ಬೆಂಗಳೂರು, ನ.7- ಆಯಕಟ್ಟಿನ ಹುದ್ದೆಗಾಗಿ ಬಿಬಿಎಂಪಿಯಲ್ಲಿ ಬಿಗ್ಫೈಟ್ ನಡೆದಿದೆ.
ವರ್ಗಾವಣೆಗೊಂಡಿದ್ದರೂ ತಾವಿದ್ದ ಜಾಗದಿಂದ ಕದಲದೆ ಲಾಭದಾಯಕ ಹುದ್ದೆಯಲ್ಲಿ ಆರ್.ಪ್ರಸಾದ್ ಮುಂದುವರೆದಿದ್ದಾರೆ.
ಪಾಲಿಕೆ ನಗರ ಯೋಜನೆ ಹೆಚ್ಚುವರಿ ನಿರ್ದೇಶಕ ಆರ್.ಪ್ರಸಾದ್ ಅವರನ್ನು ಪಾಲಿಕೆಯಿಂದ ಕಳೆದ ತಿಂಗಳೇ ರಾಜ್ಯ ಸರ್ಕಾರ ವರ್ಗಾವಣೆ ಮಾಡಿತ್ತು. ಆದರೂ ಈ ಅಧಿಕಾರಿ ಅನಧಿಕೃತವಾಗಿ ಅಧಿಕಾರ ಚಲಾಯಿಸುತ್ತಿದ್ದಾರೆ.
ಮಾತೃ ಇಲಾಖೆಯಾದ ಲೋಕೋಪಯೋಗಿ ಇಲಾಖೆಗೆ ಅವರನ್ನು ಸರ್ಕಾರ ವರ್ಗಾವಣೆ ಮಾಡಿದೆ.ಆದರೆ, ಈ ಹುದ್ದೆ ಲಾಭದಾಯಕವಾಗಿರುವುದರಿಂದ ಪ್ರಸಾದ್ ಕದಲದೆ ಇಲ್ಲೇ ಜಾಂಡ ಹೂಡಿದ್ದಾರೆ.
ಪ್ರಸಾದ್ ಜಾಗಕ್ಕೆ ಎಸ್.ಎಲ್.ರಾಜಣ್ಣ ಎಂಬುವರನ್ನು ಸರ್ಕಾರ ನಿಯೋಜನೆ ಮಾಡಿದೆ.ಆದರೆ, ಪ್ರಸಾದ್ ಅಧಿಕಾರವನ್ನೇ ಇದುವರೆಗೆ ಹಸ್ತಾಂತರ ಮಾಡಿಲ್ಲ.
ಇದೀಗ ಇವರಿಬ್ಬರ ನಡುವೆ ಕುರ್ಚಿಗಾಗ ಕಾದಾಟ ಪ್ರಾರಂಭವಾಗಿದೆ. ನಗರ ಯೋಜನೆ ಹೆಚ್ಚುವರಿ ನಿರ್ದೇಶಕ ಪಟ್ಟವನ್ನು ಬಿಡದೆ ಆರ್.ಪ್ರಸಾದ್ ಶತಾಯಿಸುತ್ತಿದ್ದರೆ, ಇತ್ತ ರಾಜಣ್ಣ ಈ ಕುರ್ಚಿಯನ್ನು ಪಡೆಯಲೇಬೇಕೆಂದು ಪಟ್ಟು ಹಿಡಿದಿದ್ದಾರೆ.
ಒಟ್ಟಾರೆ ಇವರಿಬ್ಬರ ಜಗಳದಲ್ಲಿ ಇಲಾಖೆಯ ಕೆಳ ಅಧಿಕಾರಿಗಳು ಹಾಗೂ ನಗರದ ನಾಗರಿಕರು ಬಡವಾಗಿದ್ದಾರೆ.
ರಾಜಣ್ಣ ಅವರು ಆಡಳಿತ ನಡೆಸಲು ಅವಕಾಶ ನೀಡಿಲ್ಲ ಎಂದು ಸರ್ಕಾರಕ್ಕೆ ಪ್ರಸಾದ್ ವಿರುದ್ಧ ದೂರು ನೀಡಲು ನಿರ್ಧರಿಸಿದ್ದಾರೆ.
ಈ ವಿಷಯವನ್ನು ಬಿಬಿಎಂಪಿ ಆಯುಕ್ತರ ಗಮನಕ್ಕೂ ತರಲಾಗಿದೆ.ಆದರೆ, ಅವರು ತುಟಿಕ್ಪಿಟಿಕ್ ಎನ್ನುತ್ತಿಲ್ಲ. ಹಾಗಾಗಿ ಆಯುಕ್ತರು ವರ್ಗಾವಣೆಗೊಂಡಿರುವ ಪ್ರಸಾದ್ ಪರ ನಿಂತಿದ್ದಾರೆಯೇ ಎಂಬ ಅನುಮಾನ ಕಾಡುತ್ತಿದೆ.