ಸಿಎಂ ನಿವಾಸ ಹಾಗೂ ಕಚೇರಿಯಲ್ಲಿ ಯಾರೊಬ್ಬರೂ ಮೊಬೈಲ್ ಬಳಕೆ ಮಾಡದಂತೆ ಕಟ್ಟಪ್ಪಣೆ

ಬೆಂಗಳೂರು,ನ.೫-ಇನ್ನು ಮುಂದೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಯಾರೇ ಭೇಟಿ ಮಾಡಬೇಕಾದರೂ ಮೊಬೈಲ್‌ನ್ನು ತೆಗೆದುಕೊಂಡು ಹೋಗುವಂತಿಲ್ಲ.

ಸಚಿವರು, ಶಾಸಕರು, ಪಕ್ಷದ ಪದಾಧಿಕಾರಿಗಳು, ಅಧಿಕಾರಿಗಳು ಸೇರಿದಂತೆ ಯಾರೇ ಆಗಲಿ ಅವರ  ನಿವಾಸ ಮತ್ತು ಕಚೇರಿಯಲ್ಲಿ ಭೇಟಿ ಮಾಡುವಾಗ ಮೊಬೈಲ್ ಕೊಂಡೊಯ್ಯುವುದಕ್ಕೆ  ನಿಷೇಧ ಹೇರಲಾಗಿದೆ.

ಹುಬ್ಬಳ್ಳಿಯಲ್ಲಿ ಪಕ್ಷದ ಪ್ರಮುಖರ ಜೊತೆ ಮಾತನಾಡುವ ವೇಳೆ  ಅನರ್ಹ ಶಾಸಕರ ಕುರಿತಂತೆ ನೀಡಿದ ಹೇಳಿಕೆಯ ಆಡಿಯೋ ಸಿಡಿಸಿದ ಬಾಂಬ್ ಸರ್ಕಾರಕ್ಕೆ ಭಾರೀ ಬಿಕ್ಕಟ್ಟನ್ನು ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಅವರು ತಮ್ಮ ನಿವಾಸ  ಹಾಗೂ ಕಚೇರಿಯಲ್ಲಿ ಯಾರೊಬ್ಬರೂ ಮೊಬೈಲ್ ಬಳಕೆ ಮಾಡದಂತೆ ಕಟ್ಟಪ್ಪಣೆ ವಿಧಿಸಿದ್ದಾರೆ.

ಈ ಸಂಬಂಧ ಪೊಲೀಸರಿಗೆ ಸೂಚನೆ ಕೊಟ್ಟಿರುವ ಅವರು ತಮ್ಮ ಭೇಟಿಗೆ ಬರುವವರು ಮೊಬೈಲ್ ತೆಗೆದುಕೊಂಡು ಬಂದಿದ್ದರೆ ಒಳಬಿಡದಂತೆ ತಡೆಹಿಡಿಯಬೇಕೆಂದು ಸೂಚನೆ ನೀಡಿದ್ದಾರೆ.

ಡಾಲರ್ಸ್ ಕಾಲೋನಿಯಲ್ಲಿರುವ ನಿವಾಸ, ಸದ್ಯದಲ್ಲೇ  ಆಗಮಿಸಲಿರುವ ಕಾವೇರಿ ನಿವಾಸದಲ್ಲಿ ಮೊಬೈಲ್‌ಗಳ ನೆಟ್‌ವರ್ಕ್ ಸಿಗದಂತೆ ಆಧುನಿಕ ತಂತ್ರಜ್ಞಾನವುಳ್ಳ ಜಾಮರ್ ಅಳವಡಿಸಲು ತೀರ್ಮಾನಿಸಿದ್ದಾರೆ.

ಅಧಿವೇಶನ  ನಡೆಯುವ ಸಂದರ್ಭದಲ್ಲಿ ವಿಧಾನಮಂಡಲದ ಉಭಯ ಸದನಗಳಲ್ಲಿ ಮೊಬೈಲ್ ಬಳಕೆ ಮಾಡದಂತೆ ಜಾಮರ್ ಅಳವಡಿಸುತ್ತಾರೆ. ಇದೇ ರೀತಿ ಬಿಎಸ್‌ವೈ ತಮ್ಮ ನಿವಾಸ ಹಾಗೂ ಗೃಹ ಕಚೇರಿ ಕೃಷ್ಣಾದಲ್ಲಿ ಜಾಮರ್ ಅಳವಡಿಸಲು ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಎಲ್ಲರ ಮೇಲೂ ಅಲ್ಲದಿದ್ದರೂ ಕೆಲವರು ಆಪ್ತ ವಲಯದಲ್ಲಿ ಮಾತನಾಡಿದ್ದನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ನಂತರ ಸೋರಿಕೆ ಮಾಡುವ ಪರಿಪಾಠ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಈ ಹಿಂದೆ ಪಕ್ಷದ ಕಚೇರಿಯಲ್ಲಿ ಅಂದಿನ ಕೇಂದ್ರ ಸಚಿವ ಎಚ್.ಎನ್.ಅನಂತಕುಮಾರ್ ಜೊತೆ  ಯಡಿಯೂರಪ್ಪ ಮಾತನಾಡಿದ್ದು ಕೂಡ ಸೋರಿಕೆಯಾಗಿತ್ತು.

ಹೀಗೆ ಪಕ್ಷದ ಒಳಗೆ ಮತ್ತು ಹೊರಗಿನವರು ಉದ್ದೇಶಪೂರ್ವಕವಾಗಿ ರಹಸ್ಯ ವಿಷಯಗಳನ್ನು ಸೋರಿಕೆ ಮಾಡುತ್ತಿರುವುದರಿಂದ ಎಚ್ಚೆತ್ತುಕೊಂಡ ಅವರು ಇಂತಹ  ಪ್ರಮಾದ ನಡೆಯದಂತೆ ರಕ್ಷಣಾ ತಂತ್ರಕ್ಕೆ ಮೊರೆ ಹೋಗಿದ್ದಾರೆ.

ಯಾರಾದರು ಮೊಬೈಲ್ ತಂದರೆ ಒಳಗೆ ಬಿಡಬಾರದು. ಈ ನಿಯಮವನ್ನು ತಪಾಸಣೆಗೆ ನಿಂತಿರುವ ಪೊಲೀಸರು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕೆಂದು ಹಿರಿಯ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ