ಮುಂಬೈ: ಮಹಾರಾಷ್ಟ್ರದ ಹಿಂದಿನ ವಿಧಾನಸಭಾ ಅವಧಿ ನಾಳೆ ಮುಕ್ತಾಯವಾಗಲಿದ್ದು, ಇಂದು ಮಧ್ಯರಾತ್ರಿ ವಿಧಾನಸಭೆ ವಿಸರ್ಜನೆಯಾಗಲಿದೆ. ಸರ್ಕಾರ ರಚನೆ ಕುರಿತು ಶಿವಸೇನೆ-ಬಿಜೆಪಿ ಇನ್ನು ಒಮ್ಮತಕ್ಕೆ ಬಾರದ ಹಿನ್ನೆಲೆ ಈ ಕಸರತ್ತು ಇನ್ನು ಮುಂದುವರೆಯಲಿದೆ.
ಬಿಜೆಪಿ ಅಲ್ಪಬಹುಮತ ಸರ್ಕಾರ ನಡೆಸಲು ಸಿದ್ಧವಿಲ್ಲ ಎಂದು ರಾಜ್ಯಪಾಲರ ಮುಂದೆ ಸ್ಪಷ್ಟಪಡಿಸಿರುವ ಬಿಜೆಪಿ ಇಂದು ಅಂತಿಮ ಹಂತವಾಗಿ ಸೇನೆನಾಯಕರೊಂದಿಗೆ ಮಾತುಕತೆ ನಡೆಸಲಿದೆ. ಮುಖ್ಯಮಂತ್ರಿ ಪದವಿಗಾಗಿ ಇಟ್ಟಿರುವ ಪಟ್ಟು ಸಡಿಲಿಸದ ಹಿನ್ನೆಲೆ ಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆಯನ್ನು ಇಂದು ಗಡ್ಕರಿ ಭೇಟಿಯಾಗುವ ಸಾಧ್ಯತೆ ಇದ್ದು, ಮನವೊಲಿಕೆ ನಡೆಸುವ ಸಾಧ್ಯತೆ ಇದೆ.
ಕುದುರೆ ವ್ಯಾಪಾರದ ಭೀತಿಯಲ್ಲಿರುವ ಸೇನೆ ತಮ್ಮ ಶಾಸಕರನ್ನು ಖಾಸಗಿ ಹೋಟೆಲ್ನಲ್ಲಿ ಕೂಡಿಹಾಕಿದ್ದು, ಮುಖ್ಯಮಂತ್ರಿ ಸ್ಥಾನದ ಕುರಿತು ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಈ ಮಧ್ಯೆ ರಾಜ್ಯದಲ್ಲಿ ನಡೆಯುತ್ತಿರುವ ಈ ಕಸರತ್ತು ನೋಡಿ ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ಎನ್ಸಿಪಿ ಶಾಸಕರು ಆಗ್ರಹಿಸಿದ್ದಾರೆ.
ಸೇನೆಗೆ ಬೆಂಬಲ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಕಾಂಗ್ರೆಸ್ ತಮ್ಮ ಶಾಸಕರ ರಕ್ಷಣೆಗಾಗಿ ಅವರನ್ನೆಲ್ಲಾ ರಾಜಸ್ಥಾನಕ್ಕೆ ಸ್ಥಳಾಂತರಿಸಿದ್ದಾರೆ. ಇಂದು ಬೆಳಗ್ಗೆ 44 ಕಾಂಗ್ರೆಸ್ ಶಾಸಕರು ಜೈಪುರದ ರೆಸಾರ್ಟ್ಗೆ ಶಿಫ್ಟ್ ಆಗಿದ್ದಾರೆ.
2.5 ವರ್ಷದ ಅವಧಿಗೆ ಸೇನೆಗೆ ಸಿಎಂ ಸ್ಥಾನ ನೀಡುವ ಪ್ರಸ್ತಾಪಕ್ಕೆ ಒಪ್ಪಿದರೆ ಮಾತ್ರ ಬಿಜೆಪಿಯೊಂದಿಗೆ ಮಾತುಕತೆ ನಡೆಸಲಾಗುವುದು. ಈ ಪ್ರಸ್ತಾಪಕ್ಕೆ ಬಿಜೆಪಿ ಒಪ್ಪಿಕೊಳ್ಳಲು ವಿಫಲವಾದರೆ, ಇಂದು ಮಧ್ಯರಾತ್ರಿಯಿಂದ ರಾಷ್ಟ್ರಪತಿ ಆಡಳಿತ ಹೇರಿಕೆಯಾಗಲಿದೆ ಎಂದು ರಾಜ್ಯಸಭಾ ಸದಸ್ಯ ಸಂಜರ್ ರಾವತ್ ತಿಳಿಸಿದ್ದಾರೆ.