ಹೊಸದಿಲ್ಲಿ: ಶತಮಾನಗಳ ಮಹಾ ತೀರ್ಪು ಎಂದೇ ಬಿಂಬಿತವಾಗಿರುವ ಅಯೋಧ್ಯಾ ತೀರ್ಪು ಹೊರಬಿದ್ದ ದಿನವೇ ಪ್ರಧಾನಿ ಮೋದಿ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದರು. ‘ನವೆಂಬರ್ 9 ದೇಶದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನ’ ಎಂದು ಪ್ರಧಾನಿ ಮೋದಿ ಬಣ್ಣಿಸಿದರು.
‘ದೇಶದ ಪ್ರಜಾಪ್ರಭುತ್ವ ಇಷ್ಟು ಪ್ರಬಲವಾಗಿರೋದು ಇಂದು ಸಾಬೀತಾಗಿದೆ. ಎಲ್ಲ ಧರ್ಮ, ಜಾತಿ, ಪಂಥಗಳ ಜನರು ಈ ತೀರ್ಪನ್ನು ಸ್ವಾಗತಿಸಿದ್ಧಾರೆ. ದೇಶದ ಜನರಲ್ಲಿರುವ ಶಾಂತಿ, ಸೌಹಾರ್ದತೆಗೆ ನನ್ನ ಧನ್ಯವಾದಗಳು. ಭಾರತದ ಇತಿಹಾಸದಲ್ಲಿ ಸುವರ್ಣ ಯುಗ ಆರಂಭವಾಗಿದೆ. ದೇಶದ 125 ಕೋಟಿ ಜನರೂ ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪನ್ನು ಸರ್ವಾನುಮತದಿಂದ ನೀಡಲಾಗಿದೆ. ಸುದೀರ್ಘ ವಿಚಾರಣೆ ಬಳಿಕ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ. ಸೂಕ್ಷ್ಮ ವಿಚಾರವಾಗಿ ಕಾನೂನು ಇದನ್ನು ಇತ್ಯರ್ಥ ಮಾಡಿದೆ’ ಎಂದು ಪ್ರಧಾನಿ ಮೋದಿ ಸುಪ್ರೀಂ ಕೋರ್ಟ್ ತೀರ್ಪನ್ನು ಬಣ್ಣಿಸಿದ್ದಾರೆ.
ನವೆಂಬರ್ 9ರಂದೇ ಕರ್ತಾರ್ ಪುರ ಕಾರಿಡಾರ್ ಯೋಜನೆಗೂ ಚಾಲನೆ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ಈ ದಿನವನ್ನು ಇತಿಹಾಸ ನೆನಪಿಡಬೇಕು ಎಂದಿದ್ದಾರೆ.
ನವ ಭಾರತದಲ್ಲಿ ಭಯಕ್ಕೆ ಸ್ಥಾನವಿಲ್ಲ, ಸಂವಿಧಾನದ ಅಡಿಯಲ್ಲಿ ಕಾನೂನಿನಡಿಯಲ್ಲಿ ಅತ್ಯಂತ ಕಷ್ಟಕರವಾದ ಸಮಸ್ಯೆಗಳನ್ನು ಪರಿಹರಿಸಬಹುದು ಎಂದು ಸುಪ್ರೀಂ ಕೋರ್ಟ್ ದೇಶಕ್ಕೆ ತೋರಿಸಿದೆ.
ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾಗಿದೆ ಮತ್ತು ಇಂದು ಭಾರತದಲ್ಲಿ ಪ್ರಜಾಪ್ರಭುತ್ವವು ಜೀವಂತವಾಗಿದೆ ಮತ್ತು ಪ್ರಬಲವಾಗಿದೆ ಎಂದು ತೋರಿಸಿದೆ. ಇಡೀ ರಾಷ್ಟ್ರವು ತೀರ್ಪನ್ನು ಒಪ್ಪಿಕೊಂಡಿದೆ.
“ಈ ಪ್ರಕರಣದ ವಿಚಾರಣೆಯ ಸಮಯದಲ್ಲಿ ಸುಪ್ರೀಂ ಕೋರ್ಟ್ ಎಲ್ಲಾ ಅಂಶಗಳನ್ನು ಅತ್ಯಂತ ತಾಳ್ಮೆಯಿಂದ ಆಲಿಸಿದೆ ಮತ್ತು ಎಲ್ಲರ ಒಪ್ಪಿಗೆಯೊಂದಿಗೆ ಈ ನಿರ್ಧಾರಕ್ಕೆ ಬಂದಿರುವುದು ಇಡೀ ದೇಶಕ್ಕೆ ಸಂತೋಷದ ವಿಷಯವಾಗಿದೆ.
ನವೆಂಬರ್ 9 ಬರ್ಲಿನ್ ಗೋಡೆ ಮುರಿದು ಬಿದ್ದ ದಿನ ಇಂದು ನವೆಂಬರ್ 9 ರಂದು ಕರ್ತಾರ್ಪುರ ಕಾರಿಡಾರ್ ತೆರೆಯಲಾಗಿದೆ ಮತ್ತು ಈ ದಿನ ಅಯೋಧ್ಯೆಯ ತೀರ್ಪು ನೀಡಲಾಗಿದೆ. ನವೆಂಬರ್ 9 ರ ಸಂದೇಶವು ಎಲ್ಲರೂ ಒಂದಾಗುವುದು, ಒಗ್ಗಟ್ಟಿನಿಂದ ಸೇರುವುದು ಮತ್ತು ಒಟ್ಟಾಗಿ ಮುಂದುವರಿದು ಎಲ್ಲಾ ಕಹಿಗಳನ್ನು ಕೊನೆಗಾಣಿಸುವುದು ಎಂದಾಗುತ್ತದೆ.