![Dr.Ashwath.Narayan](http://kannada.vartamitra.com/wp-content/uploads/2018/03/Dr.Ashwath.Narayan-e1520002509663-678x381.jpg)
ಬೆ0ಗಳೂರು, ನ.೫-ಮುಂದಿನ ದಿನಗಳಲ್ಲಿ ವೈದ್ಯರ ಮೇಲೆ ಯಾವುದೇ ರೀತಿಯ ಹಲ್ಲೆ ಪ್ರಕರಣಗಳು ನಡೆಯದಂತೆ ಇನ್ನು ಮುಂದೆ ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ ನಿಯೋಜನೆ ಮಾಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲ ಹಂತದಲ್ಲಿ ರಾಜ್ಯದ ೧೯ ಆಸ್ಪತ್ರೆಗಳು ಹಾಗೂ ೧೯ ವೈದ್ಯಕೀಯ ಸರ್ಕಾರಿ ಕಾಲೇಜುಗಳಲ್ಲಿ ರಕ್ಷಣೆಗಾಗಿ ಸಿಐಎಸ್‌ಎ ಮಾದರಿಯಲ್ಲಿ ಕೆಎಸ್‌ಎ ನಿಯೋಜನೆ ಮಾಡಲಾಗುವುದು. ಇದರಿಂದ ಯಾವುದೇ ರೀತಿಯ ಅಹಿತಕರ ಘಟನೆಗಳನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಈಗಾಗಲೇ ಆಸ್ಪತ್ರೆ ಮತ್ತು ಕಾಲೇಜುಗಳಿಗೆ ಭದ್ರತೆ ಒದಗಿಸುವ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜೊತೆ ಮಾತುಕತೆ ನಡೆಸಲಾಗಿದೆ. ಇದಕ್ಕೆ ಅವರೂಕೂಡ ಸಮ್ಮತಿಸಿದ್ದಾರೆ. ಮುಂದಿನ ದಿನಗಳಲ್ಲಿ ರೈತರಾಗಲಿ, ಅಥವಾ ಯಾವುದೇ ಹೋರಾಟಗಾರರ ನಡುವೆ ಸಂಘರ್ಷಕ್ಕೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು.
ನಗರದ ಮಿಂಟೋ ಆಸ್ಪತ್ರೆಯಲ್ಲಿನಡೆಯುತ್ತಿರುವ ವೈದ್ಯರ ಮುಷ್ಕರ ಕುರಿತಂತೆ ಎರಡೂ ಕಡೆ ಮಾತುಕತೆ ನಡೆಸಲಾಗಿದೆ. ತಮ್ಮ ತಮ್ಮ ಪ್ರತಿಷ್ಠೆಯನ್ನು ಬದಿಗಿಟ್ಟು ಮುಷ್ಕರವನ್ನು ಕೈಬಿಡಬೇಕು. ನಿಮ್ಮ ನಿಮ್ಮ ಪ್ರತಿಷ್ಠೆಯಿಂದಾಗಿ ರೋಗಿಗಳು ಪರದಾಡುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾನೂನು ಮತ್ತು ವ್ಯವಸ್ಥೆಗಿಂತ ಯಾರೊಬ್ಬರೂ ದೊಡ್ಡವರಲ್ಲ ಎಂಬುದನ್ನು ಅರಿತುಕೊಳ್ಳಬೇಕು. ವೈದ್ಯರು ನಡೆಸುತ್ತಿರುವ ಮುಷ್ಕರದಿಂದಾಗಿ ರೋಗಿಗಳು ಪರದಾಡುವಂತಾಗಿದೆ.ಅವರ ಪರಿಸ್ಥಿತಿಯನ್ನು ಯರೊಬ್ಬರೂ ಅರ್ಥ ಮಾಡಿಕೊಳ್ಳುತ್ತಿಲ್ಲ. ತಪ್ಪು ಯಾರೇ ಮಾಡಿದ್ದರೂ ಕಾನೂನು ಪ್ರಕಾರ ಶೀಕ್ಷೆಯಾಗಲಿದೆ.