ಸರ್ಕಾರ ಸಾಧನೆ ನನಗೆ ನಿರೀಕ್ಷಿತ ಪ್ರಮಾಣದಲ್ಲಿ ತೃಪ್ತಿ ತಂದಿಲ್ಲ-ಮುಖ್ಯಮ0ತ್ರಿ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು, ನ.೫-ರೈತರು ಪರಿಶಿಷ್ಟ ಜಾತಿ, ಪರಿಶೀಷ್ಟ ವರ್ಗ, ಕಾರ್ಮಿಕರು, ನೆರೆ ಸಂತ್ರಸ್ತರು ಮಹಿಳೆಯರು, ಕೈಗಾರಿಕೆ, ಪ್ರವಾಸೋದ್ಯಮ ಸೇರಿದಂತೆ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಮುಂದಿನ ನೂರು ದಿನಗಳಲ್ಲಿ  ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲಾಗುವುದುಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಕಳೆದ ೧೦೦ ದಿನಗಳ ಅವಧಿಯಲ್ಲಿ ಸರ್ಕಾರ ಸಾಧನೆ ನನಗೆ ನಿರೀಕ್ಷಿತ ಪ್ರಮಾಣದಲ್ಲಿ ತೃಪ್ತಿ ತಂದಿಲ್ಲ. ಅಧಿಕಾರ ಸ್ವೀಕರಿಸಿದ ದಿನದಿಂದಲೇ ರಾಜ್ಯದ ನಾನಾ ಕಡೆ ಹಿಂದೆAದೂ ಕಾಣದ ಪ್ರವಾಹ ಉಂಟಾಗಿತ್ತು.ಇದು ನನ್ನ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿತ್ತು.ಆದರೂ ಇದನ್ನು ಸವಾಲಾಗಿ ಸ್ವೀಕರಿಸಿ ಸಂತ್ರಸ್ತರ   ಕಣ್ಣೀರು ಒರೆಸುವ ಪ್ರಾಮಾಣಿಕ ಪ್ರಯತ್ನಮಾಡಿದ್ದೇನೆ.

ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಮುಂಬರುವ ಬಜೆಟ್‌ನಲ್ಲಿ  ಹೊಸ ಕಾರ್ಯಕ್ರಮಗಳನ್ನು  ರೂಪಿಸಲಾಗುವುದು ಎಂದು ತಿಳಿಸಿದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ೧೦೦ ದಿನ ಪೂರೈಸಿದ ಹಿನ್ನೆಲೆಯಲ್ಲಿ ವಾರ್ತಾ ಇಲಾಖೆ ಹೊರತಂದಿದ್ದ ದಿನ ೧೦೦-ಸಾಧನೆ ನೂರಾರು ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ನೂರು ದಿನಗಳ ಅವಧಿಯಲ್ಲಿ  ಕೈಗೊಂಡಿರುವ ಅಭೀವೃದ್ಧಿ ಕಾರ್ಯಗಳು  ಹಾಗೂ ಮುಂದೆ ತಮ್ಮ ಸರ್ಕಾರದ  ದೂರದೃಷ್ಟಿ ಏನೆಂಬುದನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡರು.

ನಾನು ೧೦೦ ದಿನದ ಅವಧಿಯಲ್ಲಿ ಒಂದೇ ಒಂದು ದಿನವೂ ಸ್ವಂತಿಕೆಗೆ ಬಳಸಿಕೊಂಡಿಲ್ಲ. ಅಧಿಕಾರ ಸ್ವೀಕರಿಸುತ್ತಿದ್ದಂಥೆ ಹಿಂದೆಂದೂ ಕಾಣದ ಪ್ರವಾಹ ಉಂಟಾಯಿತು. ನೆರೆ ಸಂತ್ರಸ್ತರ ಕಣ್ಣೀರು ಒರೆಸುವ ಒಂದೇ ಕಾರಣಕ್ಕಾಗಿ ಹಗಲು-ರಾತ್ರಿ ಎನ್ನದೆ ಸಂಪುಟದ ಸಹೋದ್ಯೋಗಿಗಳು, ಅಧಿಕಾರಿಗಳ ಜೊತೆ ಸಭೆ ನಡೆಸಿ  ನೆರೆಸಂತ್ರಸ್ತರ ಪರಿಹಾರಕ್ಕೆ  ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ.  ನನಗೆ  ಈಗ ಕೈಗೊಂಡಿರುವ ಕಾರ್ಯ ಮುಂದಿನ ದಿನಗಳಲ್ಲಿ  ರಾಜ್ಯದ ಅಭಿವೃಧ್ಧಿಗಾಗಿ ನನ್ನ ಕಲ್ಪನೆಯ  ಕಾರ್ಯಕ್ರಮಗಳನ್ನು ಬಜೆಟ್‌ನಲ್ಲಿ ಪ್ರಕಟಿಸಲಿದ್ದೇನೆ ಎಂದರು.

ಹಿಂದೆಂದೂ ಕಾಣದ  ಪ್ರವಾಹ ಉಂಟಾಗಿ ಲಕ್ಷಾಂತರ ಜನರು ಮನೆ-ಮಠ, ಆಸ್ತಿ-ಪಾಸ್ತಿ, ಬೆಳೆಗಳು, ಜಾನುವಾರುಗಳನ್ನು ಕಳೆದುಕೊಂಡು ಸಂತ್ರಸ್ತರಾದರು. ನಾಡಿನ ಅನ್ನದಾತರೇ ಕಣ್ಣೀರು ಸುರಿಸುವಾಗ ನನಗೆ ಎಲ್ಲಿಂದ ತೃಪ್ತಿ ಬರಬೇಕು. ಇದನ್ನು ಸವಾಲಾಗಿ ಸ್ವೀಕರಿಸಿದ್ದೇನೆ. ಅದರಂತೆ ಪ್ರಾಮಾಣಿಕವಾಗಿ  ನೆರೆ ಸಂತ್ರಸ್ತರ ಕಣ್ಣೀರು ಒರೆಸುವ ಪ್ರಯತ್ನ ಮಾಡಿದ್ದೇನೆ ಎಂದು ವಿವರಿಸಿದರು.

ಮನೆ ಕಳೆದುಕೊಂಡವರಿಗೆ ೫ ಲಕ್ಷ ರೂ.ಪರಿಹಾರ ನೀಡಲಾಗಿದೆ. ಈಗಾಗಲೇ  ೨.೨೫ ಲಕ್ಷ ಫಲಾನುಭವಿಗಳಿಗೆ  ಮನೆಯ ತಳಪಾಯ ಹಾಕಿಕೊಳ್ಳಲು ಪರಿಹಾರ ಹಣವನ್ನು ಚೆಕ್ ಮೂಲಕ ವಿತರಿಸಲಾಗಿದೆ. ಭಾಗಶಃ ಮನೆ ಹಾನಿಯಾದವರಿಗೂ ಪರಿಹಾರ ನೀಡಲಾಗಿದೆ. ಇದು ಇತಿಹಾಸದಲ್ಲೇ   ಇಷ್ಟು ವೇಗವಾಗಿ ಪರಿಹಾರ ಕಾರ್ಯ ಕೈಗೊಂಡಿರುವ ನಿದರ್ಶನಗಳೇ ಇಲ್ಲ ಎಂದು ತಿಳಿಸಿದರು.

ಮುಂದಿನ ೧೦೦ ದಿನಗಳಲ್ಲಿ  ಕೈಗಾರಿಕೆ, ಪ್ರವಾಸೋದ್ಯ, ನೀರಾವರಿ ಸೇರಿದಂತೆ ಎಲ್ಲಾ ಕ್ಷೇತ್ರಗಳ ಸರ್ವಾಂಗೀಣ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ಈಗಿರುವ ಕಾರ್ಯಕ್ರಮಗಳ ಜೊತೆಗೆ  ಆರ್ಥಿಕ ಇತಿಮಿತಿಯೊಳಗೆ ಇನ್ನಷ್ಟು ಕಾರ್ಯಕ್ರಮಗಳನ್ನು ರೂಪಿಸಲಾಗುವುದು.

ದೇಶದಲ್ಲಿ ರಾಜ್ಯವನ್ನು ಮಾದರಿ ರಾಜ್ಯ ಮಾಡುವ ಹೆಗ್ಗುರಿ ನನ್ನದಾಗಿದೆ ಎಂದರು.

ನಾನು ಮುಖ್ಯಮಂತ್ರಿಯಾಗಿ ಅಧಿಕಾರಸ್ವೀಕರಿಸುತ್ತಿದ್ದಂತೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ  ರೈತರಿಗೆ ಕೇಂದ್ರ ಸರ್ಕಾರ ನೀಡಿದ್ದ ೬ ಸಾವಿರ ಪರಿಹಾರದ ಜೊತೆಗೆ ೪ ಸಾವಿರ ಹೆಚ್ಚುವರಿ ರಾಜ್ಯ ಸರ್ಕಾರ ಪರಿಹಾರ ಘೋಷಿಸಿದೆ. ಈಗಾಗಲೇ ೨೫ಲಕ್ಷ ಫಲಾನುಭವಿಗೆಳಿಗೆ ಈ ಹಣ ತಲುಪಿದೆ ಎಂದು ಮಾಹಿತಿ ನೀಡಿದರು.

ನೇಕಾರರು, ಮೀನುಗಾರರು ಪಡೆದಿದ್ದ ಸಾಲವನ್ನು ಮನ್ನಾ ಮಾಡಲಾಗಿದೆ. ರೈತರ ಸಾಲವನ್ನು ಹಾಗೂ ನೆರೆ ಸಂತ್ರಸ್ತರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಹಿಂದಿನ ಸರ್ಕಾರಗಳ ಯಾವ ಕಾರ್ಯಕ್ರಮಗಳಿಗೂ ಅನುದಾನ ಕೊರತೆಯಾಗದಂತೆ ನೋಡಿಕೊಳ್ಳಲಾಗಿದೆ ಎಂದರು.

ಆರ್ಥಿಕ ಸ್ಥಿತಿ ಸುಭದ್ರ:

ರಾಜ್ಯದ ಆರ್ಥಿಕ ಪರಿಸ್ಥಿತಿ ಸುಭದ್ರವಾಗಿದೆ. ಯಾವುದೇ ಕಾರ್ಯಕ್ರಮಗಳಿಗೂ  ಆರ್ಥಿಕ ಸಮಸ್ಯೆ ಇಲ್ಲ. ನಿರೀಕ್ಷಿತ ಪ್ರಮಾಣದಲ್ಲಿ ತೆರಿಗೆ ಸಂಗ್ರಹ ಮಾಡಲಾಗುತ್ತಿದೆ. ಮುದ್ರಣ ಮತ್ತು ನೋಂದಣಿ, ಸಾರಿಗೆ, ಅಬಕಾರಿ ಸೇರಿದಂತೆ ಸರ್ಕಾರಕ್ಕೆ ತೆರಿಗೆ ನೀಡುವ ಇಲಾಖೆಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆ ಎಂದರು.

ರಾಜ್ಯದೆಲ್ಲೆಡೆ ವಸತಿಯೋಜನೆಯಡಿ ೩೮ ಸಾವಿರ ಮನೆಗಳನ್ನು ನಿರ್ಮಾಣ ಮಾಡಲಾಗಿದೆ.ಅನ್ನಭಾಗ್ಯ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ತೊಂಧರೆಯಾಗದಂತೆ ಎಚ್ಚರ ವಹಿಸಲಾಗಿದ್ದು, ೫೧ ಸಾವಿರ ನಕಲಿ ಗುರುತಿನ ಚೀಟಿಗಳನ್ನು ಪತ್ತೆ ಹಚ್ಚಲಾಗಿದೆ. ಪ್ರವಾಹ ಪೀಡಿತರು ವಲಸೆ ಹೋಗದಂತೆ  ಕೇಂದ್ರ ಸರ್ಕಾರದ ಉದ್ಯೋಗ ಖಾತ್ರಿ ಯೋಜನೆಯಡಿ ೫೦ ದಿನ ಉದ್ಯೋಗ ನೀಡಲು ಕೇಂದ್ರಕ್ಕೆ ಮನವಿ ಮಾಡಿದ್ದೇವೆ ಎಂದರು.

ಕರ್ನಾಟಕ ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬಿ ರಜ್ಯವಾಗಿದೆ. ನವೀಕರಣ  ಮತ್ತು ಇಂಧನ ವಿದ್ಯುತ್‌ನಲ್ಲಿ ನಾವು ದೇಶದಲ್ಲೇ  ಪ್ರಥಮ ಸ್ಥಾನದಲ್ಲಿದ್ದೇವೆ. ಸಾಮಾಜಿಕ ಭದ್ರತಾ ಪಿಂಚಣಿ ಸಕಾಲಕ್ಕೆ ತಲುಪುವಂತೆ ಕ್ರಮಕೈಗೊಳ್ಳಲಾಗಿದೆ ಎಂದು ವಿವರಿಸಿದರು.

ಕಲಬುರಗಿಯಲ್ಲಿ ನಿರ್ಮಾಣವಾಗಿರುವ ವಿಮಾನ ನಿಲ್ದಾಣವನ್ನು ಭಾರತೀಯ ವಿಮಾನ ನಿಲ್ದಾಣಕ್ಕೆ ಹಸ್ತಾಂತರ ಮಾಡಲಾಗಿದೆ. ಶೀಘ್ರದಲ್ಲೇ ಪ್ರಧಾನಿಯವರು ಇದರ ಉದ್ಘಾಟನೆ ನೆರವೇರಿಸಲಿದ್ದಾರೆ.ನೆನೆಗುದಿಗೆ ರೈಲ್ವೆ ಯೋಜನೆಗಳಿಗೂ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.

ಚಿಕ್ಕಬಳ್ಳಾಪುರದಲ್ಲಿ  ನೂತನವಾಗಿ ವೈದ್ಯಕೀಯ ಕಾಲೇಜು ನಿರ್ಮಾಣ ಮಾಡಲಾಗುವುದು. ಜೊತೆಗೆ  ಹಾವೇರಿ, ಯಾದಗಿರಿ ಹಾಗೂ ಚಿಕ್ಕಮಗಳೂರಿನಲ್ಲಿ ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ಅನುಮತಿ ನೀಡಲಾಗಿದೆ. ಕೇಂದ್ರ ಸರ್ಕಾರ ಶೇ.೬೦ರಷ್ಟು ಮತ್ತು ರಾಜ್ಯ ಸರ್ಕಾರ ಶೇ.೪೦ರಷ್ಟು ಅನುದಾನ ಮೂಲಕ ಈ ಕಾಲೇಜುಗಳ ನಿರ್ಮಾಣವಾಗಲಿದೆ.

ಕೃಷ್ಣಾಮೇಲ್ದಂಡೆ ಕಾಮಗಾರಿಯು ಚುರುಕುಗೊಂಡಿದೆ. ಕಳಸಾ ಬಂಡೂರಿ ನದಿ ನಾಲಾ ನೀರಾವರಿ ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಹೀಗೆ ರಾಜ್ಯ ಸರ್ಕಾರ ೧೦೦ ದಿನಗಳಲ್ಲಿ ಹಲವಾರು ರೀತಿಯ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ ಎಂದು ನುಡಿದರು.

ಅಭಿನಂದನೆ:

ಪ್ರಧಾನಿ ನರೇಂದ್ರ ಮೋದಿಯವರು ರೈತರು, ಕಾರ್ಮಿಕರು, ಮಧ್ಯಮ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಪ್ರಾದೇಶಿಕ ಆರ್ಥಿಕ ಸಹಕಾರ ಸಹಭಾಗಿತ್ವ (ಆರ್‌ಸಿಇಪಿ) ಒಪ್ಪಂದಕ್ಕೆ ಸಹಿ ಹಾಕದೆ ಹೊರ ಬಂದಿರುವುದು ಅತ್ಯಂತ ಸ್ವಾಗತಾರ್ಹ.ಒಪ್ಪಂದಕ್ಕೆ ಸಹಿ ಹಾಕುವ ಮೊದಲು ಇದರ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸುವಂತೆ ನಾನು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೆ.ಅದರಂತೆ  ಪ್ರಧಾನಿಯವರು ನಿನ್ನೆ  ಒಪ್ಪಂದ ಪತ್ರಕ್ಕೆ ಸಹಿ ಹಾಕದೆ ಹೊರ ಬಂದಿದ್ದಾರೆ.

ಕಾಂಗ್ರೆಸ್ಸಿಗರು ನಾವೇನೋ ದೇಶವನ್ನೇ ಒತ್ತೆಯಿಡುತ್ತಿದ್ದೇವೆ ಎಂಬಂತೆ ಬೊಬ್ಬೆ ಹಾಕುತ್ತಿದ್ದರು.ಈಗ ಏನು ಮಾತನಾಡುತ್ತಾರೆ ಎಂದು ಪ್ರಶ್ನಿಸಿದರು.

ಬೆಂಗಳೂರಿನ ಸಮಗ್ರ ಅಭಿವೃದ್ಧಿ ಕುರಿತಂತೆ ಇದೇ ೬ ರಂದು ತಜ್ಞರ ಸಭೆ ಕರೆಯಲಾಗಿದೆ. ನಗರದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.ಮುಂದಿನ ೧೦೦ ದಿನಗಳಲ್ಲಿ ಬೆಂಗಳೂರಿನ ಸಮಗ್ರ ಚಿತ್ರಣ ಬದಲಾವಣೆ ಮಾಡುತ್ತೇನೆ ಎಂದು ಹೇಳಿದರು.

ಬೆಂಗಳೂರು ಮಹಾನಗರಕ್ಕೆ ನಿನ್ನೆಯಷ್ಟೆ ಕೇಂದ್ರ ಸರ್ಕಾರ ಸಬರ್ಬನ್ ರೈಲು  ಮಂಜೂರು ಮಾಡಿದೆ. ಇದರಿಂದ ಸಂಚಾರದಟ್ಟಣೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಲಿದೆ. ನಾಳೆ ಕರೆದಿರುವ ಸಭೆಯಲ್ಲಿ ತಜ್ಞರು ಹಾಗೂ ನಾಗರಿಕ ಸಂಸ್ಥೆಗಳು  ಭಾಗವಹಿಸಲಿವೆ.

ಹೀಗೆ ನಮ್ಮ ಸರ್ಕಾರ ಜನರ ಕಲ್ಯಾಣಕ್ಕಾಗಿ ಶ್ರಮಿಸಲಿದೆ ಮುಖ್ಯಮಂತ್ರಿಗಳು ಭರವಸೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಸಚಿವರಾದ  ಜೆ.ಸಿ.ಮಾಧುಸ್ವಾಮಿ, ಬಸವರಾಜ ಬೊಮ್ಮಾಯಿ, ಆರ್.ಅಶೋಕ್, ಡಾ.ಸಿ.ಎನ್.ಅಶ್ವತ್ಥನಾರಾಯಣ, ಕೋಟಾ ಶ್ರೀನಿವಾಸ ಪೂಜಾರಿ, ಬಾಬು ಚವ್ಹಾಣ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ, ಶಾಸಕರು, ರಾಜ್ಯಸರ್ಕಾರದ ಮುಖ್ಯ ಕಾರ್ಯದರ್ಶಿ ಸಿ.ಎನ್.ವಿಜಯಭಾಸ್ಕರ್ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ