ಜೆಡಿಎಸ್‍ನಿಂದ ಉಚ್ಛಾಟನೆಗೊಂಡಿರುವ ವಿಧಾನಪರಿಷತ್ ಸದಸ್ಯ ಪುಟ್ಟಣ ಬಿಜೆಪಿಗೆ

ಬೆಂಗಳೂರು,ನ.7-ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದರ ಆರೋಪದ ಹಿನ್ನೆಲೆಯಲ್ಲಿ ಜೆಡಿಎಸ್‍ನಿಂದ ಉಚ್ಛಾಟನೆಗೊಂಡಿರುವ ವಿಧಾನಪರಿಷತ್ ಸದಸ್ಯ ಪುಟ್ಟಣ ಬಿಜೆಪಿಗೆ ಸೇರ್ಪಡೆಯಾಗಲು ವೇದಿಕೆ ಸಜ್ಜಾಗಿದೆ.

ಈಗಾಗಲೇ ಬಿಜೆಪಿ ನಾಯಕರೊಂದಿಗೆ ಮಾತುಕತೆ  ನಡೆಸಿದ್ದು, ಅಧಿಕೃತವಾಗಿ ಸೇರ್ಪಡೆಯಾಗುವುದಷ್ಟೇ ಬಾಕಿ ಇದೆ. ಪುಟ್ಟಣ್ಣ ಈ ಮೊದಲೇ ಪಕ್ಷ ತೊರೆಯುವ ನಿರ್ಧಾರಕ್ಕೆ ಬಂದಿದ್ದರು.ಅವರನ್ನು ಈ ಬಾರಿ ಬಿಜೆಪಿ ಶಿಕ್ಷಕರ ಕ್ಷೇತ್ರದಿಂದ ತನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸಲಿದೆ ಎಂಬ ಮಾತು ಕೇಳಿಬರುತ್ತಿದೆ.

ಮೂರು ಬಾರಿ ಜೆಡಿಎಸ್ ನಿಂದ ವಿಧಾನಪರಿಷತ್ ಸದಸ್ಯರಾಗಿದ್ದ ಪುಟ್ಟಣ್ಣ, ಇತ್ತೀಚೆಗಷ್ಟೇ ಪಕ್ಷ ಬಿಡುವ ಬಗ್ಗೆ ಮಾತನಾಡಿದ್ದರು.ತಾವು ಮೂರು ಬಾರಿ ಗೆದ್ದರೂ ತಮ್ಮನ್ನು ಮೂಲೆಗುಂಪು ಮಾಡಿ, ಬೇರೊಬ್ಬರನ್ನು ಆ ಸ್ಥಾನಕ್ಕೆ ಆರಿಸುವ ಹುನ್ನಾರ ನಡೆಯುತ್ತಿದೆ ಎಂಬುದು ಅವರ ಆರೋಪವಾಗಿತ್ತು.

ಬಿಜೆಪಿಯಿಂದ ಸ್ಪರ್ಧೆ?

ಜೂನ್ 2020 ರಲ್ಲಿ ನಡೆಯಲಿರುವ ವಿಧಾನಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ತಮ್ಮನ್ನು ಅಭ್ಯರ್ಥಿ ಮಾಡುವುದಿಲ್ಲ, ಮತ್ತು ಬೇರೊಬ್ಬರನ್ನು ಈ ಸ್ಥಾನಕ್ಕೆ ಆರಿಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಪುಟ್ಟಣ್ಣ ಪಕ್ಷ ಬಿಡುವ ನಿರ್ಧಾರಕ್ಕೆ ಬಂದಿದ್ದರು ಎನ್ನಲಾಗಿದೆ. ಅವರು ಬಿಜೆಪಿ ಅಭ್ಯರ್ಥಿಯಾಗಿ ಈ ಕ್ಷೇತ್ರದಿಂದ ಸ್ಪರ್ಧಿಸಬಹುದು ಎನ್ನಲಾಗಿದೆ

ಪುಟ್ಟಣ್ಣ ಬಿಜೆಪಿಗೆ ಸೇರ್ಪಡೆಯಾದ ಬಳಿಕ ಮತ್ತಷ್ಟು ಜೆಡಿಎಸ್ ಸದಸ್ಯರು ಮತ್ತು ಶಾಸಕರು ಪಕ್ಷ ಬಿಡುವ ನಿರ್ಧಾರ ಮಾಡಿದ್ದಾರೆ ಎಂದು ವದಂತಿ ಹಬ್ಬಿದೆ.

ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಭಿನ್ನಾಭಿಪ್ರಾಯ ಶಮನಕ್ಕಾಗಿ ನವೆಂಬರ್ 12 ರಂದು ಸಭೆ ನಡೆಸಲಿದ್ದಾರೆ ಎನ್ನಲಾಗಿದೆ.ಈಗಾಗಲೇ ಜೆಡಿಎಸ್ ನ ಕೆಲವು ವಿಧಾನಪರಿಷತ್ ಸದಸ್ಯರು ಮತ್ತು ಕೆಲವು ಶಾಸಕರು ಸಹ ಪಕ್ಷ ಬಿಡುವ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ.

ಈ ಎಲ್ಲ ಭಿನ್ನಾಭಿಪ್ರಾಯಗಳನ್ನು ಸರಿದೂಗಿಸಲು ನವೆಂಬರ್ 12 ರಂದು ಪಕ್ಷದ ಎಚ್.ಡಿ.ದೇವೇಗೌಡರು ಸಭೆ ನಡೆಸಲಿದ್ದಾರೆ.

ರಾಜ್ಯದಲ್ಲಿ ಉಪಚುನಾವಣೆಯ ನಂತರ ರಾಜಕೀಯದಲ್ಲಿ ಭಾರೀ ಬದಲಾವಣೆಯಾಗುವ ಸಂಭವವಿದ್ದು, ಬಿಜೆಪಿ ಸರ್ಕಾರ ಬೀಳಲು ಬಿಡುವುದಿಲ್ಲ ಎಂದು ಎಚ್.ಡಿ.ದೇವೇಗೌಡರು ಈಗಾಗಲೇ ಹೇಳಿಕೆ ನೀಡಿದ್ದಾರೆ.

ಪಕ್ಷ ಬಿಟ್ಟು ಬಿಜೆಪಿಯತ್ತ ಮುಖ ಮಾಡಲು ಯೋಚಿಸುತ್ತಿರುವ ಶಾಸಕರ ನಡೆ, ಮತ್ತು ಬಿಜೆಪಿ ಬೆಂಬಲಕ್ಕೇ ನಿಲ್ಲಲು ಮುಂದಾಗಿರುವ ಅಧ್ಯಕ್ಷರ ನಡೆ ರಾಜಕೀಯ ವಲಯದಲ್ಲಿ ಗೊಂದಲ ಮೂಡಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ