನ್ಯಾಯಯುತವಾಗಿ ಇಂದು ಪೂರ್ಣಗೊಂಡಿದೆ. ಈ ಸುದೀರ್ಘ ಪ್ರಕ್ರಿಯೆಯಲ್ಲಿ ಶ್ರೀ ರಾಮಜನ್ಮಭೂಮಿಗೆ ಸಂಬಂಸಿದಂತೆ ಎಲ್ಲಾ ಅಂಶಗಳನ್ನು ಒಳಗೊಂಡ ಚರ್ಚೆ, ವಿಚಾರಣೆಗಳು ನಡೆದಿವೆ. ಎಲ್ಲ ಪಕ್ಷದವರು ತಮ್ಮ ತಮ್ಮ ದೃಷ್ಟಿಕೋನದ ಪ್ರಕಾರ ನ್ಯಾಯಾಲಯದ ಮುಂದಿಟ್ಟ ವಾದಗಳ ಮೌಲ್ಯಮಾಪನ ನಡೆದಿದೆ. ಧೈರ್ಯದಿಂದ, ಸತ್ಯ ಹಾಗೂ ನ್ಯಾಯವನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಕೆಲಸ ಮಾಡಿದ ನ್ಯಾಯಮೂರ್ತಿಗಳಿಗೆ ಹಾಗೂ ಎಲ್ಲಾ ಪಕ್ಷಗಳ ವಕೀಲರುಗಳಿಗೆ ನಾವು ಶತ ಶತ ನಮನಗಳನ್ನು, ಅಭಿನಂದನೆಗಳನ್ನು ಅರ್ಪಿಸುತ್ತೇವೆ. ಈ ಸುದೀರ್ಘ ಅವಯ ಪ್ರಯತ್ನದಲ್ಲಿ ತಮ್ಮ ಯೋಗದಾನ ನೀಡಿದ ಸಹಯೋಗಿಗಳನ್ನು, ಪ್ರಾಣ ತೆತ್ತ ಬಲಿದಾನಿಗಳನ್ನು ಕೃತಜ್ಞತೆಯಿಂದ ಸ್ಮರಿಸುತ್ತೇವೆ ಎಂಬುದಾಗಿ ಭಾಗ್ವತ್ ಹೇಳಿದ್ದಾರೆ.

ಭ್ರಾತೃತ್ವವನ್ನು ಬೆಳೆಸುವ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪಾತ್ರವಹಿಸಿರುವ ಸರ್ಕಾರಗಳು ಹಾಗೂ ನಿರ್ಣಯ ಸ್ವೀಕಾರದ ಮನಃಸ್ಥಿತಿ ಹೊಂದಿರುವ ಈ ದೇಶದ ಜನತೆಯನ್ನು ಅಭಿನಂದಿಸಲೇಬೇಕು. ಅತ್ಯಂತ ಸಂಯಮದಿಂದ ನ್ಯಾಯದ ಪ್ರತೀಕ್ಷೆ ಮಾಡುತ್ತಿದ್ದ ಭಾರತೀಯರೆಲ್ಲರೂ ಅಭಿನಂದನೆಗೆ ಅರ್ಹರು .ಹಳತನ್ನೆಲ್ಲ ಮರೆತು ಸಾಮರಸ್ಯದಿಂದ ನವ ಭಾರತವನ್ನು ನಿರ್ಮಿಸೋಣ ಎಂದು ಅವರು ತಿಳಿಸಿದರು.

ಏಕಾತ್ಮತೆ-ಬಂಧುತ್ವ ಬೆಳೆಸುವ ತೀರ್ಪು

ಈ ತೀರ್ಪನ್ನು ಗೆಲುವು-ಸೋಲು ಎಂಬುದಾಗಿ ಪರಿಗಣಿಸುವುದು ತಪ್ಪಾಗುತ್ತದೆ. ಸತ್ಯ ಹಾಗೂ ನ್ಯಾಯದ ಮಂಥನದಿಂದ ದೊರೆತ ಈ ತೀರ್ಪನ್ನು ಸಂಪೂರ್ಣ ಸಮಾಜದ ಏಕಾತ್ಮತೆ ಹಾಗೂ ಬಂಧುತ್ವವನ್ನು ಬೆಳೆಸುವ ನಿಟ್ಟಿನಲ್ಲಿ ಬಂದ ತೀರ್ಪು  ಎಂಬುದಾಗಿ ನೋಡಬೇಕಿದೆ. ಕಾನೂನು ಹಾಗೂ ಸಂವಿಧಾನಕ್ಕೆ ಗೌರವ ನೀಡುತ್ತ ಸಂಯಮದಿಂದ, ಸಾತ್ವಿಕ ರೀತಿಯಿಂದ ತಮ್ಮ ಆನಂದ, ಸಂತೋಷವನ್ನು ವಕ್ತಪಡಿಸಬೇಕೆಂದು ಎಲ್ಲ ದೇಶವಾಸಿಗಳನ್ನು ಅವರು ಕೋರಿದ್ದಾರೆ.

ಈ ವಿವಾದವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಸರ್ವೋಚ್ಚ ನ್ಯಾಯಾಲಯವು ನೀಡಿರುವ ಈ ತೀರ್ಪನ್ನು ಅನುಷ್ಠಾನಗೊಳಿಸುವಲ್ಲಿ ಸರ್ಕಾರ  ಶ್ರೀಘ್ರವಾಗಿ ಕಾರ್ಯನಿರ್ವಹಿಸಲಿದೆ ಎಂಬ ಬಗ್ಗೆ ನಮಗೆ ವಿಸ್ವಾಸವಿದೆ.

ಎಲ್ಲರೂ ಮಂದಿರ ನಿರ್ಮಾಣದ ಕಾರ್ಯಕ್ಕೆ ಒಂದಾಗುವ ಕ್ಷಣ ಇದು ಸಾಕಾರಗೊಂಡಿದೆ. ಸುಪ್ರೀಂ ಕೋರ್ಟ್ ಎಲ್ಲ ವಿಚಾರಗಳನ್ನು ಗಣನೆಗೆ ತೆಗೆದುಕೊಂಡಿದೆ. ಆಯಾ ವಿಭಾಗದ ಪ್ರಮುಖರು ಸಲ್ಲಿಸಿದ ಸಾಕ್ಷಿಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಅಂತಿಮವಾಗಿ ಸಮತೋಲನದ ಮಹತ್ವದ ತೀರ್ಪನ್ನು ನೀಡಿದ ನ್ಯಾಯಮೂರ್ತಿಗಳು ಅಭಿನಂದನೀಯರು ಎಂದರು.

ಜಗಳ, ವಿವಾದವನ್ನು ಇಲ್ಲಿಗೆ ಮುಕ್ತಾಯಗೊಳಿಸಬೇಕಿದೆ. ಸುಪ್ರೀಂ ಕೋರ್ಟ್ ನಿರ್ಣಯವನ್ನು ಎಲ್ಲರೂ ಮಾನ್ಯ ಮಾಡುತ್ತಿದ್ದಾರೆ. ಸಾಕಷ್ಟು ವರ್ಷಗಳ ವಿವಾದಕ್ಕೆ ಇಂದು ಪೂರ್ಣಗೊಂಡಿದೆ. ಮುಂದಿನ ಕಾರ್ಯಗಳು ಸಾಂಗವಾಗಿ ನಡೆಯುವಂತಾಗಲಿ ಎಂಬುದಾಗಿ ಅವರು ಆಶಿಸಿದರು.

ಸಂಘ ಮನುಷ್ಯತ್ವವನ್ನು ನಿರ್ಮಾಣ ಮಾಡುತ್ತದೆ. ನಾವು ಒಂದು ಸಮುದಾಯಕ್ಕೆ ಈ ಸಂದರ್ಭದಲ್ಲಿ ನಿರ್ದಿಷ್ಠ ಸಂದೇಶಗಳನ್ನು ನೀಡುವುದಿಲ್ಲ. ನಾವೆಲ್ಲರೂ ಭಾರತೀಯರು. ಎಲ್ಲರೂ ಒಟ್ಟಾಗಿ ದೇಶದ ಉನ್ನತಿಗೆ ಶ್ರಮಿಸಬೇಕಿದೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ