ನಾಳೆ ವಿಜಯಶಂಕರ್ ಬಿಜೆಪಿಗೆ ಮರುಸೇರ್ಪಡೆ

ಬೆಂಗಳೂರು,ನ.೪- ವಿಪಕ್ಷ ನಾಯಕ ಸಿದ್ದರಾಮಯ್ಯನವರ ಆಪ್ತರಾದ ಮಾಜಿ ಸಚಿವ ಸಿ.ಹೆಚ್.ವಿಜಯ್ ಶಂಕರ್ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದು ನಾಳೆ ಬಿಜೆಪಿ ಸೇರಲಿದ್ದಾರೆ.

ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ನಾಳೆ ಮಧ್ಯಾಹ್ನ ೩ ಗಂಟೆಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ಸಮ್ಮುಖದಲ್ಲಿ ವಿಜಯಶಂಕರ್ ಬಿಜೆಪಿಗೆ ಮರುಸೇರ್ಪಡೆಯಾಗಲಿದ್ದಾರೆ.

ಲೋಕಸಭೆ ಚುನಾವಣೆ ವೇಳೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದ ವಿಜಯಶಂಕರ್ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ವಿಜಯ್‌ಶಂಕರ್ ಇದೀಗ ಮತ್ತೆ ಮೂಲ ಪಕ್ಷಕ್ಕೆ ವಾಪಾಸಾಗುತ್ತಿದ್ದಾರೆ.

ಬಿಜೆಪಿ ಸೇರ್ಪಡೆಯಾಗುವ ಕುರಿತು ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿದ್ದು, ಇದೀಗ ಕಾಂಗ್ರೆಸ್‌ಗೆ ಗುಡ್ ಬೈ ಹೇಳಿದ್ದಾರೆ.  ಈ ಮೂಲಕ ಉಪಚುನಾವಣೆಯ ಸಮಯದಲ್ಲೇ ಕಾಂಗ್ರೆಸ್‌ಗೆ ಮತ್ತೊಂದು ಶಾಕ್ ಎದುರಾಗಿದ್ದು, ವಿಜಯ್ ಶಂಕರ್ ಬಿಜೆಪಿ ಸೇರ್ಪಡೆಯಿಂದ ಸಿದ್ದರಾಮಯ್ಯನವರಿಗೆ ಹಿನ್ನಡೆ ಎನ್ನಲಾಗುತ್ತಿದೆ.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮೈಸೂರಿನಿಂದ ಕಣಕ್ಕಿಳಿದಿದ್ದ ವಿಜಯ್ ಶಂಕರ್ ಬಿಜೆಪಿಯ ಪ್ರತಾಪ್ ಸಿಂಹ ವಿರುದ್ಧ ಸೋಲನುಭವಿಸಿದ್ದರು.

ರಾಜಕಾರಣಿ ಎಷ್ಟು ವರ್ಷ ಮನೆಯಲ್ಲಿ ಕೂರಲು ಸಾಧ್ಯ ಹೇಳಿ. ಹೀಗಾಗಿ ಬದಲಾವಣೆ ಬಯಸಿ ಅಭಿಮಾನಿಗಳ ಅಭಿಪ್ರಾಯ ಕೇಳುತ್ತಿದ್ದೇನೆ. ಹುಣಸೂರು ಉಪಚುನಾವಣೆ ದೃಷ್ಟಿಯಿಂದ ಇಂತಹ ತೀರ್ಮಾನ ಕೈಗೊಳ್ಳುತ್ತಿಲ್ಲ.

ಒಂದು ರಾಷ್ಟ್ರೀಯ ಪಕ್ಷಕ್ಕೆ ಕಂಡಿಷನ್ ಹಾಕಿ ಸೇರಲು ಆಗಲ್ಲ. ಕಾಂಗ್ರೆಸ್ ಯಾಕೆ ಬಿಟ್ಟೆ, ಅಲ್ಲಿನ ಪರಿಸ್ಥಿತಿ ಏನಾಗಿದೆ ಅನ್ನೋದನ್ನು ವಿವರಿಸುತ್ತೇನೆ ಎಂದು ಈ ಹಿಂದೆ  ವಿಜಯ್‌ಶಂಕರ್ ಹೇಳಿಕೊಂಡಿದ್ದರು.

ಹುಣಸೂರು ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದ್ದು, ವಿಜಯ್ ಶಂಕರ್ ಬಿಜೆಪಿಯ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಅನರ್ಹ ಶಾಸಕ ಹೆಚ್.ವಿಶ್ವನಾಥ್ ಪ್ರತಿನಿಧಿಸುವ ಹುಣಸೂರು ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ