ಬೆಂಗಳೂರು, ನ.8- ಜನಪ್ರತಿನಿಧಿಗಳಿಗೆ ಗೌರವ ಕೊಡದ ಪಶ್ಚಿಮ ವಲಯದ ವಿಶೇಷ ಆಯುಕ್ತ ಅನ್ಬುಕುಮಾರ್ ಅವರನ್ನು ವರ್ಗಾವಣೆ ಮಾಡಲಾಗುವುದು ಎಂದು ಮೇಯರ್ ಗೌತಮ್ಕುಮಾರ್ ಪಾಲಿಕೆ ಸಭೆಯಲ್ಲಿಂದು ಘೋಷಿಸಿದರು.
ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಗೋವಿಂದರಾಜನಗರ ವಾರ್ಡ್ ಸದಸ್ಯ ಉಮೇಶ್ಶೆಟ್ಟಿ ಅಧಿಕಾರ ವಿಕೇಂದ್ರೀಕರಣ ಮಾಡಿ ಪಾಲಿಕೆ ಕಾರ್ಯಗಳು ಸುಗಮವಾಗಿ ನಡೆಯಲು ಎಂಟು ವಲಯಗಳನ್ನಾಗಿ ಮಾಡಿ ನಾಲ್ಕು ವಿಶೇಷ ಆಯುಕ್ತರನ್ನು ನೇಮಿಸಿದ್ದೀರಿ. ಆದರೆ, ಪಶ್ಚಿಮ ವಲಯದ ವಿಶೇಷ ಆಯುಕ್ತ ಅನ್ಬುಕುಮಾರ್ ಪಾಲಿಕೆ ಸದಸ್ಯರಿಗೆ ಗೌರವವನ್ನೇ ಕೊಡುವುದಿಲ್ಲ. ನಮ್ಮನ್ನೆಲ್ಲ ಕೇವಲವಾಗಿ ನೋಡುತ್ತಾರೆ ಎಂದು ಗಂಭೀರ ಆರೋಪ ಮಾಡಿದರು.
ಸದಸ್ಯರೇ ಕಡತಗಳನ್ನು ತಂದು ಸೇವಕರಂತೆ ಕೆಲಸ ಮಾಡುವಂತಾಗಿದೆ. ಆದರೂ ಅನ್ಬುಕುಮಾರ್ ಕಡತಗಳತ್ತ ತಿರುಗಿಯೂ ನೋಡದೆ ಸಭೆಗೆ ಬನ್ನಿ ಎಂದು ಉಡಾಫೆಯಾಗಿ ಹೇಳುತ್ತಾರೆ ಎಂದು ದೂರಿದರು.
ವಸತಿ ಸಚಿವ ಸೋಮಣ್ಣ ಅವರು ಇಬ್ಬರು ಎಇಗಳನ್ನು ವರ್ಗಾವಣೆ ಮಾಡುವಂತೆ ಸೂಚಿಸಿದ್ದಾರೆ. ಆದರೆ, ಇದುವರೆಗೆ ಅವರನ್ನು ವರ್ಗಾವಣೆಯೇ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲವೆಂದು ಕೇಂದ್ರ ಕಚೇರಿಯ ನಿಯಂತ್ರಣ ಕೊಠಡಿಯಲ್ಲಿನ ಸುಬ್ರಮಣಿ ಎಂಬುವವರನ್ನು ವರ್ಗಾವಣೆ ಮಾಡಿದ್ದಿರಿ. ಆದರೆ, ಆತ ತನ್ನ ಪ್ರಭಾವ ಬಳಸಿ ಮತ್ತೆ ಅದೇ ಜಾಗಕ್ಕೆ ಬಂದಿದ್ದಾನೆ. ಹಾಗಾದರೆ ಮೇಯರ್ ಆದೇಶಕ್ಕೂ ಬೆಲೆ ಇಲ್ಲದಂತಾಗಿದೆ. ಇತ್ತ ಸಚಿವರ ಆದೇಶಕ್ಕೂ ಕವಡೆ ಕಾಸಿನ ಕಿಮ್ಮತ್ತಿಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅನ್ಬುಕುಮಾರ್ ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ ಎಂದು ಉಮೇಶ್ಶೆಟ್ಟಿ ಹೇಳಿದಾಗ, ಮಾಜಿ ಮೇಯರ್ ಶಾಂತಕುಮಾರಿ, ಮೋಹನ್ಕುಮಾರ್ ಮತ್ತಿತರರು ಧ್ವನಿಗೂಡಿಸಿದರು.
ಇತರ ವಿಶೇಷ ಆಯುಕ್ತರಾದ ರಂದೀಪ್, ವೆಂಕಟೇಶ್, ಲೋಕೇಶ್ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ಅನ್ಬುಕುಮಾರ್ ಮಾತ್ರ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಕೂಡಲೇ ಅವರನ್ನು ಬೇರೆಡೆ ವರ್ಗಾವಣೆ ಮಾಡಬೇಕು ಎಂದು ಪಕ್ಷಾತೀತವಾಗಿ ಎಲ್ಲ ಸದಸ್ಯರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಅನ್ಬುಕುಮಾರ್ ಅವರನ್ನು ಸಮರ್ಥಿಸಿಕೊಳ್ಳಲು ಆಯುಕ್ತ ಅನಿಲ್ಕುಮಾರ್ ಮುಂದಾದರು. ಆಗ ಎಲ್ಲ ಸದಸ್ಯರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಕಡೆಗೆ ಸದಸ್ಯರ ಒತ್ತಡಕ್ಕೆ ಮಣಿದು ಮೇಯರ್ ಗೌತಮ್ಕುಮಾರ್, ವಿಶೇಷ ಆಯುಕ್ತ ಅನ್ಬುಕುಮಾರ್ ಅವರನ್ನು ವರ್ಗಾವಣೆ ಮಾಡಿಸುವುದಾಗಿ ಪ್ರಕಟಿಸಿದರು.
ಅನ್ಬುಕುಮಾರ್ ಅವರನ್ನು ಬೇರೆ ವಲಯಕ್ಕೆ ವರ್ಗಾವಣೆ ಮಾಡುವುದಾಗಿ ಅನಿಲ್ಕುಮಾರ್ ಹೇಳಿದಾಗ, ಬಹಳಷ್ಟು ಸದಸ್ಯರು ನಮ್ಮ ವಲಯಕ್ಕೆ ಅವರು ಬೇಡ ಎಂದು ಹೇಳಿದಾಗ, ಮೇಯರ್ ಅನ್ಬುಕುಮಾರ್ ಅವರನ್ನು ತಕ್ಷಣವೇ ಬೇರೆಡೆಗೆ ವರ್ಗಾವಣೆ ಮಾಡುವಂತೆ ಆದೇಶಿಸಿದರು.