ಬೆಂಗಳೂರು,ನ.೫- ಜೆಡಿಎಸ್ ಮುಖಂಡರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾದ ಯಾದಗಿರಿ ನಗರ ಠಾಣೆ ಸಬ್ಇನ್ಸ್ಪೆಕ್ಟರ್ನ್ನು ಕೂಡಲೇ ಅಮಾನತು ಮಾಡಬೇಕು ಇಲ್ಲದಿದ್ದರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನೆ ಮುಂದೆ ಧರಣಿ ನಡೆಸಲಾಗುವುದು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ಅವರು, ಗುರುಮಿಟ್ಕಲ್ ಕ್ಷೇತ್ರದ ಜೆಡಿಎಸ್ ಮುಖಂಡ ಮಾರ್ಕಂಡಪ್ಪ ಮಾನೇಗಾರ್ ಎಂಬುವರ ಬಾಯಲ್ಲಿ ಪಿಸ್ತೂಲ್ ಇಟ್ಟು ಹಿಂಸೆ ನೀಡಿದ ಸಬ್ಇನ್ಸ್ಪೆಕ್ಟರ್ ಬಾಪುಗೌಡ ಅವರನ್ನು ಅಮಾನತ್ತಿನಲ್ಲಿಟ್ಟು ತನಿಖೆ ನಡೆಸುವಂತೆ ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆಯಲಾಗಿತ್ತು.
ಅಲ್ಲದೆ ಯಾದಗಿರಿಯಲ್ಲಿ ಈ ಸಂಬಂಧ ಪ್ರತಿಭಟನೆ ನಡೆಸಿ ನಡೆಸಲಾಗಿತ್ತು. ಪಿಎಸ್ಐ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಗಿತ್ತು. ಆದರೂ ಸಹ ಪಿಎಸ್ಐನ್ನು ಇದುವರೆಗೂ ವರ್ಗಾವಣೆ ಕೂಡ ಮಾಡಿಲ್ಲ. ೧೫ನೇ ತಾರಿಖಿನವರೆಗೆ ಮುಖ್ಯಮಂತ್ರಿಗಳು ಯಾವ ಕ್ರಮಕೈಗೊಳ್ಳುತ್ತಾರೆ ಎಂಬುದನ್ನು ನೋಡಿ ಅವರು ಕ್ರಮ ವಹಿಸದಿದ್ದರೆ ಸಿಎಂ ಮನೆ ಮುಂದೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ರಾಜ್ಯ ಹೈಕೋರ್ಟ್ನ ಆದೇಶ ಪಾಲನೆಗೂ ಮುಖ್ಯಮಂತ್ರಿಗಳ ಅನುಮತಿ ಪಡೆಯಬೇಕಾದ ಪರಿಸ್ಥಿತಿ ರಾಜ್ಯದಲ್ಲಿ ಉಂಟಾಗಿದೆ. ಮಂಡ್ಯ ಜಿಲ್ಲೆ ಕೆಆರ್ಪೇಟೆ ತಾಲ್ಲೂಕಿನ ಕಲ್ಲು ಕ್ವಾರಿಗೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶಿಸಿದ್ದರೂ ಜಿಲ್ಲಾಧಿಕಾರಿ ಸಿಎಂ ಅನುಮತಿ ಬೇಕೆಂದು ಹೇಳುತ್ತಿದ್ದಾರೆ ಎಂದು ಹೇಳಿದರು.
ಮುಖ್ಯಮಂತ್ರಿ ಯಡಿಯೂರಪ್ಪ ದ್ವೇಷದ ರಾಜಕಾರಣ ಮಾಡುವುದಿಲ್ಲ ಎನ್ನುತ್ತಾರೆ. ಆದರೆ ನ್ಯಾಯಾಲಯದ ಆದೇಶಕ್ಕೆ ಗೌರವ ಕೊಡುವುದಿಲ್ಲ ಎಂದರೆ ಏನು ಹೇಳಬೇಕು?ಯಾವ ಪುರುಷಾರ್ಥಕ್ಕೆ ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಹೇಳಬೇಕು ಎಂದು ಗುಡುಗಿದರು.
ಮೈತ್ರಿ ಸರ್ಕಾರದಲ್ಲಿ ಜೆಡಿಎಸ್ ಶಾಸಕರ ಕ್ಷೇತ್ರಗಳಿಗೆ ಅನುದಾನ ರದ್ದು ಮಾಡುವ ಮೂಲಕ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಏಕಾಂಗಿ ಸ್ಪರ್ಧೆ: ಡಿಸೆಂಬರ್ನಲ್ಲಿ ನಡೆಯುವ ರಾಜ್ಯ ವಿಧಾನಸಭೆ ಉಪಚುನಾವಣೆಯಲ್ಲಿ ಜೆಡಿಎಸ್ ಏಕಾಂಗಿಯಾಗಿ ಸ್ಪರ್ಧಿಸಲಿದೆ. ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ.ಈಗಾಗಲೇ ಬಹುತೇಕ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದೆ.ಕೆಲವೆಡೆ ಯುವಕರು ಮುಂದೆ ಬಂದಿದ್ದಾರೆ ಎಂದು ಮಾಹಿತಿ ನೀಡಿದರು.
ಬಿಜೆಪಿ ಮುಖಂಡರ ಸಭೆಯಲ್ಲಿ ಸಿಎಂ ಮಾತನಾಡಿದ್ದಾರೆ ಎಂಬ ಆಡಿಯೋ ವಿಚಾರ ಸುಪ್ರೀಂಕೋರ್ಟ್ನಲ್ಲಿ ಪ್ರಸ್ತಾಪವಾಗಿದೆ. ಉಪಚುನಾವಣೆ ನಡೆದಿದ್ದೇ ಆದರೆ ಹೊಂದಾಣಿಕೆ ಇಲ್ಲದೆ ನಾವು ಛಲದಿಂದ ಹೋರಾಡುತ್ತೇವೆ. ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಯಾರೊಂದಿಗೂ ಹೊಂದಾಣಿಕೆ ಮಾಡಿಕೊಂಡಿಲ್ಲ.
ಬಿಜೆಪಿ ಬಗ್ಗೆ ಮೃಧುಧೋರಣೆಯನ್ನು ತಳೆದಿಲ್ಲ. ಸ್ಥಳೀಯ ಸಂಸ್ಥೆಗಳಲ್ಲಿ ಬಹುಮತ ಮತ ಬಂದರೆ ಆಡಳಿತ ನಡೆಸುತ್ತೇವೆ. ಇಲ್ಲದಿದ್ದರೆ ವಿರೋಧ ಪಕ್ಷದಲ್ಲಿ ಕಾರ್ಯ ನಿರ್ವಹಿಸುತ್ತೇವೆ ಎಂದರು.
ಅಸಮಾಧಾನಗೊಂಡಿರುವ ವಿಧಾನಪರಿಷತ್ ಸದಸ್ಯರ ಸಭೆಯನ್ನು ಇದೇ ೧೨ರಂದು ನಡೆಸಿ ಭಿನ್ನಾಭಿಪ್ರಾಯವನ್ನು ಬಗೆಹರಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.