ಬೆಂಗಳೂರು, ನ.7- ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾಸಂಸ್ಥೆ, ಸರ್ಕಾರಿ ಕಚೇರಿಗಳಲ್ಲಿ, ಖಾಸಗಿ ಸಂಘ-ಸಂಸ್ಥೆಗಳು ಸೇರಿದಂತೆ ರಾಜ್ಯದೆಲ್ಲೆಡೆ ಸಂವಿಧಾನದ ಧ್ಯೇಯೋದ್ದೇಶಗಳ ಬಗ್ಗೆ ಜನ ಜಾಗೃತಿ ಮೂಡಿಸುವ ಸಲುವಾಗಿ ನ.26ರಂದು ಸಂವಿಧಾನ ದಿನವನ್ನಾಗಿ ಆಚರಿಸಬೇಕೆಂದು ಸರ್ಕಾರವನ್ನು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಒತ್ತಾಯಿಸಿದ್ದಾರೆ.
1949ರ ನ.26ರಂದು ಸಂವಿಧಾನವನ್ನು ಸ್ವೀಕರಿಸಿದ ದಿನ.ಸಂವಿಧಾನದ ದಿನವನ್ನಾಗಿ 2015ರಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಯುವ ಪೀಳಿಗೆಗೆ, ವಿದ್ಯಾರ್ಥಿಗಳಿಗೆ, ಸಂಘ-ಸಂಸ್ಥೆಗಳವರಿಗೆ ಸಂವಿಧಾನದ ಬದ್ದತೆ ಹೆಚ್ಚಿಸುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಅರಿವು ಮೂಡಿಸುವಂತೆ ಸಂವಿಧಾನ ದಿನ ಆಚರಿಸಲು ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆಯಲಾಗಿದೆ ಎಂದು ಸುದ್ದಿಗಾರರಿಗೆ ಅವರು ತಿಳಿಸಿದರು.
ಸಂವಿಧಾನ ದಿನವನ್ನು ಸ್ಪೀಕರ್, ಸಿಎಂ ಕಚೇರಿ ಅಥವಾ ವಿರೋಧ ಪಕ್ಷದ ನಾಯಕರ ಕಚೇರಿಗೆ ಸೀಮಿತಗೊಳಿಸದೆ ಸಾರ್ವಜನಿಕರ ಪಾಲ್ಗೊಳ್ಳುವಿಕೆಯೊಂದಿಗೆ ಆಚರಿಸಬೇಕು.ನಮ್ಮ ಸಂವಿಧಾನ ಜಗತ್ತಿನ ಸಂವಿಧಾನಗಳಲ್ಲೇ ಶ್ರೇಷ್ಠವಾದ ಸಂವಿಧಾನವಾಗಿದೆ.ಅದರ ಆಶಯಗಳು ಯುವ ಪೀಳಿಗೆಗೆ ತಲುತಬೇಕಾಗಿದೆ ಎಂದರು.
ಇಂದು ವಿಧಾನಸೌಧದ ಗ್ರಂಥಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿರುವುದಾಗಿ ತಿಳಿಸಿದ ಅವರು, ಸಂವಿಧಾನ ದಿನಾಚರಣೆಯ ಕಾರ್ಯಕ್ರಮದ ಸ್ವರೂಪ ಹೇಗಿರಬೇಕೆಂದು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ಹೇಳಿದರು.